Advertisement

ಪ್ರಾಧಿಕಾರದಲ್ಲಿ ಅಕ್ರಮ ವ್ಯವಹಾರ ನಡೆದಿಲ್ಲ, ಆರೋಪ ಸಾಬೀತು ಪಡಿಸಿದಲ್ಲಿ ರಾಜಿನಾಮೆ :ಅಧ್ಯಕ್ಷ

09:08 PM Jan 09, 2022 | Team Udayavani |

ಹುಣಸೂರು : ಹುಣಸೂರು ನಗರ ಯೋಜನಾ ಪ್ರಾಧಿಕಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಇತ್ತೀಚಿನ ಕೆಡಿಪಿ ಸಭೆಯಲ್ಲಿ ಶಾಸಕ ಎಚ್.ಪಿ.ಮಂಜುನಾಥ್‌ರವರು ಮಾಡಿರುವ ಆರೋಪ ರಾಜಕೀಯ ಪ್ರೇರಿತವೆಂದು ಪ್ರಾಧಿಕಾರದ ಅಧ್ಯಕ್ಷ ಗಣೇಶ್‌ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

Advertisement

ಹುಡಾ ಸದಸ್ಯರೊಡಗೂಡಿ ಜಂಟೀ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರು ಹುಡಾ ವಿರುದ್ದ ಆರೋಪಿಸಿರುವಂತೆ ಗ್ರಾ.ಪಂ.ವ್ಯಾಪ್ತಿಯ ಭೂಮಿಯನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿಲ್ಲ, ಎಲ್ಲಿಂದ ಅರ್ಜಿ ಬರುತ್ತದೋ ಅಲ್ಲಿಗೆ ನಿಯಮಾನುಸಾರ ಪ್ರಾಧಿಕಾರದಿಂದ ಕಳುಹಿಸಿಕೊಡಲಾಗುತ್ತಿದೆ. ಆದರೆ ಹಿಂದಿನದನ್ನು ಉದಾಹರಿಸಿ, ಗ್ರಾ.ಪಂ.ಗೆ ಲಕ್ಷಾಂತರ ರೂ ನಷ್ಟವಾಗುವಂತೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಇದು ಸತ್ಯಕ್ಕೆ ದೂರವಾದ ವಿಚಾರ. ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದಾಗ, ಶಾಸಕರು ನಿಮ್ಮ ವಿರುದ್ದ ಹೇಳಿಕೆ ನೀಡಿಲ್ಲ. 2018ರಲ್ಲಿ ಬೀಜಗನಹಳ್ಳಿ ಗ್ರಾ.ಪಂ.ನ ದೊಡ್ಡ ಹುಣಸೂರು ಸರ್ವೆ ನಂಬರ್ ಭೂಮಿಗೆ ಸಂಬಂಧಿಸಿದ ದಾಖಲಾತಿಯೊಂದಿಗೆ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮಣನಾಯಕರೇ ನಮ್ಮ ಅವಧಿಯಲ್ಲಿ ಆಗಿಲ್ಲ. ಇದು ಹಿಂದಿನದು ಎಂದು ಕೆಡಿಪಿ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ ಶಾಸಕರು 2022 ರವರೆಗೂ ಅನ್ಯಾಯ ನಡೆದಿದೆ ಎಂದು ಆರೋಪಿಸಿದ್ದು, ಹೀಗಾಗಿ ತಾವು ಅಧ್ಯಕ್ಷನಾಗಿ ಉತ್ತರ ನೀಡುತ್ತಿದ್ದೇನೆಂದರು.

ಅಕ್ರಮ ಸಾಬೀತಾದಲ್ಲಿ ರಾಜಿನಾಮೆಗೂ ಸಿದ್ದ:
ತಾವು ಕಳೆದ ಮಾರ್ಚ್ ನಲ್ಲಿ ಅಧಿಕಾರವಹಿಸಿಕೊಂಡಿದ್ದು. ಯಾವುದೇ ಲೋಪವಿಲ್ಲದೆ ಕಾರ್ಯನಿರ್ವಹಿಸಿದ್ದೇನೆಂದು ಸಮರ್ಥಿಸಿಕೊಂಡು ತಮ್ಮಿಂದ ಅಕ್ರಮ ನಡೆದಿದ್ದಲ್ಲಿ ತಾವು ರಾಜಿನಾಮೆ ನೀಡಲು ಸಿದ್ದ, ಆರೋಪ ಸಾಬೀತುಪಡಿಸಲು ವಿಫಲವಾದಲ್ಲಿ ಶಾಸಕರು ಸಿದ್ದರಿರುವರೇ ಎಂದು ಪ್ರಶ್ನಿಸಿದರು.

ದಾಖಲೆ ಬಿಡುಗಡೆ ಮಾಡಲಿ: ಪ್ರಾಧಿಕಾರದ ಸಭೆಯಲ್ಲಿ ನಗರಸಭೆ ಪ್ರತಿನಿಧಿ ಹಾಗೂ ಆಯುಕ್ತರು ಭಾಗವಹಿಸುತ್ತಾರೆ. ಯಾವುದೇ ವಿಷಯವಿದ್ದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಇದು ತಿಳಿದಿದ್ದರೂ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿ, ಅವ್ಯವಹಾರ ನಡೆದಿದ್ದಲ್ಲಿ ಸೂಕ್ತ ದಾಖಲಾತಿ ನೀಡಲಿ ಎಂದು ಸವಾಲೆಸೆದರು.

Advertisement

ಇದನ್ನೂ ಓದಿ : ಹುಬ್ಬಳ್ಳಿ :ಪತಿ ನಡೆಸುತ್ತಿದ್ದ ಲಾಡ್ಜ್ ನಲ್ಲೇ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಪತ್ನಿ

ಶಾಸಕರು ಹುಡಾಗೆ ಸದಸ್ಯರಲ್ಲ:
ಯೋಜನಾ ಪ್ರಾಧಿಕಾರವು ಸ್ವಾಯತ್ತ ಸಂಸ್ಥೆಯಾಗಿದ್ದು. ಶಿಷ್ಟಾಚಾರದ ಪ್ರಕಾರ ಪ್ರಾಧಿಕಾರಕ್ಕೆ ಶಾಸಕರು ಸದಸ್ಯರಲ್ಲ, ಆದರೂ ಶಾಸಕರನ್ನು ತಾವು ನಗರದ ಅಭಿವೃದ್ದಿಗಾಗಿ ಹಾಗೂ ಸಹೋದರರಂತೆ ವಿಶ್ವಾಸಕ್ಕೆ ತೆಗೆದುಕೊಂಡು ನಾನೇ ಖುದ್ದಾಗಿ ಅವರ ಬಳಿ ಚರ್ಚಿಸಿದ್ದೇನೆ. ಅಲ್ಲದೆ ಜ.10ರ ಸೋಮವಾರ ನಡೆಯುವ ಸಭೆಗೂ ಆಹ್ವಾನಿಸಿದ್ದೇನೆ. ಕಚೇರಿ ಸ್ಥಳಾಂತರಿಸುವ ಬಗ್ಗೆ ಶಾಸಕರ ಬಳಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಚರ್ಚಿಸಲು ಹೋದ ವೇಳೆ ಹೇಗೆ ಸ್ಥಳಾಂತರ ಮಾಡುತ್ತೀಯಾ ಎಂದು ಗದರಿಸಿ ಕಳುಹಿಸಿದ್ದಾರೆ.

ರಾಜಕೀಯ ಲಾಭಕ್ಕೆ ಆರೋಪ ತರವಲ್ಲ: ಇನ್ನು ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿಸುವ ಬದಲು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ವರ್ತನೆ ಬದಲಾಯಿಸಿಕೊಳ್ಳಬೇಕು. ರಾಜಕೀಯ ಲಾಭಕ್ಕೋಸ್ಕರ ಪ್ರಾಧಿಕಾರದ ವಿರುದ್ದ ಆರೋಪ ಸಲ್ಲದು.ಶಾಸಕರಿಗೆ ಗೌರವ ಕೊಡುತ್ತೇವೆ. ಹೀಗೆ ಮುಂದುವರೆದರೆ ನಮಗೂ ರಾಜಕೀಯ ಮಾಡಲು ಬರುತ್ತದೆ. ಇಂತಹ ದಬ್ಬಾಳಿಕೆಗೆ ಹೆದರುವುದಿಲ್ಲವೆಂದರು.

ಸುದ್ದಿಗೋಷ್ಟಿಯಲ್ಲಿ ಪ್ರಾಧಿಕಾರದ ಸದಸ್ಯರಾದ ನಾರಾಯಣ್, ಗೋವಿಂದನಾಯಕ, ರವಿಕುಮಾರ್ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next