ಹೊನ್ನಾಳಿ: ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವ ಕಾರ್ಯದಲ್ಲಿ ಗ್ರಾಪಂನಿಂದ ಜಿಪಂ ಹಂತದವರೆಗಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬೆಂಬಲಕ್ಕೆ ನಿಂತು ಶೌಚಾಲಯಗಳನ್ನು ನಿರ್ಮಿಸಲು
ಕೈಗೊಂಡ ಕ್ರಮದ ಫಲವಾಗಿ ದಾವಣಗೆರೆ ಜಿಲ್ಲೆ ರಾಜ್ಯದಲ್ಲಿ ಉತ್ತಮ ಸ್ಥಾನಕ್ಕೆ ಬಂದಿದೆ ಎಂದು ಜಿಪಂ ಸದಸ್ಯ ಜಿ. ವೀರಶೇಖರಪ್ಪ ಪ್ರಶಂಸೆ ವ್ಯಕ್ತಪಡಿಸಿದರು.
ತಾಲೂಕಿನ ಹುಣಸಘಟ್ಟ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅವರು ಹೊನ್ನಾಳಿ ತಾಲೂಕಿನಲ್ಲಿ ಹುಣಸಘಟ್ಟ 19ನೇ ಬಯಲು ಬಹಿರ್ದೆಸೆ ಮುಕ್ತ ಗ್ರಾಮವೆಂದು ಘೋಷಣೆ ಮಾಡಿ ಮಾತನಾಡಿದರು. ಗ್ರಾಮಗಳಲ್ಲಿ ಪ್ರತಿಯೊಂದು ಕುಟುಂಬ ಶೌಚಾಲಯವನ್ನು ನಿರ್ಮಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವ ಸ್ಥಿತಿ ತಲುಪಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಡಾ| ಶಿವಪ್ಪ ಹುಲಿಕೇರಿ ಮಾತನಾಡಿ, ಹುಣಸಘಟ್ಟ ಗ್ರಾಪಂ ವ್ಯಾಪ್ತಿಯ 6 ಗ್ರಾಮಗಳಲ್ಲಿ 2014ರಿಂದ ಈವರೆಗೆ ಒಟ್ಟು-580 ಫಲಾನುಭವಿಗಳನ್ನು ಗುರುತಿಸಿ ಅವರೆಲ್ಲರ ಮನವೊಲಿಸುವ ಮೂಲಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುವಂತೆ ಪ್ರೇರೆಪಿಸಿದ ಫಲವಾಗಿ ಹುಣಸಘಟ್ಟ ಗ್ರಾಮ ಬಯಲು ಬಹಿರ್ದೆಸೆ ಮುಕ್ತ ಗ್ರಾಮವೆಂದು ಘೋಷಣೆಯಾಗಲು ಸಾಧ್ಯವಾಯಿತು ಎಂದರು.
ತಾಪಂ ಸದಸ್ಯ ಕೆ.ಎಲ್. ರಂಗಪ್ಪ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಮಹಮದ್ ಅಮಾನುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ 580 ಶೌಚಾಲಯಗಳ ನಿರ್ಮಾಣಕ್ಕೆ ಕಾರಣರಾದ ಪಿಡಿಒ ಪರಮೇಶ್ವರ್ ಸೇರಿದಂತೆ 5 ಜನರಿಗೆ ಗ್ರಾಪಂ ವತಿಯಿಂದ ಸನ್ಮಾನಿಸಲಾಯಿತು. ಎಪಿಎಂಸಿ ನಿರ್ದೇಶಕ ಜಿ.ವಿ.ಎಂ. ರಾಜು, ಗ್ರಾಪಂ ಉಪಾಧ್ಯಕ್ಷೆ
ವಸಂತಮ್ಮ ಇತರರಿದ್ದರು.