ಬಿಜೈ: ಮಂಗಳೂರಿನ ಕೆಎಸ್‌ಆರ್ ಟಿಸಿ ಬಸ್ ನಿಲ್ದಾಣಕ್ಕೆ ಬಸ್‌ಗಳು ಪ್ರವೇಶಿಸುವ ಸ್ಥಳದಲ್ಲಿರುವ ಹಂಪ್ಸ್‌ಗಳು (ರಸ್ತೆ ಉಬ್ಬುಗಳು) ಸವೆದು ಹೋಗಿ ಅಪಾಯಕಾರಿಯಾಗಿ ಪರಿಣಮಿಸಿವೆ.
ಬಸ್‌ಗಳು ನಿಲ್ದಾಣಕ್ಕೆ ಆಗಮಿಸು ವಾಗ ವೇಗ ಕಡಿಮೆಗೊಳಿಸಬೇಕೆಂಬ ಉದ್ದೇಶದಿಂದ ಎರಡು ಹಂಪ್ಸ್ ಗಳನ್ನು ಅಳವಡಿಸಲಾಗಿದೆ. ಇದು ಸ್ವಲ್ಪ ಇಳಿಜಾರಿನ ಪ್ರದೇಶವೂ ಆಗಿದೆ. ಬಸ್ ಗಳ ಆಗಮನ ಮತ್ತು ನಿರ್ಗಮನ ಸ್ಥಳವಾಗಿರುವುದರಿಂದ ಇಲ್ಲಿ ಹಂಪ್ಸ್‌ಗಳ ಅಗತ್ಯವೂ ಇದೆ. ಆದರೆ ಈಗ ಇರುವ ಹಂಪ್ಸ್ ಗಳು ಬಸ್‌ಗಳ ಓಡಾಟದಿಂದ ಸವೆದಿದೆ, ಮಾತ್ರವಲ್ಲದೆ ಹಂಪ್ಸ್‌ನ ಅಂಚು ಕಿತ್ತು ಹೋಗಿದೆ. ಹಾಗಾಗಿ ಈ ಹಂಪ್ಸ್ ಗಳ ಮೇಲಿಂದ ಬಸ್‌ಗಳು ಚಲಿಸುವಾಗ ಮೇಲಕ್ಕೆ ಹಾರಿದಂತಾಗುತ್ತದೆ.
ನಿಲ್ದಾಣ ಪ್ರವೇಶಿಸುವ ಸಂದರ್ಭದಲ್ಲಿ ಬಹುತೇಕ ಪ್ರಯಾಣಿಕರು ತಮ್ಮ ಸೀಟಿನಿಂದ ಎದ್ದು ನಿಂತು ಇಳಿಯಲು ಅಣಿಯಾಗಿರುತ್ತಾರೆ. ಇದೇ ಸಂದರ್ಭ ದಲ್ಲಿ ಹಂಪ್ಸ್ ಮೇಲೆ ಬಸ್ ಹಾರಿದ ಅನುಭವವಾಗಿ ಪ್ರಯಾಣಿಕರು ನಿಯಂ ತ್ರಣ ಕಳೆದುಕೊಳ್ಳುತ್ತಿದ್ದಾರೆ. ಸೀಟಿನಲ್ಲಿ ಕುಳಿತವರು ಕೂಡ ಮೇಲಕ್ಕೆ ಹಾರಿ ಬೀಳುತ್ತಾರೆ. ಚಾಲಕರು ಹಂಪ್ಸ್‌ನ್ನು ಗಮನಿಸಿ ಬಸ್‌ನ ವೇಗ ತಗ್ಗಿಸುತ್ತಾರೆ. ಆದರೆ ಹಂಪ್ಸ್ ಸರಿಯಾಗಿಲ್ಲದ ಕಾರಣ ತೊಂದರೆಯಾಗುತ್ತಿದೆ. ಇಲ್ಲಿ ವೈಜ್ಞಾನಿಕ ರೀತಿಯ ಹಂಪ್ಸ್ ರಚನೆ ಅಗತ್ಯವಾಗಿದೆ.