ಕುಂದಾಪುರ: ಹೊಸಂಗಡಿಯಲ್ಲಿ ಮೂಡ್ಲಕಟ್ಟೆ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಪ್ರಿಯಾ ಹೋಗುತ್ತಿದ್ದಾಗ ನಾಯಿಮರಿ ಅಪಘಾತದಲ್ಲಿ ಎರಡೂ ಕಾಲು ಕಳೆದುಕೊಂಡದ್ದನ್ನು ಕಂಡು ಆಕೆ ಅದಕ್ಕೆ ಸ್ಪಂದಿಸಿದ ಮಾನವೀಯ ಘಟನೆ ಇಂದು ಆಕೆಯನ್ನು ಸಾರ್ವತ್ರಿಕ ಪ್ರಶಂಸೆಗೆ ಈಡು ಮಾಡಿದೆ.
ಹೊಸಂಗಡಿಯ ರಸ್ತೆ ಬದಿಯಲ್ಲಿ 3-4 ತಿಂಗಳ ವಯಸ್ಸಿನ ನಾಯಿಮರಿ ಅಪಘಾತದಲ್ಲಿ ಹಿಂದಿನ ಎರಡೂ ಕಾಲುಗಳನ್ನು ಕಳೆದುಕೊಂಡ ಇನ್ನೇನು ಕೆಲವೇ ದಿನಗಳಲ್ಲಿ ಕೊನೆಯ ಕ್ಷಣ ಎಣಿಸುವುದರಲ್ಲಿತ್ತು. ಮುಂಭಾಗದ ಕಾಲುಗಳಿಂದ ಮಾತ್ರ ಓಡಾಡುತ್ತಿತ್ತು.
ಅದೇ ದಾರಿಯಲ್ಲಿ ಸಂಚರಿಸುವ ಪ್ರಿಯಾ ನಾಯಿಯ ಶೋಚನೀಯ ಸ್ಥಿತಿ ಕಂಡು ಮರುಗಿದರು. ನಾಯಿಗೆ ಪ್ರಥಮ ಚಿಕಿತ್ಸೆ ನೀಡಿದ ಈಕೆ ಮನೆಯಲ್ಲೇ ಉಳಿಸಿಕೊಂಡು ಇದರ ಆರೈಕೆ ಮಾಡಿದರು. ಚಿಕಿತ್ಸೆಗೆ ಸ್ಪಂದಿಸಿದ ನಾಯಿ ಚೇತರಿಕೆ ಕಂಡರೂ ಓಡಾಡಲು ಆಗುತ್ತಿರಲಿಲ್ಲ. ಕಾಲು ಹಾಗೂ ಸೊಂಟದ ಸ್ವಾಧೀನ ತಪ್ಪಿದ್ದರಿಂದ ನಾಯಿ ತೆವಳಿಕೊಂಡೇ ಸಾಗುತ್ತಿತ್ತು.
ಪ್ರಿಯಾ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು ನಾಯಿ ಮಾಮೂಲಿಯಂತೆ ಓಡಾಡುವಂತಾಗಬೇಕು ಎಂಬ ಉದ್ದೇಶದಿಂದ ಎರಡು ಉದ್ದದ ಯುಪಿವಿಸಿ ಪೈಪ್ ಬಳಸಿ ಹೊಟ್ಟೆ ಕೆಳಭಾಗಕ್ಕೆ ವೀ ಬೆಂಡ್ ಮತ್ತು ಹಿಂಭಾಗದಲ್ಲಿ ಬೆಂಡ್ ಪೈಪ್ ಜೋಡಿಸಿ ಪಶು ಆಸ್ಪತ್ರೆಯಲ್ಲಿ ಕೃತಕ ಗರ್ಭಧಾರಣೆ ಮಾಡಲು ಅಳವಡಿಸುವ ಮಾದರಿಯಂತೆ ಮಾಡಿ, ಸೊಂಟದ ಬಳಿ ಎರಡೆರಡು ಕಡೆ ಪಟ್ಟಿಗೆ ಮತ್ತೆರಡು ಪೈಪ್ ಜೋಡಿಸಿದರು.
ಸೊಂಟದ ಬಳಿ ನೆಲಕ್ಕೆ ಮುಖಮಾಡಿದ ಪೈಪಿಗೆ ಎರಡೂ ಕಡೆ ತೂತು ಕೊರೆದು ಬೋಲ್ಟ್ ನೆಟ್ ಅಳವಡಿಸಿ ಗಾಲಿ ಜೋಡಿಸಿ, ಕತ್ತಿನ ಬಳಿ ಬೆಲ್ಟ್ ಹಾಕಿ ಎದೆ ಭಾಗದಲ್ಲಿ ಬಿಗಿದು, ಹಿಂಗಾಲು ಬೆನ್ನಿನ ಹಿಂದಿನ ಪೈಪಿಗೆ ತಾಗಿಕೊಳ್ಳುವಂತೆ ಮಾಡಿದರು. ಗಾಲಿ ಗಾಡಿ ನಾಯಿಗೆ ಕಟ್ಟಿ ಓಡಾಟ ಅಭ್ಯಾಸ ಕೂಡ ಮಾಡಿಸಿದರು. ನಾಯಿ ಈಗ ಗಾಲಿ ಗಾಡಿಯಲ್ಲಿ ಎಲ್ಲೆಂದರಲ್ಲಿ ಖುಷಿ ಖುಷಿಯಾಗಿ ಸಂಚರಿಸುತ್ತಿದೆ.
ನಾಯಿಮರಿಗೆ ಅಪಘಾತದಲ್ಲಿ ಬೆನ್ನಿನ ಭಾಗ ಹಾಗೂ ಎರಡೂ ಕಾಲು ನಿಷ್ಕ್ರಿಯವಾಗಿತ್ತು. ಕಾಲುಗಳು ಸೋಂಕಿಗೆ ಒಳಗಾಗಿದ್ದಲ್ಲದೇ ಗಾಯಗಳಾಗಿತ್ತು. ಒಂದು ದಿನ ಆಹಾರ ಕೊಟ್ಟದ್ದನ್ನೇ ನೆನಪಿಸಿ ತೀಕ್ಷ್ಣ ಶಕ್ತಿ ಮೂಲಕ ನನ್ನ ಮನೆ ಗುರುತಿಸಿ ಬಾಗಿಲ ಬಳಿ ಬಂದಿತ್ತು. ಪಶುವೈದ್ಯರ ಬಳಿಗೆ ಕರೆದೊಯ್ದು ಉಪಚರಿಸಿದೆ. ಹಿಂಭಾಗದ ಸ್ವಾಧೀನ ಮರಳುವುದು ಕಷ್ಟ ಎಂದರು. ನಾಯಿಗೆ ಮತ್ತೆ ಅದರ ಬದುಕು ಕಟ್ಟಿಕೊಡಲು ಗಾಡಿ ಮಾಡಿದೆ.
– ಪ್ರಿಯಾ ಹೊಸಂಗಡಿ, ವಿದ್ಯಾರ್ಥಿನಿ