Advertisement

ಕಾನೂನಿನೊಂದಿಗೆ ಮಾನವೀಯತೆ: ಪೊಲೀಸರ ಸಮ್ಮತಿ

02:15 PM Feb 16, 2018 | Team Udayavani |

ಸುಳ್ಯ : ತಾಲೂಕಿನಲ್ಲಿ ಉದ್ಭವಿಸಿರುವ ಮರಳು ಸಮಸ್ಯೆ ಕುರಿತು ಪೊಲೀಸ್‌ ಇಲಾಖಾಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಧ್ಯೆ ದೀರ್ಘ‌ ಚರ್ಚೆ ನಡೆದು, ಕಾನೂನು ಪಾಲನೆಯ ಜತೆಗೆ ಅಗತ್ಯದ ಸಂದರ್ಭದಲ್ಲಿ ಮಾನವೀಯತೆಗೂ ಪ್ರಾಧಾನ್ಯ ನೀಡುವುದಾಗಿ ಪೊಲೀಸ್‌ ಇಲಾಖೆ ಸಮ್ಮತಿಸಿದ ಘಟನೆ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು. ತಾ.ಪಂ. ಸಾಮಾನ್ಯ ಸಭೆ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ಗುರುವಾರ ನಡೆಯಿತು.

Advertisement

ವಿಷಯ ಪ್ರಸ್ತಾವಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ತಾಲೂಕಿನಲ್ಲಿ ಮನೆಕಟ್ಟಲು, ಸರಕಾರಿ ಕಾಮಗಾರಿಗಳಿಗೆ ಮರಳಿನ ಅಭಾವ ಸೃಷ್ಟಿ ಆಗಿದೆ. ಇಲ್ಲಿ ಪ್ರತಿ ಠಾಣೆಯ ಪೊಲೀಸರು ಮರಳು ಸಾಗಿಸುವವರ ಮೇಲೆ ಪ್ರಕರಣ ದಾಖಲಿಸುತ್ತಾರೆ. ಮರಳು ದಂಧೆಕೋರರ ಬಗ್ಗೆ ಕ್ರಮ ಕೈಗೊಳ್ಳುವುದಕ್ಕೆ ನಮ್ಮದೇನೂ ಆಕ್ಷೇಪ ಇಲ್ಲ. ಆದರೆ ಬಡವರು ಅಗತ್ಯಕ್ಕೆ ಕೊಂಡುಹೋಗುವ ಮರಳಿನ ಮೇಲೆ ಕಾನೂನು ಪಾಲನೆಗಿಂತಲೂ, ಮಾನವೀಯತೆ ಪ್ರದರ್ಶನ ಆವಶ್ಯಕ ಎಂದರು.

ಇದಕ್ಕೆ ಉತ್ತರಿಸಿದ ಸಿಪಿಐ ಸತೀಶ್‌ ಕುಮಾರ್‌, ಕಾನೂನಿಗೆ ಬಡವರು, ಶ್ರೀಮಂತರು ಎಂಬ ಭೇದ-ಭಾವ ಇಲ್ಲ. ನಾವು ಮೇಲಧಿಕಾರಿಗಳ ನಿರ್ದೇಶನದಂತೆ ಪರ್ಮಿಟ್‌ ಇರದೆ ಮರಳು ಕೊಂಡು ಹೋಗು ವವರ ಮೇಲೆ ಕ್ರಮ ಕೈಗೊಂಡಿದ್ದೇವೆ. ಇಲ್ಲಿ ಅದಕ್ಕೆ ಅವಕಾಶ ಕೊಡಬೇಕು ಎಂದಾದರೆ ಮೇಲಧಿಕಾರಿಗಳಿಂದ ಲಿಖಿತ ಆದೇಶ ಬರಬೇಕು ಎಂದರು. ಉಪಾಧ್ಯಕ್ಷೆ ಶುಭದಾ ಎಸ್‌. ರೈ ಮಾತನಾಡಿ, ಪಿಕಪ್‌ನಲ್ಲಿ ಮರಳು ಸಾಗಿಸುವವರ ಮೇಲೂ ಬೆಳ್ಳಾರೆ ಠಾಣೆಯಲ್ಲಿ ಕೇಸು ದಾಖಲಾಗುತ್ತದೆ. ಅಂತಹ ಕೆಟ್ಟತನದ ಪ್ರದರ್ಶನವೇಕೆ ಎಂದು ಪ್ರಶ್ನಿಸಿದರು.

ಉತ್ತರಿಸಿದ ಬೆಳ್ಳಾರೆ ಠಾಣೆ ಸಿಪಿಐ ಈರಯ್ಯ, ಒಳ್ಳೆಯವರು, ಕೆಟ್ಟವರು ಎಂಬ ನಿಮ್ಮ ಮಾತನ್ನು ಗೌರವಿಸುತ್ತೇನೆ. ಇಲ್ಲಿ ನಾವು ಕಾನೂನು ಪಾಲಿಸಿದ್ದೇವೆ. ನಮಗೆ ದೂರು ಬಂದಾಕ್ಷಣ ಆ ಸ್ಥಳಕ್ಕೆ ತೆರಳಿ ಖಾತರಿಪಡಿಸಿಕೊಂಡು, ವಶಕ್ಕೆ ಪಡೆದಿದ್ದೇವೆ. ಹಾಗಂತ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸದೆ, ಆರೋಪಿಯನ್ನಾಗಿ ಮಾತ್ರ ಪರಿಗಣಿಸಿದ್ದೇವೆ. ಇಲ್ಲಿ ನಮಗೆ ಕಾನೂನು ಮುಖ್ಯ ಎಂದರು.

ಸುಳ್ಯ ಠಾಣಾ ಎಸ್‌.ಐ. ಮಂಜುನಾಥ್‌, ತಾಲೂಕಿನಲ್ಲಿ ನಿತ್ಯ 2ರಿಂದ 3 ಲೋಡ್‌ ಸಾಕು. ಅದನ್ನು ಪರ್ಮಿಟ್‌ ಆಧಾರದಲ್ಲಿ ಬರುತ್ತಿರುವ ಮರಳು ಲಾರಿಯಿಂದ ಪಡೆದುಕೊಳ್ಳಬಹುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ರಾಧಾಕೃಷ್ಣ ಬೊಳ್ಳೂರು, ನಾವು ಕೇರಳ, ಮೈಸೂರು, ಬೆಂಗಳೂರಿಗೆ ಹೋಗುವ ಮರಳಿಗೆ ಅವಕಾಶ ಕೊಡಿ ಎಂದು ಕೇಳಿದಲ್ಲ. ಈ ತಾಲೂಕಿನ ಜನರಿಗೆ ಇಲ್ಲಿನ ನದಿ, ಹೊಳೆಯಿಂದ ಮರಳೆತ್ತಲು ಅವಕಾಶ ಕೊಡಬೇಕು ಅನ್ನುವುದು ನಮ್ಮ ಬೇಡಿಕೆ ಎಂದರು. 

Advertisement

ಸಿಪಿಐ ಸತೀಶ್‌ ಕುಮಾರ್‌, ಇಲ್ಲಿ ದೂರು ನೀಡುವವರು ಕೂಡ ಸ್ಥಳೀಯರೆ. 100 ಜನರಲ್ಲಿ 99 ಜನ ಮರಳು ಸಾಗಾಟಕ್ಕೆ ಅವಕಾಶ ನೀಡಿ ಎನ್ನುವಾಗ, ದೂರು ನೀಡಿದರೆ, ನಾವು ಅದನ್ನು ತಳ್ಳಿ ಹಾಕುವಂತಿಲ್ಲ. ನಮಗೆ ಪ್ರತಿ ವ್ಯಕ್ತಿಯೂ ಮುಖ್ಯ. ಮರಳು ಅಭಾವ ಇರುವ ಕಡೆಗಳಿಂದಲೇ, ದೂರು ಬಂದಾಗ ನಾವು ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು.

ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ ಮಾತನಾಡಿ, ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಪ್ರತಿಭಟನೆ ಮಾಡಲು ನಮಗೆ ಸಾಮರ್ಥ್ಯ ಇತ್ತು. ಆದರೆ ನಾವು ಇಂದಿನ ಸಭೆಯಲ್ಲಿ ನಿಮ್ಮ ನಿಲುವಿಗೆ ಕಾದಿದ್ದೇವೆ. ಇಲ್ಲಿ ಕಾನೂನು ಪಾಲನೆಯ ಜತೆಗೆ ಅಗತ್ಯ ಇರುವ ಕಡೆಗಳಲ್ಲಿ ಮರಳು ಕೊಂಡೊಯ್ಯಲು ಅವಕಾಶ ನೀಡಬೇಕು ಎಂದರು. ಸದಸ್ಯ ಅಬ್ದುಲ್‌ ಗಫೂರ್‌ ಮಾತನಾಡಿ, ಈ ತಿಂಗಳೊಳಗೆ ಸರಕಾರಿ ಕಾಮಗಾರಿಗಳು ಪೂರ್ಣಗೊಳ್ಳಬೇಕಿದೆ. ಮರಳಿನ ಅಭಾವ ಸೃಷ್ಟಿಯಾದರೆ, ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪೊಲೀಸ್‌ ಇಲಾಖೆ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.

ದೀರ್ಘ‌ ಕಾಲ ಚರ್ಚೆ ನಡೆದ ಅನಂತರ ಉತ್ತರಿಸಿದ ಸತೀಶ್‌ ಕುಮಾರ್‌, ಕಾನೂನು ಪಾಲನೆಯ ಜತೆಗೆ, ಆವಶ್ಯಕ ಸಂದರ್ಭದಲ್ಲಿ ಮಾನವೀಯತೆಯನ್ನು ತೋರಲು ಎಲ್ಲ ಠಾಣಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಆದರೆ ಮಾರಾಟ ಉದ್ದೇಶದಿಂದ ಸಾಗಿಸುವ ಮರಳಿನ ಮೇಲೆ ಕಠಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ತಹಶೀಲ್ದಾರ್‌ ಕುಂಞಮ್ಮ, ಇಓ ಮಧು ಕುಮಾರ್‌, ಎಸಿಎಫ್‌ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.

ಸುದಿನ ವರದಿ ಪ್ರತಿಧ್ವನಿ
ತಾಲೂಕಿನ 680 ಮನೆಗಳಿಗೆ ವಿದ್ಯುತ್‌ ಇಲ್ಲದಿರುವ ಬಗ್ಗೆ ಉದಯವಾಣಿಯ ಸುದಿನಲ್ಲಿ ಪ್ರಕಟಗೊಂಡ ವರದಿಯನ್ನು ಪ್ರಸ್ತಾವಿಸಿದ ವಿಪಕ್ಷ ಸದಸ್ಯ ಅಶೋಕ್‌ ನೆಕ್ರಾಜೆ, ವಿದ್ಯುತ್‌ ರಹಿತ ಮನೆಗಳು ಬಗ್ಗೆ ‘ಉದಯವಾಣಿ’ಯಲ್ಲಿ ಸಚಿತ್ರ ವರದಿ ಬಂದಿದೆ. ಅದರಲ್ಲೂ ಸಂಸದರ ಆದರ್ಶ ಗ್ರಾಮ ಬಳ್ಪದಲ್ಲಿಯೇ 8 ಮನೆಗಳಿಗೆ ವಿದ್ಯುತ್ತಿಲ್ಲ. ಈ ಬಗ್ಗೆ ಮೆಸ್ಕಾಂ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿ, ವಿದ್ಯುತ್‌ ರಹಿತ ಮನೆಗಳಿರುವುದು ನಿಜ. ಕೇಂದ್ರ ದೀನ್‌ ದಯಾಳ್‌ ಉಪಾಧ್ಯಾಯ ಯೋಜನೆಯಡಿ ವಿದ್ಯುತ್‌ ಕಲ್ಪಿಸಲು ಆಯಾ ಗ್ರಾ.ಪಂ. ಗಳಿಂದ ಪಟ್ಟಿ ಪಡೆದುಕೊಂಡು ಕ್ರಿಯಾಯೋಜನೆ ತಯಾರಿಸಿ, ಈಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಉತ್ತರಿಸಿದರು.

ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ, ಕ್ರಿಯಾ ಯೋಜನೆಗೆ ಟೆಂಡರ್‌ ಆಗಿ 6 ತಿಂಗಳು ಕಳೆದಿದೆ. ಆಲೆಟ್ಟಿ ಗ್ರಾಮ ಬಿಟ್ಟರೆ ಬೇರೆ ಕಡೆ ಕಾಮಗಾರಿ ಆರಂಭವಾಗಿಲ್ಲ. ಏಕೆ ಈ ವಿಳಂಬ ಎಂದು ಪ್ರಶ್ನಿಸಿದರು. ಉತ್ತರಿಸಿದ ಅಧಿಕಾರಿ, ಜಿಲ್ಲಾ ಮಟ್ಟದ ಸಭೆಯಲ್ಲಿ ಕಾಮಗಾರಿ ವೇಗಕ್ಕೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next