Advertisement

ಭಕ್ತಿಯಿಂದ ಮನುಷ್ಯತ್ವಪ್ರಾಪ್ತಿ: ನಾಯಕ

11:45 AM Jul 14, 2018 | |

ವಿಜಯಪುರ: ಮನುಷ್ಯನ ಜೀವನದಲ್ಲಿ ಭಕ್ತಿ ಮಾರ್ಗ ಅತ್ಯಂತ ಅವಶ್ಯವಾಗಿದ್ದು, ಇದರಿಂದ ಪರೋಪಕಾರ ಗುಣ ಮೇಳೈಸಲು ಸಾಧ್ಯ. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಪರೋಕಾರ ಮಾಡಿದಾಗ ಮಾತ್ರ ನಾವೆಲ್ಲ ನಿಜವಾದ ಮನುಷ್ಯರಾಗಲು ಸಾಧ್ಯ ಎಂದು ಕೇಂದ್ರ ಆಯುಷ್‌ ಸಚಿವ ಶ್ರೀಪಾದ ಯಶೋ ನಾಯಕ ಅಭಿಪ್ರಾಯಪಟ್ಟರು.

Advertisement

ಶುಕ್ರವಾರ ಬಬಲೇಶ್ವರ ತಾಲೂಕಿನ ಸೋಮದೇವರ ಹಟ್ಟಿ ಗ್ರಾಮದಲ್ಲಿ ಜರುಗಿದ ಮಾತಾ ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಕ್ತಿ ಸಾಗರ ಹಾಗೂ ಭಕ್ತ ಸಾಗರದ ಸಮಾಗಮವಿದ್ದಂತೆ ಪರೋಪಕಾರ, ಕಷ್ಟದಲ್ಲಿರುವ ಅಸಾಹಯಕರಿಗೆ ನೆರವಿನ ಹಸ್ತ ಚಾಚುವ ಸಹಕಾರ ಮನೋಭಾವ, ಪ್ರೀತಿ, ಭಕ್ತಿ, ಕರುಣೆ ಮನಸ್ಸುಗಳಿಂದ ಮಾಡುವ ಪ್ರತಿ ಸೇವೆಯೂ ದುರ್ಗಾದೇವಿ ಪ್ರೀತಿಗೆ ಪಾತ್ರವಾಗುತ್ತದೆ. ಈ ಕ್ತಿದೇವಿಯ ಪವಿತ್ರ ಜಾತ್ರೆಯಲ್ಲಿ ಭಾಗವಹಿಸುವ ಭಾಗ್ಯ ಭಕ್ತರಿಗೆ ದೊರಕಿದ್ದೆ ಭಕ್ತಿ ಮಾರ್ಗ, ದುರ್ಗಾದೇವಿ ದರ್ಶನದಿಂದ ಪಾಪಗಳು ದೂರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು. 

ಒಂದೆಡೆ ಭಕ್ತಿಯ ಸಾಗರದ ಪ್ರವಾಹ, ಮತ್ತೂಂದೆಡೆ ಭಕ್ತ ಸಾಗರ, ಸೋಮದೇವರ ಹಟ್ಟಿಯಲ್ಲಿ ನಡೆಯುವ ಶಕ್ತಿದೇವತೆ ದುರ್ಗಾದೇವಿಯ ಸಂಭ್ರಮದ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಈ ವೈಭವ ಕಣ್ತುಂಬಿಕೊಳ್ಳಲು ಇಲ್ಲಿ ಸೇರುವ ನೀವೆ ಧನ್ಯರು. ಜಾತ್ರೆಯಲ್ಲಿ ಪಾಲ್ಗೊಂಡು ಪುಣ್ಯದ ಅಕೌಂಟ್‌ ತೆರೆದಿದ್ದೀರಿ. ಬ್ಯಾಂಕ್‌ ಅಕೌಂಟ್‌ನಲ್ಲಿ ಹಣ ಇರಿಸುವುದು ಮುಖ್ಯವಲ್ಲ, ಉತ್ತಮ ಕಾರ್ಯಕ್ರಮಗಳನ್ನು ಮಾಡಿ, ಇಂಥ ಜಾತ್ರೆಗಳಲ್ಲಿ ಪಾಲ್ಗೊಂಡು ಸೇವೆಯ ಅಕೌಂಟ್‌ನಲ್ಲಿ ಭಕ್ತಿಯ ಸಂಗ್ರಹ ಇರಿಸಿದರೆ ಅವನೇ ನಿಜವಾವ ಮನುಷ್ಯ ಎಂದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗೋವಾ ವಿಧಾನಸಭೆ ಉಪ-ಸಭಾಪತಿ ಮೈಲ್‌ ಲೋಬೋ ಮಾತನಾಡಿ, ನಾನು ಫುಟ್ಬಾಲ್‌ ಅಭಿಮಾನಿ ಆಗಿರುವುದರಿಂದ ಫುಟ್‌ಬಾಲ್‌ ವಿಶ್ವಕಪ್‌ ಮ್ಯಾಚ್‌ ನೋಡಲು ರಷ್ಯಾ ದೇಶಕ್ಕೆ ತೆರಳಿದ್ದೆ. ಇದೀಗ ಅಂತಿಮ ಪಂದ್ಯದ ಪ್ರದರ್ಶನವೂ ಇತ್ತು. ಆದರೆ
ದುರ್ಗಾದೇವಿಯ ದರ್ಶನಾಶೀರ್ವಾದಕ್ಕಿಂತ ಫುಟ್‌ಬಾಲ್‌ ದೊಡ್ಡದಲ್ಲ ಎಂದು ಭಾವಿಸಿ, ರಷ್ಯಾದಿಂದ ಸೋಮದೇವರ ಹಟ್ಟಿಗೆ ಆಗಮಿಸಿದ್ದೇನೆ ಎಂದರು.

Advertisement

ಗೋವಾ ವಸತಿ ಸಚಿವ ಜಯೇಶ ಸಾಳಗಾಂವಕರ ಮಾತನಾಡಿ, ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ಪ್ರತಿ ವರ್ಷ ಬರುತ್ತೇನೆ. ಈ ಭಾಗದಲ್ಲಿ ಜಗನು ಮಹಾರಾಜರು ದೊಡ್ಡ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಕ್ರಾಂತಿಯನ್ನೇ ಉಂಟು ಮಾಡಿದ್ದಾರೆ. ಅದರಂತೆ ಈ ಭಾಗವನ್ನು ಪ್ರತಿನಿಧಿಸುವ ಎಂ.ಬಿ. ಪಾಟೀಲರು ನೀರಾವರಿ ಸೇರಿದಂತೆ ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅವರು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರುವುದು ಖಚಿತ ಎಂದರು.

ಇದೇ ವೇಳೆ ಬಂಜಾರಾ ಸಮುದಾಯದ ಮಹಿಳೆಯೊಬ್ಬರು ಖಡ್ಗದ ಮೊನೆ, ಮೊಳೆಗಳ ಮೊನೆ, ಖಾಲಿ ಬಾಟಲಿ ಹಾಗೂ ಕೊಡಗಳ ಮೇಲೆ ಮೈ ರೋಮಾಂಚನಗೊಳ್ಳುವಂತೆ ಸಾಹಸ ಪ್ರದರ್ಶಿಸಿ ಗಣ್ಯರು-ಪ್ರೇಕ್ಷಕರಿಂದ ಪ್ರಶಂಸೆಗೆ ಪಾತ್ರವಾದರು. ಕಾರ್ಯಕ್ರಮದಲ್ಲಿ ಸಾಹಿತಿ ಇಂದುಮತಿ ಲಮಾಣಿ ಬರೆದಿರುವ ಗೋರ ಹಾಗೂ ಬಂಜಾರಾ ಸ್ತ್ರೀಯರ ವಸ್ತ್ರಾಭರಣ ಕೃತಿಗಳ ಲೋಕಾರ್ಪಣೆ ಮಾಡಲಾಯಿತು. 

ಸೋಮದೇವರ ಹಟ್ಟಿ ಶ್ರೀಮಾತಾ ದುರ್ಗಾದೇವಿ ಪ್ರಧಾನ ಧರ್ಮದರ್ಶಿ ಶ್ರೀಜಗನು ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಬಬಲೇಶ್ವರ ಶಾಸಕರಾದ ಮಾಜಿ ಸಚಿವ ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲೇಕರ, ಉದ್ಯಮಿ ಶಂಕರ ಪವಾರ, ಸಾಹಿತಿ ಇಂದುಮತಿ ಲಮಾಣಿ, ಸಂತೋಷ ಚವ್ಹಾಣ, ರಾಜಪಾಲ ಚವ್ಹಾಣ, ಐಆರ್‌ಎಸ್‌ ಅಧಿಕಾರಿ ಪೀರ್ಯಾ ನಾಯಕ, ಶಾಂತಾ ನಾಯಕ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next