ಕಾರ್ಕಳ: ಸತ್‌ಪ್ರಜೆಗಳಾಗಿ ರೂಪುಗೊಳ್ಳಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣಗ ಅಗತ್ಯವಿದೆ. ಮಾನವ ಧರ್ಮವೇ ಎಲ್ಲಕ್ಕಿಂತ ಶ್ರೇಷ್ಠವಾಗಿದ್ದು, ಮಾನವೀಯ ಮೌಲ್ಯದ ತಳಹದಿ ಮೇಲೆ ಸಮಾಜ ನಿರ್ಮಾಣವಾಗಬೇಕೆಂದು ನಿವೃತ್ತ ಸೈನಿಕ ಸುಭೇದರ್ ಮೇಜರ್ ಹಿರಿಯಣ್ಣ ಹೇಳಿದರು.
ಮಾ. 22ರಂದು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮಾನವಿಕ ಸಂಘದ ವತಿಯಿಂದ ನಡೆದ ವಿಶೇಷ ಉಪನ್ಯಾಸ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಯುವ ಶಕ್ತಿಯೇ ದೇಶದ ಸಂಪತ್ತು. ಯುವಜನಾಂಗವೇ ಹೆಚ್ಚಾಗಿರುವ ಭಾರತದಲ್ಲಿ ಯುವಕರನ್ನು ದೇಶದ ಹಿತದೃಷ್ಟಿಯಿಂದ ಸದ್ಬಳಕೆ ಮಾಡುವಲ್ಲಿ ವಿಫಲರಾಗಿದ್ದೇವೆ. ಯುವಕರು ಅರ್ಪಣ ಮನೋಭಾವದೊಂದಿಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಸಮಾಜವನ್ನು ಸದೃಢ ಗೊಳಿಸಬೇಕೆಂದು ಅವರು ಹೇಳಿದರು.
ಪ್ರಾಂಶುಪಾಲ ಡಾ| ಮಂಜುನಾಥ್ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ತಾಣಗಳಲ್ಲಿ ದೇಶ ಪ್ರೇಮವನ್ನು ತೋರ್ಪಡಿಸುವ ಕಾರ್ಯವಾಗುತ್ತಿದೆಯೇ ಹೊರತು ನೈಜತೆ ವಿರಳವಾಗುತ್ತಿದೆ. ದೇಶಭಕ್ತಿ ಎಂಬುದು ಕೇವಲ ತೋರಿಕೆಗೆ ಸೀಮಿತವಾಗದೇ ದೇಶ, ಸೈನಿಕರ ಬಗ್ಗೆ ಅಭಿಮಾನ, ಗೌರವ ಹೊಂದಿರಬೇಕು ಎಂದರು.
ಮಾನವಿಕ ಸಂಘದ ಕಾರ್ಯದರ್ಶಿ ರವಿ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಗಳಾದ ಪೂರ್ಣೇಶ್ ಸ್ವಾಗತಿಸಿ, ರಿಯಾಜ್ ನಿರೂಪಿಸಿದರು. ಲಾವಣ್ಯಾ ಅವರು ವಂದಿಸಿದರು.