ರಿಪ್ಪನ್‌ಪೇಟೆ: ಊರಿನಲ್ಲಿ ಹಾದಿಬದಿಯಲ್ಲಿ ಕುರೂಪಿಯಂತಿರುವ ವ್ಯಕ್ತಿಗಳನ್ನು ಕಂಡಾಗ ಅಸಡ್ಡೆ ಭಾವನೆಯಿಂದ ಮುಖ ತಿರುವಿಕೊಂಡು ಹೋಗುವವರೇ ಅಧಿಕವಾಗಿರುವ ಇಂದಿನ ದಿನಗಳಲ್ಲಿ ಹತ್ತಾರು ದಿನಗಳಿಂದ ಭಾಷೆ ಬರದ, ಗೊತ್ತುಗುರಿಯಿಲ್ಲದೆ ಹಗಲು ಬೇಕಾಬಿಟ್ಟಿ ಸಂಚಾರ, ರಾತ್ರಿಹೊತ್ತು ಅಂಗಡಿ ಮುಂಭಾಗದಲ್ಲಿ ಮಲಗುತ್ತಿದ್ದ ಮಾನಸಿಕ ಅಸ್ವಸ್ಥೆ ಯುವತಿಯನ್ನು ಕಂಡು ಉಪಚರಿಸಿ, ವೈದ್ಯರಲ್ಲಿಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದ ಘಟನೆ ಅರಸಾಳಿನಲ್ಲಿ ನಡೆದಿದೆ.
ಶಿವಮೊಗ್ಗದ ಕಡೆ ಸಾಗುತ್ತಿದ್ದ ರಿಪ್ಪನ್‌ಪೇಟೆಯ ಟಿ.ಆರ್. ಕೃಷ್ಣಪ್ಪ ಆ ಯುವತಿಯನ್ನು ಗಮನಿಸಿ ಬಳಿಗೆ ತೆರಳಿದ್ದಾರೆ. ಅವರಿಗೆ ಬರುವ ಅಲ್ಪ ಸ್ವಲ್ಪ ಭಾಷಜ್ಞಾನದಿಂದಲೇ ಮಾತನಾಡಿಸಿ ಹೆಸರನ್ನು ಕೇಳಿದಾಗ ಪಿಂಕಿ ಎಂಬುದಾಗಿ ಯುವತಿ ಉತ್ತರಿಸಿದ್ದಾಳೆ. ಉಳಿದಂತೆ ರಾಜ್ಯ, ಜಿಲ್ಲೆ, ಊರು ಯಾವುದೆಂದು ಕೇಳಿದರೆ ಸ್ಪಷ್ಟ ಉತ್ತರ ಗೊತ್ತಾಗುತ್ತಿಲ್ಲ. ಎಲ್ಲಿಂದಲೋ ಇಲ್ಲಿಗೆ ಬಂದಿರುವ ಯುವತಿಯನ್ನು ಒಬ್ಬೊಂಟಿಯಾಗಿಯೆ ಬಿಡುವುದು ಅಪಾಯ ಹಾಗೂ ಇಂತವರಿಗೆ ಸರಕಾರದ ನಿರಾಶ್ರಿತ ಶಿಬಿರಗಳಿರುವುದನ್ನು ಅರಿತು, ವೈದ್ಯರಲ್ಲಿ ಚಿಕಿತ್ಸೆಯನ್ನು ಕೊಡಿಸಿ, ಮುಂದಿನ ದಾರಿಯೇನು ಎಂಬುದರ ಬಗ್ಗೆ ತಿಳಿಯಲು ರಕ್ಷಣಾ ಇಲಾಖೆ, ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿ 108 ವಾಹನದ ಮೂಲಕ ಶಿವಮೊಗ್ಗದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವುದರೊಂದಿಗೆ ಮಾನವೀಯತೆಯ ನೆರವು ನೀಡಿದ್ದಾರೆ.
Advertisement
ಎಲ್ಲಿಂದಲೋ ಬಂದ ಹಿಂದಿ ಹಾಗೂ ಮರಾಠಿ ಕ್ಷೀಣಧ್ವನಿಯಲ್ಲಿ ಮಾತನಾಡುವ ಸುಮಾರು 20-25 ವಯೋಮಾನದ ಮಾನಸಿಕ ಅಸ್ವಸ್ಥ ಯುವತಿ ಹತ್ತಾರು ದಿನಗಳ ಹಿಂದೆ ಅರಸಾಳಿಗೆ ಬಂದು ರೈಲ್ವೆ ಕ್ರಾಸಿಂಗ್ ಬಳಿಯ ಅಂಗಡಿಯೊಂದರ ಮುಂಭಾಗದಲ್ಲಿ ಕಾಲ ನೂಕುತ್ತಿದ್ದಾಳೆ. ಕೊಳಕಾದ ಬಟ್ಟೆ, ತಲೆ ಹರಡಿರುವುದನ್ನು ಗಮನಿಸಿದಂತಹ ಅಕ್ಕಪಕ್ಕದವರು ಅರೆಹುಚ್ಚಿ ಇರಬಹುದೆಂದು ಅವಳನ್ನು ಮಾತನಾಡಿಸಲು ಹೋಗಿಲ್ಲ. ಹೊಟ್ಟೆ ಹಸಿವಾದಾಗ ಕೈಯೊಡ್ಡಿ ಬೇಡುತ್ತಾಳೆ. ಆಗ ತಿಂಡಿ, ಊಟ ಕೊಟ್ಟಿದ್ದೇವೆ ಎಂಬುದು ಅಲ್ಲಿನ ನಿವಾಸಿಗಳ ಹೇಳಿಕೆಯಾಗಿದೆ.