ಶಶಿಕಾಂತ ಕೆ.ಭಗೋಜಿ
ಹುಮನಾಬಾದ: ಆಡಳಿತ ಭಾಷೆಯಾಗಿ ಕನ್ನಡವನ್ನು ಅನುಷ್ಠಾನಕ್ಕೆ ತರುವುದು, ವಾಣಿಜ್ಯ ಮಳಿಗೆ ಸೇರಿದಂತೆ ಹಲವೆಡೆ ಕನ್ನಡ ನಾಮಫಲಕ ಅಳವಡಿಸಬೇಕೆಂಬ ಸರ್ಕಾರದ ಆದೇಶ ದಾಖಲೆಗಳಿಗೆ ಮಾತ್ರ ಸೀಮಿತವಾಗಿದೆ ಎಂಬುದಕ್ಕೆ ಪಟ್ಟಣದ ಪ್ರಮುಖ ಭಾಗವಾದ ಕೇಂದ್ರ ಬಸ್ ನಿಲ್ದಾಣ ಮುಂಭಾಗದ ಅಂಡಿಗಳ ನಾಮಫಲಕಗಳೇ ನಿದರ್ಶನ.
ಜಿಲ್ಲಾ ಆಡಳಿತ, ಕಾರ್ಮಿಕ ನಿರೀಕ್ಷಕ ಇಲಾಖೆ ಅಧಿಕಾರಿಗಳು ಕನ್ನಡ ಅನುಷ್ಠಾನ ಕುರಿತು ಹೊರಡಿಸುವ ಸುತ್ತೋಲೆಗಳು ವರ್ಷವಿಡಿ ಸುತ್ತುತ್ತಲೇ ಇದ್ದರೂ ಕೂಡ ಸಾಧನೆ ಮಾತ್ರ ಶೂನ್ಯ. ಕನ್ನಡ ಅನುಷ್ಠಾನ ಕುರಿತು ಕನ್ನಡಪರ ಸಂಘಟನೆಗಳ ಮುಖಂಡರ ಭಾವುಕತೆಯ ಅಭಿಮಾನ ಕೇವಲ ವೇದಿಕೆಗಳಿಗಷ್ಟೇ ಸೀಮಿತ. ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಬೀದಿಗಿಳಿದು ಆಂಗ್ಲಭಾಷಾ ನಾಮಫಲಕಗಳಿಗೆ ಕಪ್ಪು ಮಸಿ ಬಳಿಯುತ್ತೇವೆ ಎಂದು ಆವೇಶದ ಮಾತುಗಳ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಕೊಡುವುದು ತೋರಿಕೆಗಾಗಿ ಮಾತ್ರ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಈಗಲೂ ಅದೆಷ್ಟೋ ಬ್ಯಾಂಕ್‌ಗಳಲ್ಲಿ ದೇಶದ ವಿವಿಧ ಮೂಲೆಗಳಿಂದ ವಿವಿಧ ಹದ್ದೆಗಳಲ್ಲಿ ಅಧಿಕಾರಿಗಳಾಗಿ ಬರುವ ಜನ, ಕನ್ನಡ ಬಳಕೆ ಮಾಡುವ ಗ್ರಾಹಕರನ್ನು ಅವಮಾನಿಸಿ ಮಾತನಾಡಿ ಕನಿಷ್ಟವಾಗಿ ಕಾಣುತ್ತಾರೆ. ಇದು ರುವುದು ನೋವಿನ ಸಂಗತಿ. ಈ ನೆಲದಲ್ಲಿ ಸೇವೆ ಸಲ್ಲಿಸಲು ಬಂದ ಅನೇಕ ಅ ಧಿಕಾರಿಗಳಿಗೆ ತಮ್ಮ ಅನ್ನದ ಬಗ್ಗೆ ಗೌರವ ಇದ್ದರೆ ಆ ನೆಲದ ಭಾಷೆ ಮತ್ತು ಜನರನ್ನು ಗೌರವಿಸುವುದನ್ನು ಮೊದಲು ರೂಢಿಸಿಕೊಳ್ಳಬೇಕು. ಹೊರಗಿನಿಂದ ಬಂದವರ ಕತೆ ಹೀಗಾದರೆ ಈ ನೆಲದಲ್ಲೇ ಜನಿಸಿದ ಅದೆಷ್ಟೋ ಇಲಾಖೆಗಳ ಅಧಿಕಾರಿಗಳು, ಶಾಲಾ-ಕಾಲೇಜಿನಲ್ಲಿ ವರ್ಗಾವಣೆ ಪ್ರಮಾಣಪತ್ರ, ರಜೆ ಇತ್ಯಾದಿ ಅರ್ಜಿಗಳನ್ನು ಕನ್ನಡದಲ್ಲಿ ಬರೆದರೆ ತಿರಸ್ಕರಿಸಿ, ಆಂಗ್ಲ ಭಾಷೆಯಲ್ಲೇ ಬರೆದುಕೊಡುವಂತೆ ತಾಕೀತು ಮಾಡುತ್ತಾರೆ. ಇದೆಲ್ಲ ಗೊತ್ತಿರುವ ಸಂಬಂಧಪಟ್ಟ ಅಧಿಕಾರಿಗಳು ಕನ್ನಡ ಉಳಿವಿಗಾಗಿ ಏನು ಮಾಡುತ್ತಿದ್ದಾರೆ ಎನ್ನುವ ಕುರಿತು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಆದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ವಿವಿಧ ಹಂತದ ಅಧಿಕಾರಿಗಳು ಕನ್ನಡದ ಬಗೆಗಿನ ಅಸಡ್ಡೆ ಭಾವನೆ ತೊರೆದು ಕನ್ನಡ ಗೌರವಿಸುವ ಪರಿಸರ ನಿರ್ಮಿಸಲು ಮುಂದಾಗಬೇಕು. ಇಲ್ಲಿನ ಕಾರ್ಮಿಕ ನಿರೀಕ್ಷಕ ಇಲಾಖೆ ಅಧಿ ಕಾರಿಗಳು, ಕನ್ನಡ ನಾಮಫಲಕ ಅಳವಡಿಸದ ವ್ಯಾಪಾರಿಗಳಿಗೆ ವರ್ಷವಿಡೀ ನೊಟೀಸ್ ನೀಡಲು ಮಾತ್ರ ಸೀಮಿತವಾಗಿದ್ದು ಅವರ ಕರ್ತವ್ಯ ಬೇಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೇ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬುದು ನಾಡು-ನುಡಿ ಪ್ರಿಯರ ಒತ್ತಾಸೆ.