Advertisement

ವೀರಭದ್ರೇಶ್ವರನಿಗೆ ಮೈಸೂರು ಅರಸರ ಚಿನ್ನದ ಸರ

12:47 PM Jan 23, 2020 | Naveen |

ಹುಮನಾಬಾದ: ಬೀದರ ಜಿಲ್ಲೆ ಹುಮನಾಬಾದ ಪಟ್ಟಣದಲ್ಲಿ ಪ್ರತಿವರ್ಷ ನಡೆವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಮೈಸೂರು ರಾಜಮನೆತನದ ಕೊನೆಯ ಅರಸ ಜಯಚಾಮರಾಜ ಒಡೆಯರ್‌ ವೀರಭದ್ರ ಸ್ವಾಮಿಗೆ ಅರ್ಪಿಸಿದ ಚಿನ್ನದ ಸರವನ್ನು ಉತ್ಸವ ಮೂರ್ತಿಗೆ ಧರಿಸಲಾಗುತ್ತದೆ.

Advertisement

1952ರಲ್ಲಿ ವೀರಭದ್ರೇಶ್ವರ ದೇವರ ಮಹಿಮೆ ತಿಳಿದು ಇಲ್ಲಿಗೆ ಭೇಟಿ ನೀಡಿದ್ದ ಅಂದಿನ ರಾಜ್ಯದ ಒಡೆಯ ಜಯಚಾಮರಾಜ ಒಡೆಯರ್‌ ಸುಮಾರು 15 ಗ್ರಾಂ ಚಿನ್ನದ ಸರ ದೇವರಿಗೆ ಕಾಣಿಕೆಯಾಗಿ ಸಲ್ಲಿಸಿದ್ದರು. ಆ ಸರವನ್ನು ದೇವರ ವಿವಿಧ ಉತ್ಸವಗಳಲ್ಲಿ ದೇವರಿಗೆ ಹಾಕಲಾಗುತ್ತದೆ. ಉತ್ಸವ ಮೂರ್ತಿಗೆ ಚಿನ್ನದ ಸರ ಹಾಕುವ ಮುನ್ನ “ಮೈಸೂರು ರಾಜರ ಚಿನ್ನದ ಸರ’ ಎಂದು ಹೇಳಿದ ನಂತರವೇ ಹಾಕಲಾಗುತ್ತದೆ ಎಂದು ದೇವಸ್ಥಾನ ಉತ್ಸವ ಮೂರ್ತಿ ಸಿದ್ಧತಾ ಮಂಡಳಿ ಪ್ರಮುಖ ಮಲ್ಲಿಕಾರ್ಜುನ ಮಾಶೆಟ್ಟಿ ತಿಳಿಸಿದ್ದಾರೆ.

ಈ ಚಿನ್ನದ ಸರದ ಪದಕದ ಎದುರಿಗೆ ಮೈಸೂರು ಒಡೆಯರ ರಾಜ್ಯದ ಲಾಂಛನ “ಗಂಡಬೇರುಂಡ’ ಪಕ್ಷಿ ಇದೆ. ಅದರ ಹಿಂದೆ ಜೆಸಿಆರ್‌ಡಬ್ಲ್ಯು 1952, ಎಚ್‌. ಎಚ್‌ ದಿ| ಮಹಾರಾಜ್‌ ಆಫ್‌ ಮೈಸೂರು ಎಂದು ಬರೆಯಲಾಗಿದೆ.

ಜ.27ರವರೆಗೆ ಜಾತ್ರೆ
ಪ್ರತಿವರ್ಷ ಜ.14ರಿಂದ ಜ.27ರವರೆಗೆ ವೀರಭದ್ರೇಶ್ವರ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಪ್ರತಿವರ್ಷವೂ ಲಕ್ಷಾಂತರ ಭಕ್ತರು ಸೇರುತ್ತಾರೆ. ಈ ವೇಳೆ ಪಟ್ಟಣದಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯುತ್ತದೆ. ಜ.25 ಹಾಗೂ ಜ.26ರಂದು ಪ್ರಮುಖ ಜಾತ್ರೆ ನಡೆಯುತ್ತದೆ. ಈ ವೇಳೆ ಅಗ್ನಿಕುಂಡ ಪ್ರವೇಶ, ರಥೋತ್ಸವ ಹಮ್ಮಿಕೊಳ್ಳಲಾಗಿರುತ್ತದೆ. ಅಲ್ಲದೇ ಉತ್ಸವ ಮೂರ್ತಿ ಮೆರವಣಿಗೆ ನಿರಂತರ 24 ಗಂಟೆ ಕಾಲ ನಡೆಯುತ್ತಿರುವುದು ವಿಶೇಷವಾಗಿದೆ.

ವೀರಭದ್ರೇಶ್ವರ ದೇವರ ಮಹಿಮೆ ಅಪಾರವಾಗಿದೆ. ಪುರಾತನ ಕಾಲದ ಈ ದೇವಾಲಯದಲ್ಲಿ ಅನೇಕ ವಿಸ್ಮಯಕಾರಿ ಘಟನೆಗಳು ಘಟಿಸಿವೆ. ಈ ಭಾಗದಲ್ಲಿ ಆಳ್ವಿಕೆ ಮಾಡಿದ ಮುಸ್ಲಿಂ ದೊರೆ ನಿಜಾಮ್‌ ಕೂಡ ವೀರಭದ್ರೇಶ್ವರ ಜಾತ್ರೆಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದ್ದರು. ಅದೇ ರೀತಿ ಮೈಸೂರು ರಾಜರು ವೀರಭದ್ರೇಶ್ವರ ದರ್ಶನ ಪಡೆದು ಕಾಣಿಕೆ ಸಮರ್ಪಿಸಿದ್ದರು. ನಂತರ ಅವರಿಗೆ ಪುತ್ರ ಸಂತಾನ ಭಾಗ್ಯ ಪ್ರಾಪ್ತಿಯಾಗಿತ್ತು. ನಂತರದ ದಿನಗಳಲ್ಲಿ ರಾಜ ಮನೆತನದ ಯಾರೂ ಈ ಕಡೆ ಬಂದಿಲ್ಲ ಎಂದು ಹಿರಿಯರು ಹೇಳುತ್ತಾರೆ.
ಮಲ್ಲಿಕಾರ್ಜುನ ಮಾಶೆಟ್ಟಿ ,
ದೇವಸ್ಥಾನ ಉತ್ಸವ ಮೂರ್ತಿ ಸಿದ್ಧತಾ ಮಂಡಳಿ ಪ್ರಮುಖ

Advertisement

„ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next