ಹುಮನಾಬಾದ: ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿ ಹಿಂದಿನ ಪ್ರದೇಶದಲ್ಲಿನ ತಹಶೀಲ್ದಾರರ ವಸತಿ ನಿಲಯ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಪ್ರತಿನಿತ್ಯ ಸಾಯಂಕಾಲದಿಂದ ಮಧ್ಯ ರಾತ್ರಿವರೆಗೆ ವಸತಿ ನಿಲಯದ ಪ್ರದೇಶ ಹಾಗೂ ತಹಶೀಲ್ದಾರ್ ವಸತಿಯನ್ನು ಕುಡುಕರು, ಪುಂಡ ಪೋಕರಿಗಳು ತಮ್ಮ ಅಡ್ಡೆಯಾಗಿ ಮಾಡಿಕೊಂಡಿದ್ದಾರೆ. ವಸತಿ ನಿಲಯದ ಪ್ರಾಂಗಣ ಹಾಗೂ ವಸತಿಯಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಬಿದ್ದಿದ್ದು, ಇಲ್ಲಿನ ಸೌಂದರ್ಯ ಹಾಳು ಮಾಡುತ್ತಿದ್ದಾರೆ. ಅಲ್ಲದೇ ಮಧ್ಯಾಹ್ನದಲ್ಲಿ ಲವರ್ಸ್ ಪಾಯಿಂಟ್ ಆಗಿಯೂ ಮತ್ತು ಜೂಜುಕೋರರ ತಾಣವಾಗಿಯೂ ಗುರುತಿಸಿಕೊಂಡಿದೆ.
ಸಾರ್ವಜನಿಕರ ಹಿಡಿ ಶಾಪ: ಹುಮನಾಬಾದ ಪಟ್ಟಣದಲ್ಲಿ ತಹಶೀಲ್ದಾರರಾಗಿ ಕೆಲಸ ನಿರ್ವಹಿಸಿದ ಎಲ್ಲ ತಹಶೀಲ್ದಾರರು ಇದೇ ವಸತಿ ನಿಲಯದಲ್ಲಿ ಉಳಿದು ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ, ಕಳೆದೆರಡು ವರ್ಷಗಳಿಂದ ಈ ವಸತಿ ನಿಲಯದಲ್ಲಿ ಯಾರು ಉಳಿದುಕೊಳ್ಳದ ಕಾರಣ ಸಂಪೂರ್ಣ ಪಾಳು ಬಿದ್ದಿದೆ. ವಸತಿ ನಿಲಯದ ಬಾಗಿಲುಗಳು ತೆರೆದಿದ್ದು, ಮಜಾ ಮಾಡುವ ಪುಂಡರಿಗೆ ಹೇಳಿ ಮಾಡಿಸಿದ ಜಾಗವಾಗಿದೆ. ಅಲ್ಲದೆ, ಸುತ್ತಲಿನ ಪ್ರದೇಶದಲ್ಲಿ ಗಿಡ-ಗಂಟೆಗಳು ಬೆಳೆದಿವೆ. ಒಂದು ಸಮಯದಲ್ಲಿ ಸ್ವಚ್ಛ-ಸುಂದರ ಪರಿಸರ ಹೊಂದಿದ ಪ್ರದೇಶ ಇದೀಗ ಗಬ್ಬು ನಾರುವಂತಾಗಿದ್ದು, ಅಧಿ ಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿ ಶಾಪ ಹಾಕುಂತಾಗಿದೆ.
ತೆರೆದ ಗೇಟ್-ಬಾಗಿಲುಗಳು: ವಸತಿ ನಿಲಯದ ಗೇಟ್ ಹಾಗೂ ಬಾಗಿಲುಗಳು ತೆರೆದಿರುವುದು ಹೆಚ್ಚಿನ ಪುಂಡರಿಗೆ ಪುಂಡಾಟಿಕೆ ಮಾಡಲು ಅನುಕೂಲವಾದಂತಾಗಿದೆ. ವಸತಿ ನಿಲಯಕ್ಕೆ ಸೂಕ್ತ ಭದ್ರತೆ ಇದ್ದಿದ್ದರೆ ದುರಸ್ತಿ ಮಾಡುವ ಪ್ರಶ್ನೆಯೇ ಬರುತ್ತಿರಲಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಂದಾಯ ಇಲಾಖೆಗೆ ವಸತಿ ಬೇಡವಾದರೆ ಅದನ್ನು ಇತರೆ ಇಲಾಖೆಗಳ ಅಧಿ ಕಾರಿಗಳು ಬಳಸಲು ಸಿದ್ಧರಿದ್ದಾರೆ ಎಂಬ ಅಭಿಪ್ರಾಯಗಳೂ ಕೂಡ ಕೇಳಿಬರುತ್ತಿವೆ. ಸದ್ಯ ವಸತಿ ನಿಲಯದಲ್ಲಿನ ವಿವಿಧೆಡೆ ದುರಸ್ತಿ ಕಾರ್ಯ ಕಂಡು ಬರುತ್ತಿದ್ದು, ಕೂಡಲೇ ಸಂಬಂಧಿಸಿದ ಇಲಾಖೆಗಳು ದುರಸ್ತಿ ಮಾಡದಿದ್ದರೆ ಇನ್ನೂ ಹೆಚ್ಚಿನ ಹಾನಿ ಸಂಭವಿಸುವ ಸಾಧ್ಯತೆ ಇದೆ. ಅಲ್ಲದೆ, ತಹಶೀಲ್ದಾರರು ಕಟ್ಟಡಕ್ಕೆ ಸೂಕ್ತ ಭದ್ರತೆ ವದಗಿಸುವ ನಿಟ್ಟಿನಲ್ಲಿ ಕೆಲಸ ಮಾಡದಿದ್ದರೆ ದೊಡ್ಡ ಪ್ರಮಾಣದಲ್ಲಿ ಅನೈತಿಕ ಚಟುವಟಿಕೆಗಳ ತಾಣ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಕೂಗು ಸಾರ್ವಜನಿಕ ವಲಯದ
ಕೇಳಿಬರುತ್ತಿದೆ.
ನಾನು ಕಳೆದ ಒಂದು ವರ್ಷ ಕೆಲಸ ನಿರ್ವಹಿಸುತ್ತಿದ್ದು, ವಸತಿ ನಿಲಯ ಮೊದಲು ಪರಿಶೀಲನೆ ಮಾಡಲಾಗಿದೆ. ಅಲ್ಲಿನ ದುರಸ್ತಿ ಕಾರ್ಯ ಇರುವ ಕಾರಣ ಬೇರೆ ಕಡೆ ಉಳಿದುಕೊಂಡಿದ್ದೇನೆ. ಸಂಬಂ ಧಿಸಿದ ಅಧಿಕಾರಿಗಳಿಗೆ ಮೂರು ಬಾರಿ ಪತ್ರ ಬರೆದು ದುರಸ್ತಿ ಮಾಡುವಂತೆ ತಿಳಿಸಿದ್ದೇನೆ.
ನಾಗಯ್ನಾ ಹಿರೇಮಠ,
ತಹಶೀಲ್ದಾರ್
ದುರ್ಯೋಧನ ಹೂಗಾರ