Advertisement

ಮೂರು ತಿಂಗಳಿಂದ ಬಾರದ ಸಂಬಳ

01:05 PM Nov 14, 2019 | Naveen |

„ಶಶಿಕಾಂತ ಕೆ.ಭಗೋಜಿ
ಹುಮನಾಬಾದ:
ಕಳೆದ ಮೂರು ತಿಂಗಳಿಂದ ಸಂಬಳವಿಲ್ಲದೇ ತಾಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಖಾಸಗಿ ಅನುದಾನಿತ ಶಾಲೆ ಶಿಕ್ಷಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆರ್ಥಿಕ ತೊಂದರೆಯಿಂದ ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಹಬ್ಬಗಳನ್ನು ನೋವಿನಲ್ಲೇ ಆಚರಿಸಿದ್ದಾರೆ. ವಿಶೇಷವಾಗಿ ದಸರಾ ಸಂದರ್ಭದಲ್ಲಿ ಬಟ್ಟೆ ಸೇರಿದಂತೆ ಇತರೆ ಅಗತ್ಯ ವಸ್ತು ಯಾವೊಬ್ಬ ಅಂಗಡಿಯವರು ನೀಡಲಿಲ್ಲ.

Advertisement

ಮೂರು ತಿಂಗಳಿಂದ ಸಂಬಳ ಬಂದಿಲ್ಲ. ಒಂದು ವಾರದಲ್ಲಿ ಖಾತೆಗೆ ಜಮಾ ಆದ ತಕ್ಷಣ ಪಾವತಿಸುವುದಾಗಿ ಕೇಳಿಕೊಂಡರೂ ಅಗತ್ಯ ವಸ್ತು ನೀಡದ್ದರಿಂದ ಅನಿವಾರ್ಯವಾಗಿ ಬಡ್ಡಿಯಿಂದ ಹಣ ತಂದು ಹಬ್ಬ ಆಚರಿಸಿದ್ದೇವೆ ಎಂದು ಶಿಕ್ಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಸರ್ಕಾರದಲ್ಲಿ ಹಣವಿಲ್ಲ, ಈ ವಾರ, ಮುಂದಿನ ವಾರವೆಂದು ಹೇಳುತ್ತ ಕಳೆದ ಮೂರು ತಿಂಗಳಿಂದ ಮುಂದೂಡುತ್ತಲೇ ಇದೆ. ಆದರೆ ಈ ವರೆಗೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

ಸಮಸ್ಯೆಯನ್ನು ಒಮ್ಮೆ ಕ್ಷೇತ್ರದ ಶಾಸಕ ರಾಜಶೇಖರ ಬಿ.ಪಾಟೀಲ ಮಾತ್ರವಲ್ಲದೇ ಕಳೆದೆರಡು ವಾರಗಳ ಹಿಂದೆ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡ ವೇಳೆ ಹುಮನಾಬಾದ ಮಿನಿ ವಿಧಾನಸೌಧಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರ ಸಂಘದ ಪ್ರಮುಖರು ಶೀಘ್ರ ಸಂಬಳ ಪಾವತಿಸುವಂತೆ ಮನವಿ ಸಲ್ಲಿಸಿದಾಗ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಭರವಸೆ ಇಂದಿಗೂ ಈಡೇರಿಲ್ಲ ಎನ್ನುತ್ತಾರೆ ಶಿಕ್ಷಕರು.

ಈ ಕುರಿತು ವಿವಿಧ ಹಂತದ ಚುನಾಯಿತ ಪ್ರತಿನಿಧಿ  ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸಮಸ್ಯೆ ಇರೋದು ನಿಜ. ನಿಮ್ಮ ನೋವು ನಮಗೂ ಅರ್ಥವಾಗುತ್ತದೆ. ಆದರೆ ಈ ಸಮಸ್ಯೆ ಕೇವಲ ಹುಮನಾಬಾದ ತಾಲೂಕಿಗೆ ಮಾತ್ರ ಸೀಮಿತವಲ್ಲ. ಇಡೀ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಯಾರೊಬ್ಬ ಶಿಕ್ಷಕರಿಗೂ ಸಂಬಳವಾಗಿಲ್ಲ. ಸರ್ಕಾರ ಈಗಾಗಲೇ ಸಂಬಳ ಶೀಘ್ರ ಪಾವತಿಸುವ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಶೀಘ್ರದಲ್ಲೇ ಸಂಬಳ ಪಾವತಿಯಾಗುವ ಸಾಧ್ಯತೆಗಳಿವೆ ಎಂದು ಹೇಳುತ್ತಿದ್ದಾರೆ.

ರಾಜ್ಯದ ಅನ್ಯ ಜಿಲ್ಲೆಗಳಲ್ಲಿ ಈ ಸಮಸ್ಯೆ ಇಷ್ಟೊಂದು ಗಂಭೀರ ಸ್ವರೂಪ ಪಡೆದಿಲ್ಲ. ಆ ವಿಷಯದಲ್ಲಿ ಬೀದರ ಜಿಲ್ಲೆ ಜೊತೆಗೆ ಸರ್ಕಾರ ಯಾವತ್ತೂ ತಾರತಮ್ಯ ಧೋರಣೆ ಅನುಸರಿಸುತ್ತದೆ ಎಂಬುದು ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಿಕ್ಷಕರ ಸಂಘದ ಪ್ರತಿನಿಧಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. ಆದ್ದರಿಂದ ಸಂಬಳ ಪಾವತಿಯಲ್ಲಿ ಹೆಚ್ಚು ವಿಳಂಬ ಮಾಡದೇ ಶೀಘ್ರ ಪಾವತಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂಬುವುದು ಶಿಕ್ಷಕರ ಒತ್ತಾಸೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next