ಹುಮನಾಬಾದ: ತಾಲೂಕಿನ ಘೋಡವಾಡಿ ಗ್ರಾಮದ ಹೊರವಲಯದಲ್ಲಿ ಪಂಚಾಯತ ವತಿಯಿಂದ ಮಾದರಿ ಚಿತಾಗಾರ ನಿರ್ಮಾಣ ಕಾರ್ಯ ನಡೆದಿದ್ದು, ಗ್ರಾಮಸ್ಥರು ಮೆಚ್ಚುಗೆಗೆ ಪಾತ್ರವಾಗಿದೆ.
ಗ್ರಾಮದಲ್ಲಿ ಮರಾಠ ಹಾಗೂ ಮುಸ್ಲಿಂ ಸಮುದಾಯದ ಜನರ ಸಂಖ್ಯೆ ಹೆಚ್ಚಿದ್ದು, ಮರಾಠ ಸಮುದಾಯದ ಸ್ಮಶಾನ ಭೂಮಿಯಲ್ಲಿ ಮೂಲಸೌಲಭ್ಯಗಳ ಅಗತ್ಯತೆಯನ್ನು ಅರಿತುಕೊಂಡ ಪಂಚಾಯತ ಅಧಿಕಾರಿ ಮಹಾದೇವ ಹಾಗೂ ಪಂಚಾಯತ ಅಧ್ಯಕ್ಷರು ಮಾದರಿ ಸ್ಮಶಾನ ಭೂಮಿ (ಚಿತಾಗಾರ) ನಿರ್ಮಾಣಕ್ಕೆ ಒಪ್ಪಿಗೆ ಪಡೆದುಕೊಂಡು ಕಾಮಗಾರಿ ನಡೆಸಿದ್ದಾರೆ.
2019-20ನೇ ಸಾಲಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 5 ಲಕ್ಷ ವೆಚ್ಚದಲ್ಲಿ ಸಧ್ಯ ಕಾಮಗಾರಿ ಮಾಡಿದ್ದು, ಇನ್ನು ಇತರೆ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಒಂದೇ ಬಾರಿಗೆ ಎರಡು ಶವ ಶಂಸ್ಕಾರ ಮಾಡುವ ನಿಟ್ಟಿನಲ್ಲಿ ಕಾಮಗಾರಿ ಮಾಡಲಾಗಿದ್ದು, ಇಲ್ಲಿಗೆ ಬರುವ ಜನರಿಗೆ ನೀರಿನ ವ್ಯವಸ್ಥೆಗೆ ಟ್ಯಾಂಕ್ ನಿರ್ಮಿಸುತ್ತಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ಸ್ಮಶಾನದ ಸುತ್ತಲಿನ ಪ್ರದೇಶದಲ್ಲಿ ಗಿಡ-ಮರಗಳನ್ನು ನೆಡುವ ಯೋಜನೆ ಕೂಡ ಹಾಕಿಕೊಂಡಿದ್ದಾರೆ ಎಂದು ಪಂಚಾಯತ ಸದಸ್ಯ ಭಿಮರಾವ್ ಕಾಳೆ ಮಾಹಿತಿ ತಿಳಿಸಿದ್ದಾರೆ.
ಇಲ್ಲಿನ ಜನರ ಬೇಡಿಕೆ ಅನುಸಾರ ಕೆಲಸ ಮಾಡಲಾಗಿದ್ದು, ಇನ್ನು ಕೆಲ ಸ್ಥಳೀಯರು ದಾನದ ರೂಪದಲ್ಲಿ ಸ್ಮಶಾನದಲ್ಲಿ ಆಸನಗಳ ವ್ಯವಸ್ಥೆ ಮಾಡಲಿದ್ದಾರೆ. ಅಲ್ಲದೆ, ಸಿಸಿ ರಸ್ತೆ ನಿರ್ಮಿಸುವ ಯೋಜನೆ ಇದ್ದು, ಇನ್ನೂ ಸ್ವಲ್ಪ ಪ್ರಮಾಣದ ಕಾಮಗಾರಿಗಳು ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ಇದು ಮಾದರಿ ಚಿತಾಗಾರ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪಂಚಾಯತ ಅಭಿವೃದ್ಧಿ ಅಧಿಕಾರಿ ಮಹಾದೇವ ತಿಳಿಸಿದ್ದಾರೆ.
ಈ ಹಿಂದೆ ಶವ ಸಂಸ್ಕಾರಕ್ಕೆ ಸಮಸ್ಯೆ ಎದುರಿಸುತ್ತಿದ್ದ ಮರಾಠ ಸಮುದಾಯದ ಜನರು ಇದೀಗ ಪಂಚಾಯತ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಪಂಚಾಯತ ವತಿಯಿಂದ ಮಾದರಿ ಕಾರ್ಯಗಳನ್ನು ಮಾಡಿದರೆ ಗ್ರಾಮದ ಅಭಿವೃದ್ಧಿಯಾಗುತ್ತದೆ. ಮನುಷ್ಯನ ಅಂತ್ಯ ಕಾಲದ, ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ಸರಿಯಾಗಿ ಪೂರ್ಣಗೊಂಡರೆ ಮಾತ್ರ ಇಹಲೋಕ ತ್ಯಜಿಸಿದವರ ಆತ್ಮಕ್ಕೆ ಶಾಂತಿ ದೊರೆಯುತ್ತದೆ. ವಿಧಿವಿಧಾನಗಳು ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಕೆಲಸ ಮಾಡಲಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದುರ್ಯೋಧನ ಹೂಗಾರ