ಶಶಿಕಾಂತ ಕೆ. ಭಗೋಜಿ
ಹುಮನಾಬಾದ: ಪುರಸಭೆ ಏಕಾಏಕಿ ಶೆಡ್ ತೆರವುಗೊಳಿಸಲು ಮುಂದಾದ ಹಿನ್ನೆಲೆಯಲ್ಲಿ ಕಲ್ಲೂರ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಈಗ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಪ್ರವಾಸಿ ಮಂದಿರದಿಂದ ಕೆಇಬಿ ಬೈಪಾಸ್ ವರೆಗಿನ ರಸ್ತೆ ಬಲಬದಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳಿಗೆ ಕಲ್ಲೂರ ರಸ್ತೆಯಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿತ್ತು. ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಗಣ್ಯರು ಮತ್ತು ಅಧಿಕಾರಿಗಳ ಸಲಹೆ ಮೇರೆಗೆ ಸ್ವಯಂ ಪ್ರೇರಣೆಯಿಂದ ಕಳೆದ ವರ್ಷ ಶೆಡ್ ತೆರವುಗೊಳಿಸಿ ತಾತ್ಕಾಲಿಕವಾಗಿ ಕಲ್ಲೂರ ರಸ್ತೆಯಲ್ಲಿ ವ್ಯಾಪಾರ ಮಾಡಿ ಬದುಕು ಸಾಗಿಸುತ್ತಿದ್ದರು. ಪುರಸಭೆ ಈಗ ಶೆಡ್ ತೆರವುಗೊಳಿಸಲು ಮುಂದಾಗಿದೆ. ಇದರಿಂದ ವ್ಯಾಪಾರಿಗಳಿಗೆ ಅತಂತ್ರ ಸ್ಥಿತಿ ಎದುರಾಗಿದೆ.
ಶೆಡ್ ಹಾಕಿದ ಕೆಲವೇ ತಿಂಗಳಲ್ಲಿ ತೆರವುಗೊಳಿಸುವಂತೆ ಒತ್ತಡ ಹೇರಿದ್ದರು. ಗಣ್ಯರಲ್ಲಿ ಮೊರೆ ಹೋಗಿದ್ದರಿಂದ ತಾತ್ಕಾಲಿಕವಾಗಿ ಮುಂದೂಡಿದ್ದರಿಂದ ಬಡ ವ್ಯಾಪಾರಿಗಳು ಕೆಲವು ತಿಂಗಳ ಕಾಲ ನಿಶ್ಚಿಂತೆಯಿಂದ ಇದ್ದರು. ಆದರೆ ಮತ್ತೆ ಈಗ ಶೆಡ್ ತೆರವುಗೊಳಿಸಿ ಇಲ್ಲದಿದ್ದರೆ ಜೆಸಿಬಿ ಮೂಲಕ ತೆರವುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ನಾವು ಇದನ್ನೇ ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ತೆರವುಗೊಳಿಸಿದರೆ ಮುಂದಿನ ಗತಿ ಏನು ಎಂಬುದು ವ್ಯಾಪಾರಿಗಳ ಅಳಲು. ವೀರಭದ್ರೇಶ್ವರ ಅಗ್ನಿಕುಂಡ ಆಸುಪಾಸು ನಿರ್ಮಿಸಲಾಗುತ್ತಿರುವ ಹೊಸ ಅಂಗಡಿಗಳಲ್ಲಿ ನಮಗೂ ಅಂಗಡಿ ನೀಡುವುದಾಗಿ ಗೌಡರು ತಿಳಿಸಿದ್ದಾರೆ. ಕೊಟ್ಟೇ ಕೊಡುತ್ತಾರೆ.
ಅದೇ ಭರವಸೆ ಮೇಲೆ ಈವರೆಗೆ ಇಲ್ಲಿ ತತ್ಕಾಲಿಕವಾಗಿ ಅಂಗಡಿ ಹಾಕಿಕೊಂಡಿದ್ದೇವೆ. ಈಗ ಏಕಾಏಕಿ ತೆರವುಗೊಳಿಸಿದರೆ ಇದನ್ನೇ ನಂಬಿ ಬದುಕುತ್ತಿರುವ ನಮ್ಮ ಹಾಗೂ ನಮ್ಮನ್ನೇ ನಂಬಿರುವ ಕುಟುಂಬದ ಹೊಟ್ಟೆ ಪಾಡು ಏನು? ತೆರವುಗೊಳಿಸಲು ನಮ್ಮದೇನೂ ಆಕ್ಷೇಪವಿಲ್ಲ. ಆದರೆ ಜಾತ್ರೆ ಮುಗಿದು ಅಗ್ನಿಕುಂಡ ಪಕ್ಕದಲ್ಲಿನ ಅಂಗಡಿಗಳು ಸಿದ್ಧಗೊಳ್ಳುವರೆಗೆ ಇಲ್ಲೇ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂಬುದು ವ್ಯಾಪಾರಿಗಳ ಅನಿಸಿಕೆ. ಅಭಿವೃದ್ಧಿ ವಿಷಯದಲ್ಲಿ ಯಾರೂ ಹಸ್ತಕ್ಷೇಪ ಮಾಡುವುದು ತರವಲ್ಲ. ಅದನ್ನು ಪ್ರತಿಯೊಬ್ಬರು ಒಪ್ಪಲೇಬೇಕು. ಆದರೆ ಉಳ್ಳವರಾಗಿದ್ದರೆ ಚಿಂತೆ ಇರಲಿಲ್ಲ. ಅಂಗಡಿ ತೆರವುಗೊಂಡರೆ ಅವರ ಜೀವನ ನಿರ್ವಹಣೆ ಮೇಲೆ ಪರಿಣಾಮ ಉಂಟಾಗುತ್ತದೆ. ಅವರ ಬೇಡಿಕೆ ಪ್ರಕಾರ ಮಾನವೀಯತೆ ದೃಷ್ಟಿಯಿಂದ ವೀರಭದ್ರೇಶ್ವರ ಅಗ್ನಿಕುಂಡ ಪಕ್ಕದ ಅಂಗಡಿ ನಿರ್ಮಾಣಗೊಳ್ಳುವರೆಗೆ ಇಲ್ಲೇ ಅವಕಾಶ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂಬುದು ನಿರ್ಗತಿಕರು ಹಾಗೂ ಬಡವರ ಹಿತಚಿಂತಕರ ಅಂಬೋಣ.