Advertisement

ಉದ್ಘಾಟನೆಗೆ ಮುನ್ನವೇ ಹಾಳಾಗುತ್ತಿದೆ ಕಟ್ಟಡ

11:48 AM Oct 12, 2019 | Naveen |

 „ಶಶಿಕಾಂತ ಕೆ.ಭಗೋಜಿ
ಹುಮನಾಬಾದ: ಪಟ್ಟಣದಲ್ಲಿ ಅಂಗವಿಕಲರ ಸರ್ವಾಂಗೀಣ ಅಭಿವೃದ್ಧಿ ಉದ್ದೇಶದಿಂದ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅಂಗವಿಕಲರ ಸಹಾಯವಾಣಿ ಕೇಂದ್ರದ ಕಟ್ಟಡ ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಉದ್ಘಾಟನೆಗೂ ಮುನ್ನವೇ ಬಳಕೆ ಇಲ್ಲದೇ ಹಾಳಾಗುತ್ತಿದೆ.

Advertisement

ತಾಲೂಕಿನ ಅಂಗವಿಕಲರ ಬಹುದಿನಗಳ ಕನಸಾಗಿದ್ದ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ರಾಜಶೇಖರ ಪಾಟೀಲ ಅವರು ವಿಶೇಷ ಆಸಕ್ತಿವಹಿಸಿ, ಅಂದಾಜು ರೂ.12 ಲಕ್ಷ ವೆಚ್ಚದಲ್ಲಿ ಈ ಕಟ್ಟಡ ನಿರ್ಮಿಸುವ ಯೋಜನೆ ರೂಪಿಸಿದ ಜಿಲ್ಲೆಯ ಏಕೈಕ ತಾಲೂಕು ಎಂಬ ಹೆಗ್ಗಳಿಕೆ ಹುಮನಾಬಾದ್‌ಗೆ ಇದೆ. ಅಂಗವಿಕರ ಸಬಲೀಕರಣ ಉದ್ದೇಶದಿಂದ ಶಾಸಕ ರಾಜಶೇಖರ ಪಾಟೀಲ ಅವರು 2015-16ನೇ ಸಾಲಿನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.

ನಿಯಮ ಅನುಸಾರ ನಿಗದಿತ ಅವ ಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದರೆ 2016ನೇ ಸಾಲಿನ ಅಂತ್ಯದಲ್ಲಿ ಪೂರ್ಣಗೊಂಡು ಉದ್ಘಾಟನೆಯಾಗಿ ಉದ್ದೇಶಿತ ಕೆಲಸಕ್ಕೆ ಬಳಕೆ ಆಗುತ್ತಿತ್ತು. ಶಂಕುಸ್ಥಾಪನೆ ನಂತರ ತೋಡಲಾಗಿದ್ದ ಅಡಿಪಾಯ 6 ತಿಂಗಳು ಗತಿಸಿದರೂ ತುಂಬುವ ಕಾರ್ಯ ನಡೆಯಲಿಲ್ಲ. ಒಂದು ವರ್ಷದ ನಂತರ ಅಡಿಪಾಯ ತುಂಬಿ, ನಂತರ ನಿರ್ಮಾಣ ವೇಗ ಹೆಚ್ಚಿಸಲಾಯಿತು.

ಬಳಿಕ ಸಿಮೆಂಟ್‌ ಕಂಬ ಅಳವಡಿಸುವ ಹಂತದಲ್ಲಿ ಮತ್ತೆ ಕೆಲ ತಿಂಗಳು ನನೆಗುದಿಗೆ ಬಿದ್ದಿತ್ತು. 2016ನೇ ಸಾಲಿನ ಅಂತ್ಯಕ್ಕೆ ಮತ್ತೆ ಆರಂಭಗೊಂಡ ಕಾಮಗಾರಿ ಛಾವಣಿ, ವಿದ್ಯುತ್‌ ವೈರಿಂಗ್‌ ಅಳವಡಿಕೆ, ಕಟ್ಟಡಕ್ಕೆ ಬಣ್ಣ ಬಳಿಯುವುದು ಇತ್ಯಾದಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಆದರೇ ಅತ್ಯಂತ ಅವಶ್ಯಕ ಇರುವ ಪ್ರವೇಶ ಬಾಗಿಲು ಅಳವಡಿಸುವುದು ಸೇರಿದಂತೆ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿದೆ.

ಕಟ್ಟಡದಲ್ಲಿ ಏನೇನಿರಬೇಕು?: ಸಭಾಭವನ-1, ತಾಲೂಕು ಮಟ್ಟದ ಅಧಿಕಾರಿ ಕೊಠಡಿ-1, ಗಣಕಯಂತ್ರ ಕೊಠಡಿ-1 ಸೇರಿ 3 ಕೊಠಡಿಗಳು, ಅಲ್ಲದೇ ಸ್ನಾನದ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಒಳಗೊಂಡಂತೆ ಅಗತ್ಯ ಮೂಲ ಸೌಲಭ್ಯ ಕಟ್ಟದಲ್ಲಿ ಇರಬೇಕು.

Advertisement

ಈ ಕಟ್ಟಡದಲ್ಲೇನಿದೆ?: ಸಭಾಭವನ, ಅಧಿಕಾರಿಯ ಕೊಠಡಿ, ಗಣಕಯಂತ್ರದ ಕೊಠಡಿ, ಸ್ನಾನ ಕೊಠಡಿ, ಶೌಚಾಲಯ ಇವೆ. ಶೌಚಾಲಯಕ್ಕೆ ನೀರು, ಶುದ್ಧ ಕುಡಿಯುವ ನೀರು ಮತ್ತು ವಿದ್ಯುತ್‌ ಸಂಪರ್ಕ ಈವರೆಗೂ ಕಲ್ಪಿಸಲಾಗಿಲ್ಲ. ಮೇಲುಸ್ತುವಾರಿ ಕೊರತೆ ಕಾರಣ ಕಟ್ಟಡದ ಸುತ್ತಲು ಗಿಡಗಂಟೆ ಬೆಳೆದು ಬಳಕೆಯಲ್ಲಿಲ್ಲದ ಹಳೆ ಕಟ್ಟಡಂತೆ ಕಾಣುತ್ತಿದೆ. ಗಿಡಗಂಟೆ ಬೆಳೆದಲ್ಲಿ ಆಸುಪಾಸಿನ ಮಕ್ಕಳು ಶೌಚಕ್ಕೆ ಬರುವ ಕಾರಣ ಸದಾ ಹಂದಿಗಳ ಹಿಂಡೇ ಇರುತ್ತದೆ.

ಜಿಲ್ಲೆಯ ಹುಮನಾಬಾದ ತಾಲೂಕಿಗೆ ಮಾತ್ರ ಈ ಸೌಲಭ್ಯ ಕಲ್ಪಿಸಲು ಮುಂದಾದ ಶಾಸಕ ರಾಜಶೇಖರ ಪಾಟೀಲ ಅವರ ಕಾರ್ಯ ಪ್ರಶಂಸನೀಯ. ಆದರೆ ನಿರ್ಮಾಣ ಕಾಮಗಾರಿ ಆರಂಭಗೊಂಡು ಮೂವರೆ ವರ್ಷ ಗತಿಸಿದರೂ ಪೂರ್ಣಗೊಳ್ಳದಿದ್ದರೆ ಏನು ಪ್ರಯೋಜನ.

ಹಿಂದೆ ಹೋದಷ್ಟು ದಿನ ಮುಂದೆ ಹೋಗದಂತೆ ಎಚ್ಚರ ವಹಿಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ, ಉದ್ದೇಶಿತ ಕೆಲಸಕ್ಕೆ ಬಳಕೆ ಆಗುವ ನಿಟ್ಟಿನಲ್ಲಿ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂಬುದು (ವಿಶೇಷ ಸೌಲಭ್ಯ ವಂಚಿತರು) ಅಂಗವಿಕಲರ ಒತ್ತಾಸೆ.

Advertisement

Udayavani is now on Telegram. Click here to join our channel and stay updated with the latest news.

Next