ಹುಮನಾಬಾದ: ಈಜು ಕೇವಲ ಮನೋರಂಜನೆಗಾಗಿ ಆಡುವ ಆಟವಲ್ಲ. ಸ್ವಯಂ ಪ್ರಾಣ ರಕ್ಷಣೆಗೆ ಹಾಗೂ ಈಜು ಬಾರದೇ ನೀರಲ್ಲಿ ಮುಳಗುವ ಇತರ ವ್ಯಕ್ತಿಗಳ ಪ್ರಾಣ ರಕ್ಷಿಸುವ ಬಹುದೊಡ್ಡ ಕಲೆಯಾಗಿದೆ ಎಂದು ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಡಾ|ಜ್ಞಾನರಾಜ ಮಾಣಿಕಪ್ರಭು ಹೇಳಿದರು.
ಮಾಣಿಕಪ್ರಭು ಈಜು ಕೊಳದಲ್ಲಿ ಶನಿವಾರ ಮಾಣಿಕಪ್ರಭು ಅಂಧ ಮಕ್ಕಳ ಶಾಲೆ ಆಶ್ರಯದಲ್ಲಿ ಆಯೋಜಿಸಿದ್ದ ಅಂಧ ಮಕ್ಕಳ ರಾಜ್ಯಮಟ್ಟದ ಈಜು ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಪಾಲಕರು ಪಠ್ಯ ಶಿಕ್ಷಣದ ಜೊತೆಗೆ ಪಠ್ಯೇತರ ಕಲೆಗಳಿಗೆ ಪ್ರೋತಾಹ ನೀಡುವ ಮಾದರಿಯಲ್ಲೇ ಈಜು ತರಬೇತಿ ಕಡ್ಡಾಯ ಪ್ರೋತ್ಸಾಹ ನೀಡಬೇಕು ಎಂದರು.
ನಾವು ತೆರಳುವ ಬಸ್ ಮತ್ತಿತರ ವಾಹನ ಆಕಸ್ಮಿಕವಾಗಿ ರಸ್ತೆ ಪಕ್ಕದ ಸೇತುವೆ, ನದಿ, ದೊಡ್ಡ ಕೆರೆಗೆ ಉರುಳಿದ ಸಂದರ್ಭದಲ್ಲಿ ಈಜು ಬಂದವರು ಪ್ರಾಣ ರಕ್ಷಿಸಿಕೊಳ್ಳಬಹುದು. ಈಜು ಬಾರದಿದ್ದರೆ ನೀರಲ್ಲೇ ಉಸಿರುಗಟ್ಟಿ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ.
ಈಜು ಕೇವಲ ವೈಯಕ್ತಿಕ ಸ್ವಾರ್ಥಕ್ಕಾಗಿ ಮಾತ್ರವಲ್ಲ. ಪ್ರಕೃತಿ ವಿಕೋಪದಂಥ ಪ್ರಸಂಗಗಳಲ್ಲಿ ಮನೆ, ಮಠ ನೀರಲ್ಲಿ ಕೊಚ್ಚಿಕೊಂಡು ಹೋಗುವ ಸಂದರ್ಭದಲ್ಲಿ ಉಳಿವು-ಅಳಿವಿನ ಮಧ್ಯ ಒದ್ದಾಡುವ ಹಸು ಕಂದಮ್ಮಗಳನ್ನು ರಕ್ಷಿಸಿ, ಪುಣ್ಯಕ್ಕೆ ಪಾತ್ರರಾಗಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮಕ್ಕಳಿಗೆ ಈಜು ತರಬೇತಿ ಕೊಡಿಸಬೇಕು ಎಂದು ಮನವಿ ಮಾಡಿದರು.
ಮಾಣಿಕಪ್ರಭು ಶಿಕ್ಷಣ ಸಮಿತಿ ಅಧ್ಯಕ್ಷ ಆನಂದರಾಜ ಪ್ರಭು ಪ್ರಾಸ್ತಾವಿಕ ಮಾತನಾಡಿ, ಈಜು ಸ್ಪರ್ಧೆ ವಿಶ್ವದ ಸಾಕಷ್ಟು ಕಡೆ ನಡೆಯುವುದನ್ನು ನಾವು ಕೇಳಿಯೂ ಇದ್ದೇವೆ. ಆದರೆ ರಾಜ್ಯದಲ್ಲಿ ಹಿಂದೆಂದೂ ನಡೆಯದ ಅಂಧ ಮಕ್ಕಳ ರಾಜ್ಯಮಟ್ಟದ ಈಜು ಸ್ಪರ್ಧೆ ಆಯೋಜಿಸಿರುವುದು ಪ್ರಭು ಸಂಸ್ಥಾನದ ವಿಶೇಷ. ರಾಜ್ಯದ ವಿವಿಧ ಜಿಲ್ಲೆಗಳಿಂದ 54 ಸ್ಪರ್ಧಾಗಳು ಭಾಗವಹಿಸಿದ್ದು ಐತಿಹಾಸಿಕ ಸಾಧನೆ ಎಂದರು. ಸ್ಪರ್ಧೆ ಎಂದ ಮೇಲೆ ಸೋಲು-ಗೆಲುವು ಸಹಜ. ಗೆಲುವಿಗಿಂತ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಿಕೆ ಅತ್ಯಂತ ಮಹತದ್ದು ಎಂದರು. ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಕರ ಸಬಲೀಕರಣ ಇಲಾಖೆ ಅಧಿಕಾರಿ ಜಗದೀಶ, ಮಾಣಿಕಪ್ರಭು ಶಿಕ್ಷಣ ಸಮಿತಿ ಕಾರ್ಯದರ್ಶಿ ಚೈತನ್ಯರಾಜಪ್ರಭು, ಸುಮಂಗಲಾ ಜಹಾಗಿರ್ದಾರ ವೇದಿಕೆಯಲ್ಲಿದ್ದರು. ಅಂಧ ಮಕ್ಕಳ ಶಾಲೆ ವ್ಯವಸ್ಥಾಪಕ ಪ್ರಭುಪಂಚಾಳ ಸ್ವಾಗತಿಸಿದರು. ಮುಖ್ಯಶಿಕ್ಷಕ ಕುಪೇಂದ್ರ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಪತ್ತಾರ ನಿರೂಪಿಸಿದರು. ತುಕಾರಾಮ ವಂದಿಸಿದರು.