ಹುಮನಾಬಾದ: ಸರ್ಕಾರದಿಂದ ಪಡೆಯುವ ಸಂಬಳಕ್ಕೆ ಬದ್ಧರಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಚುನಾಯಿತ ಪ್ರತಿನಿಧಿ ಮತ್ತು ಅಧಿಕಾರಿಗಳು ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಿದರೆ ಮಾತ್ರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣದ ಮಿನಿವಿಧಾನ ಸೌಧ ಸಭಾಂಗಣಧಲ್ಲಿ ತಾಲೂಕು ಆಡಳಿತ ಗುರುವಾರ ಹಮ್ಮಿಕೊಂಡಿದ್ದ 73ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣವನ್ನೇ ಸರ್ಕಾರ ಅನುದಾನ ರೂಪದಲ್ಲಿ ಬಿಡುಗಡೆ ಮಾಡುತ್ತದೆ ಎಂಬುದು ಗೊತ್ತಿದ್ದೂ ಸಾರ್ವಜನಿಕರು ಕಿಂಚಿತ್ತು ಜಾಗೃತರಾಗದೇ ಇರುವುದು ನೋವಿನ ಸಂಗತಿ ಎಂದರು. ಗುತ್ತಿಗೆದಾರರು ಕೈಗೊಳ್ಳುವ ರಸ್ತೆ, ಚರಂಡಿಗಳು ಕೆಲವೇ ತಿಂಗಳಲ್ಲಿ, ಸರ್ಕಾರಿ ಕಟ್ಟಡ ನಿರ್ಮಿಸಿದ ಕೆಲವೇ ವರ್ಷದಲ್ಲಿ ಕುಸಿಯುತ್ತವೆ ಎಂದರೆ ಏನರ್ಥ? ಈ ವಿಷಯ ಕುರಿತು ಸಾರ್ವಜನಿಕರು ಗಂಭೀರತೆ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಎಲ್ಲ ಹಂತದ ಚುನಾಯಿತ ಪ್ರತಿನಿಧಿಗಳು ತಮ್ಮನ್ನು ಆಯ್ಕೆ ಮಾಡಿದ ಜನರ ಸಮಸ್ಯೆ ಆಲಿಸಿ, ಬಗೆಹರಿಸುವುದನ್ನು ಬಿಟ್ಟು, ವೈಯಕ್ತಿಕ ಸ್ವಾರ್ಥಕ್ಕೆ ಹೆಚ್ಚು ಸಮಯ ನೀಡುತ್ತಿದ್ದಾರೆ. ನಮ್ಮ ಸ್ವಾರ್ಥ ತೊರೆದು ಜನರ ಸಮಸ್ಯೆಗೆ ಒತ್ತು ನೀಡಬೇಕು. ಅವರು ಚುನಾಯಿಸಿ ಕಳಿಸದಿದ್ದರೆ ನಮಗೆ ಈ ಕುರ್ಚಿ ಸನ್ಮಾಮಾನ ಸಿಗುತ್ತಿತೆ ಎಂಬ ಬಗ್ಗೆ ಒಂದೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಶಾಸಕನಾಗಿ, ಸಚಿವನಾಗಿ ಒಂದೊಮ್ಮೆ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲೇ ಕುಳಿತುಕೊಳ್ಳುವ ಅವಕಾಶ ಸಿಕ್ಕಿರುವುದರ ಕೀರ್ತಿ ನಮ್ಮನ್ನಾರಿಸಿ ಕಳಿಸಿದ ಮತದಾರರಿಗೆ ಸಲ್ಲಬೇಕು ಎಂದರು.
ಬ್ರೀಟೀಷರ ಕಪಿಮುಷ್ಠಿಯಿಂದ ಈ ದೇಶ ಬಿಡುಗಡೆಯಾಗಲು ನಮ್ಮ ಅಸಂಖ್ಯಾತ ರಾಷ್ಟ್ರ ಪ್ರೇಮಿಗಳು ತಮ್ಮ ಪ್ರಾಣವನ್ನೇ ಬಲಿ ನೀಡಿದ್ದಾರೆ. ಅಂಥವರ ತ್ಯಾಗ ಬಲಿದಾನಗಳಿಂದ ಗಳಿಸಿಕೊಂಡ ಸ್ವಾತಂತ್ರ್ಯ ಉಳಿಸಿ, ಬೆಳೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಯಿಂದ ಜನ ಕಂಗೆಟ್ಟಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಸರಳ ಸ್ವಾತಂತ್ರ್ಯೊತ್ಸವ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಿ.ಅಜೇಂದ್ರಸ್ವಾಮಿ ವಿಶೇಷ ಉಪನ್ಯಾಸ ನೀಡಿ, ಈ ದೇಶಕ್ಕೆ ಸುಮ್ಮನೇ ಸ್ವಾತಂತ್ರ್ಯ ಸಿಕ್ಕಿಲ್ಲ. ಅದಕ್ಕಾಗಿ ನಮ್ಮ ಹಿರಿಯರು ತಮ್ಮ ರಕ್ತಹರಿಸಿದ್ದಾರೆ. ವಿವಿಧ ಧರ್ಮ, ಜಾತಿ ಸಂಸ್ಕೃತಿ ಮೊದಲಾದ ಚೈವಿಧ್ಯತೆಗಳಿಂದ ಕೂಡಿದ ಈ ದೇಶ ಆಕರ್ಷಕ ಹೋದೋಟವಿದ್ದಂತೆ. ಇದಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಈ ನೆಲದಲ್ಲಿ ಜನ್ಮಪಡೆದ ಪ್ರತಿಯೊಬ್ಬರ ಕರ್ತವ್ಯ ಎಂದರು.
ಡಿವೈಎಸ್ಪಿ ಎಸ್.ಬಿ.ಮಹೇಶ್ವರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಭಾರತೀಬಾಯಿ ಶೇರಿಕಾರ, ಸಿಪಿಐ ಜೆ.ಎಸ್.ನ್ಯಾಮಗೌಡರ್, ಪಿಎಸ್‌ಐ ಎಲ್.ಟಿ.ಸಂತೋಷ, ತಾಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ, ಕಾರ್ಯನಿರ್ವಹಣಾ ಅಧಿಕಾರಿ ಡಾ|ಗೋವಿಂದ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಪುರಸಭೆಯ ಹಿರಿಯ ಸದಸ್ಯ ಅಪ್ಸರಮಿಯ್ಯ, ಎಸ್.ಎ.ಬಾಸೀತ ಮತ್ತಿತರರು ಉಪಸ್ಥಿತರಿದ್ದರು. ತಹಶೀಲ್ದಾರ್ ನಾಗಯ್ಯಸ್ವಾಮಿ ಹಿರೇಮs್ ಧ್ವಜಾರೋಹಣ ನೆರವೇರಿಸಿದರು. ರಮೇಶ ರಾಜೋಳೆ ನಿರೂಪಿಸಿದರು. ಭೀಮಣ್ಣ ದೇವಣಿ ವಂದಿಸಿದರು.