ಹುಮನಾಬಾದ್ : ತಾಲೂಕಿನ ಬೆಮಳಖೇಡಾ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐದು ಜನ ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ದಾರುಣ ಘಟನೆ ಶುಕ್ರವಾರ ಸಂಜೆ ನಡೆದಿದೆ. ತೆಲಂಗಾಣ ಗಡಿ ಗ್ರಾಮದಲ್ಲಿ ಸೊಯಾಬಿನ್ ರಾಶಿ ಮುಗಿಸಿಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಬೆಮಳಖೇಡಾ- ಉಡುಮನಳ್ಳಿ ರಸ್ತೆಯಲ್ಲಿ ಕೂಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಆಟೋಗೆ ಐಶ್ಚರ್ ವಾಹನ ಢಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಉಳಿದ ಮೂವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಕೊನೆಯುಸಿರೆಳೆದಿದ್ದಾರೆ. ಆಟೋದಲ್ಲಿ ಎಷ್ಟು ಜನ ಕಾರ್ಮಿಕರು ಪ್ರಯಾಣಿಸುತ್ತಿದ್ದರು ಮತ್ತು ಗಾಯಗೊಂಡವರ ಸಂಖ್ಯೆ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ನೆರೆ ತೆಲಂಗಾಣದ ಗಡಿಯಲ್ಲಿ ಸುಮಾರು 15 ಜನ ಕೂಲಿ ಕಾರ್ಮಿಕರ ಗುಂಪು ಸೊಯಾಬಿನ್ ಬೆಳೆ ರಾಶಿಗೆ ತೆರಳಿದ್ದರು. ರಾಶಿ ಕೆಲಸ ಮುಗಿಸಿಕೊಂಡು ಸ್ವಗ್ರಾಮ ಉಡುಮನಳ್ಳಿಗೆ ವಾಪಸ್ಸಾಗುವಾಗ ಈ ಘಟನೆ ನಡೆದಿದೆ. ಮೃತಪಟ್ಟ ಎಲ್ಲ ಕಾರ್ಮಿಕರು ಹುಮನಾಬಾದ ತಾಲೂಕಿನ ಉಡಮನಳ್ಳಿ ಗ್ರಾಮದವರಾಗಿದ್ದು, ಪ್ರಭಾವತಿ ದೇವೇಂದ್ರ (36), ಯಾದಮ್ಮ ಅಮೃತ (40), ಗುಂಡಮ್ಮ ನರಸಿಂಗ್ (60), ಜಗದೇವಿ ಪ್ರಭು (34) ಮತ್ತು ರುಕ್ಮೀಣಿ ಅಮೃತ (60) ಎಂದು ಗುರುತಿಸಲಾಗಿದೆ. ಆಟೋ ಚಾಲಕ ಜಗನ್ನಾಥ ಸಿದ್ದಪ್ಪ (40) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನಾ ಸ್ಥಳಕ್ಕೆ ಬೆಮಳಖೇಡಾ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.