Advertisement

ಕಾಯ್ದೆ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ

03:41 PM Nov 17, 2019 | Naveen |

ಹುಮನಾಬಾದ: ಸಾರ್ವಜನಿಕರ ಸಹಕಾರವಿಲ್ಲದೇ ಯಾವುದೇ ಕಾಯ್ದೆ ಅನುಷ್ಠಾನ ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ “ಬೇಟಿ ಬಚಾವ್‌ ಬೇಟಿ ಪಡಾವ್‌’ ಯೋಜನೆಗೆ ಪಾಲಕರು ಸ್ವಯಂ ಪ್ರೇರಣೆಯಿಂದ ಸಹಕರಿಸಿದಾಗ ಮಾತ್ರ ಯೋಜನೆ ಯಶಸ್ವಿಯಾಗಲು ಸಾಧ್ಯ ಎಂದು ಹುಮನಾಬಾದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್‌ ನ್ಯಾಯಾ ಧೀಶೆ ಸರಸ್ವತಿ ದೇವಿ ಹೇಳಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್‌ ಶಿಶು ಅಭಿವೃದ್ಧಿ ಇಲಾಖೆಗಳು ಸಂಯುಕ್ತವಾಗಿ “ಬೇಟಿ ಬಚಾವ್‌ ಬೇಟಿ ಪಡಾವ್‌’ ಯೋಜನೆಯಡಿ ಶನಿವಾರ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪುರುಷ ಪ್ರಧಾನವಾದ ಈ ರಾಷ್ಟ್ರದಲ್ಲಿ ಶತಶತಮಾನಗಳಿಂದ ಹೆಣ್ಣಿಗೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇರಿದಂತೆ ಪ್ರತಿಯೊಂದು ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಆಲೋಚಿಸಿ, ನಿರ್ಧಾರ ತೆಗೆದುಕೊಳ್ಳುವ ಹಕ್ಕು ನೀಡಲಾಗಿಲ್ಲ. ಕುಟುಂಬದಲ್ಲಿ ಒಂದು ಸಣ್ಣ ಕೆಲಸ ಮಾಡಲು ಈಗಲೂ ಪತಿಯ ಪರವಾನಗಿಯನ್ನು ಪಡೆಯಬೇಕಾದ ಸ್ಥಿತಿ ಇರುವುದೇ ಈ ದೇಶದಲ್ಲಿನ ಅಸಮಾನತೆಗೆ ನಿದರ್ಶನ ಎಂದರು.

ಶಿಕಣ ಜ್ಞಾನಾರ್ಜನೆಗೆ ಹೊರತು ದ್ರವ್ಯಾರ್ಜನೆಗಲ್ಲ ಎಂಬುದನ್ನು ಈ ದೇಶದ ಜನ ಅರ್ಥೈಸಿಕೊಳ್ಳಬೇಕು. ಆದರೆ ಮದುವೆಯಂತಹ ಪ್ರಸಂಗಗಳಲ್ಲಿ ಮಹಿಳೆ ತಾನು ಪಡೆದಿರುವ ಶಿಕ್ಷಣವನ್ನು ಪ್ರತಿಷ್ಟೆಯಾಗಿ ಸ್ವೀಕರಿಸುವುದು ಮತ್ತು ಗಂಡು ಮಗು ವಂಶೋದ್ಧಾರಕ ಎಂದು ನಂಬಿರುವುದು, ಹೆಣ್ಣು ಭ್ರೂಣ ಹತ್ತೆಯಂತಹ ದುಷ್ಕೃತ್ಯದಿಂದ ಪ್ರಸ್ತುತ ಪುರುಷ ಹಾಗೂ ಸ್ತ್ರೀಯರ ಜನನ ಪ್ರಮಾಣ ಅನುಪಾತದಲ್ಲಿ ಸಾಕಷ್ಟು ಅಂತರ ಇರುವುದು ಸಮೀಕ್ಷೆಗಳಿಂದ ತಿಳಿದುಬಂದಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು, ಮನೆ ಮೊದಲ ಪಾಠಶಾಲೆ, ಮೊದಲು ಗುರು ತಾಯಿ. ಪ್ರತೀ ಪುರುಷನ ಸಾಧನೆಯ ಹಿಂದೆ ಒಬ್ಬ ಮಹಿಳೆಯ ಪ್ರೋತ್ಸಾಹ ಇದೆ ಎನ್ನುವುದು ಶತ ಸತ್ಯ. ಯಾವ ದೇಶದಲ್ಲಿ ಹೆಣ್ಣನ್ನು ಗೌರವಿಸಲಾಗುತ್ತದೋ ಆ ದೇಶ ಸಕಲ ಸಂಪತ್ತುಗಳಿಂದ ಕಂಗೊಳಿಸುತ್ತದೆ ಎಂಬ ಮಾತು ಅಕ್ಷರಶಃ ಸತ್ಯ. ಸರ್ಕಾರದ ಬೇಟಿ ಬಚಾವ್‌ ಬೇಟಿ ಪಡಾವ್‌ ನಿಜಕ್ಕೂ ಅರ್ಥಪೂರ್ಣ ಯೋಜನೆ. ಇದರ ಅನುಷ್ಟಾನಕ್ಕಾಗಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.

Advertisement

ಹಳ್ಳಿಖೇಡ(ಕೆ) ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕಿ ಜ್ಯೋತಿ ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈಜಪ್ಪ ಫುಲೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಪ್ರಧಾನ ಸಿವಿಲ್‌ ನ್ಯಾಯಾಧೀಶ ಅಪ್ಪಾಸಾಬ್‌ ನಾಯಕ್‌, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಗಗನ್‌ ಎಂ.ಆರ್‌., ತಹಶೀಲ್ದಾರ್‌ ನಾಗಯ್ಯಸ್ವಾಮಿ ಹಿರೇಮಠ, ಶಿಶು ಅಭಿವೃದ್ಧಿ ಅಧಿಕಾರಿ ಶೋಭಾ ಕಟ್ಟಿ, ಸರ್ಕಾರಿ ಸಹಾಯಕ ಅಭಿಯೋಜಕ ಗಂಗಪ್ಪ ಪಾಟೀಲ, ಪಿಎಸ್‌ಐ ರವಿ ಹೂಗಾರ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಸ್‌.ಚೆನ್ನಪ್ಪ, ಹಿರಿಯ ಆರೋಗ್ಯ ಸಹಾಯಕ ತೀರ್ಥಪ್ಪ ಭೀಮಶಟ್ಟಿ, ಶಂಕರ ಕನಕ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾ ಅಧ್ಯಕ್ಷ ಶಾಂತವೀರ ಯಲಾಲ್‌, ಸಿಆರ್‌ಪಿ ಭೀಮಣ್ಣ ದೇವಣಿ, ಪ್ರಕಾಶರೆಡ್ಡಿ, ಸಾಕ್ಷರತಾ ತಾಲೂಕು ಘಟಕದ ಸಂಯೋಜಕ ರಮೇಶ, ನರೇಗಾ ನೋಡಲ್‌ ಅಧಿಕಾರಿ ವಿಷ್ಣುಕುಮಾರ ಮತ್ತಿತರರು ವೇದಿಕೆಯಲ್ಲಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಪಂಚಾಯಿತಿ ಸಭಾಂಗಣದ ವರೆಗೆ ನ್ಯಾಯಾಧೀಶರ ನೇತೃತ್ವದಲ್ಲಿ ರ್ಯಾಲಿ ನಡೆಯಿತು. ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಶಿಕಲಾ ಪಾಟೀಲ ಪ್ರಾರ್ಥಿಸಿದರು. ವಿಜಯಕುಮಾರ ನಾತೆ ನಿರೂಪಿಸಿದರು. ಹಿರಿಯ ಆರೋಗ್ಯ ಸಹಾಯಕ ತೀರ್ಥಪ್ಪ ಭೀಮಶಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next