Advertisement
ಈ ಎಚ್‌ಪಿವಿ ಸೋಂಕು ಬರಲು ಹಲವಾರು ಕಾರಣಗಳಿವೆ. ಹದಿಹರೆಯದ ಪ್ರಾಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದವರು, ಒಂದಕ್ಕಿಂತ ಹೆಚ್ಚು ಜನರೊಡನೆ ಲೈಂಗಿಕ ಸಂಬಂಧ ಹೊಂದಿರುವವರು, Immuno compromised women ಅಂದರೆ HIV, STD ಸೋಂಕು ಇರುವವರು.
Related Articles
Advertisement
ಎಚ್‌ಪಿವಿ ವಿರುದ್ಧ ಲಸಿಕೆ
ಬಾಲಕಿಯರು ಏಕೆ ಎಚ್‌ಪಿವಿ ವಿರುದ್ಧ ಲಸಿಕೆ ಪಡೆದುಕೊಳ್ಳಬೇಕು?
ಇದು ಗರ್ಭಕಂಠದ ಕ್ಯಾನ್ಸರ್ ಉಂಟಾಗುವುದನ್ನು ತಡೆಗಟ್ಟುತ್ತದೆ. ಎಚ್‌ಪಿವಿ ಎಂಬುದಾಗಿಯೂ ಕರೆಯಲ್ಪಡುವ ಹ್ಯೂಮನ್ ಪ್ಯಾಪಿಲೋಮಾವೈರಸ್ ಲೈಂಗಿಕ ಚಟುವಟಿಕೆಯಿಂದ ಪ್ರಸಾರವಾಗುತ್ತದೆ. ಕೆಲವು ವಿಧವಾದ ಎಚ್‌ಪಿವಿಗಳು ಜನನಾಂಗದಲ್ಲಿ ಸಣ್ಣ ಗಂಟುಗಳನ್ನು ಉಂಟುಮಾಡಿದರೆ ಇನ್ನು ಕೆಲವು ವಿಧಗಳು ಕ್ಯಾನ್ಸರ್ ಗೆ ಕಾರಣವಾಗಬಲ್ಲವು. ಎಚ್‌ಪಿವಿಗೆ ವಿರುದ್ಧವಾಗಿ ಲಸಿಕೆ ಹಾಕಿಸಿಕೊಳ್ಳುವುದರಿಂದ ಕ್ಯಾನ್ಸರ್ ತಡೆಗಟ್ಟಲು ಸಾಧ್ಯ; ಇಲ್ಲಿ ಎಚ್‌ಪಿವಿ ಲಸಿಕೆಯ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿಗಳಿವೆ.
9ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ಎಚ್‌ಪಿವಿ ಲಸಿಕೆಯನ್ನು ಆದ್ಯತೆಯಲ್ಲಿ ಏಕೆ ನೀಡಲಾಗುತ್ತದೆ?
9ರಿಂದ 14 ವರ್ಷ ವಯೋಮಾನದೊಳಗಿನ ಬಾಲಕಿಯರಿಗೆ ಎಚ್‌ಪಿವಿ ಲಸಿಕೆ ನೀಡುವುದು ಬಹಳ ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಅವರು ಲೈಂಗಿಕವಾಗಿ ಸಕ್ರಿಯರಾಗುವುದಕ್ಕೆ ಮತ್ತು ಹ್ಯೂಮನ್ ಪ್ಯಾಪಿಲೋಮಾ ವೈರಸ್ ಸೋಂಕಿಗೆ ತುತ್ತಾಗುವುದಕ್ಕೆ ಮುನ್ನ ಲಸಿಕೆಯು ಅವರಿಗೆ ರಕ್ಷಣೆ ಒದಗಿಸುತ್ತದೆ.
ನೀವು ಈಗಾಗಲೇ ಲೈಂಗಿಕವಾಗಿ ಸಕ್ರಿಯರಾಗಿದ್ದರೂ ಎಚ್‌ಪಿವಿ ಲಸಿಕೆಯು ಪ್ರಯೋಜನಕಾರಿಯೇ?
ಹೌದು, ಲಸಿಕೆಯು ನೀವು ಈಗಾಗಲೇ ಸೋಂಕಿಗೆ ಒಳಗಾಗದ ಕೆಲವು ವಿಧದ ಎಚ್‌ಪಿವಿಗಳಿಂದ ರಕ್ಷಣೆ ಒದಗಿಸುವ ಮೂಲಕ ನಿಮಗೆ ಪ್ರಯೋಜನ ಒದಗಿಸುವುದು ಸಾಧ್ಯ. ಆದರೆ ಯಾವುದೇ ಲಸಿಕೆಗಳು ಈಗಾಗಲೇ ಇರುವ ಎಚ್‌ಪಿವಿ ಸೋಂಕನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿಲ್ಲ. ನೀವು ಸೋಂಕಿಗೆ ಒಳಗಾಗಿರದ ಕೆಲವು ನಿರ್ದಿಷ್ಟ ವಿಧದ ಎಚ್‌ಪಿವಿಗಳಿಂದ ಮಾತ್ರವೇ ಲಸಿಕೆಯು ನಿಮಗೆ ರಕ್ಷಣೆ ಒದಗಿಸುತ್ತದೆ.
ಎಚ್‌ಪಿವಿ ಸೋಂಕು ಮತ್ತು ಗರ್ಭಕಂಠದ ಕ್ಯಾನ್ಸರ್‌ನಿಂದ ರಕ್ಷಿಸಿಕೊಳ್ಳಲು ಅತ್ಯಂತ ಮುಖ್ಯವಾದ ಸಾಧನ ಎಚ್‌ಪಿವಿ ಲಸಿಕೆ. ಕ್ಯಾನ್ಸರ್ ಬಾರದ ಹಾಗೆ ತಡೆಗಟ್ಟುವುದು ಅದಕ್ಕೆ ಚಿಕಿತ್ಸೆ ಒದಗಿಸುವುದಕ್ಕಿಂತ ಉತ್ತಮ.
ಬಾಲಕಿಯರಿಗೆ ರಕ್ಷಣೆ ಒದಗಿಸಲು ಎಷ್ಟು ಡೋಸ್ ಅಗತ್ಯ?
15 ವರ್ಷಕ್ಕಿಂತ ಕೆಳಗಿನ ವಯೋಮಾನ ಬಾಲಕಿಯರಿಗೆ, ಎಚ್‌ಪಿವಿ ಲಸಿಕೆಯನ್ನು ಎರಡು ಡೋಸ್‌ಗಳಾಗಿ ನೀಡಲಾಗುತ್ತದೆ. 1ನೇ ಡೋಸ್ (0ನೇ ದಿನ), ಅನಂತರ 6 ತಿಂಗಳುಗಳ ಬಳಿಕ 2ನೇ ಡೋಸ್.
– 15-16 ವರ್ಷ ವಯಸ್ಸಿನ ಯುವತಿಯರಿಗೆ, ಎಚ್‌ಪಿವಿ ಲಸಿಕೆಯನ್ನು 3 ಡೋಸ್‌ಗಳಾಗಿ ನೀಡಲಾಗುತ್ತದೆ. 1ನೇ ಡೋಸ್ (0ನೇ ದಿನ), 1 ತಿಂಗಳ ಅನಂತರ 2ನೇ ಡೋಸ್ ಹಾಗೂ 1ನೇ ಡೋಸ್‌ನ 6 ತಿಂಗಳುಗಳ ಬಳಿಕ 3ನೇ ಡೋಸ್.
ವಯಸ್ಕರಿಗೂ ಎಚ್‌ಪಿವಿ ವಿರುದ್ಧ ಲಸಿಕೆ ನೀಡಬಹುದೇ?
ಲಸಿಕೆ ಆರಂಭಿಸುವುದಕ್ಕೆ ಶಿಫಾರಸು ಮಾಡಲಾಗಿರುವ ವಯಸ್ಸು 9-14 ವರ್ಷಗಳು. ವಿಳಂಬ ಲಸಿಕಾಕರಣಕ್ಕೆ 26 ವರ್ಷಗಳ ವರೆಗೆ ಅನುಮತಿ ಇದೆ.
ಎಚ್‌ಪಿವಿ ಲಸಿಕೆಯಿಂದ ಯಾವುದೇ ಆರೋಗ್ಯ ಅಪಾಯಗಳು ಅಥವಾ ಅಡ್ಡ ಪರಿಣಾಮಗಳು ಇವೆಯೇ?
ಎಚ್‌ಪಿವಿ ಲಸಿಕೆಯು ಸುರಕ್ಷಿತ ಎಂಬುದು ಅನೇಕ ಅಧ್ಯಯನಗಳಿಂದ ಸಾಬೀತಾಗಿದೆ. ಅನುಭವಕ್ಕೆ ಬರಬಹುದಾದ ಲಸಿಕೆಯ ಅಡ್ಡ ಪರಿಣಾಮಗಳಲ್ಲಿ ಇಂಜೆಕ್ಷನ್ ಚುಚ್ಚಿದ ಸ್ಥಳದಲ್ಲಿ ನೋವು, ಕೆಂಪಗಾಗುವುದು ಒಳಗೊಂಡಿವೆಯಲ್ಲದೆ ಜ್ವರ ಕೂಡ ಬರಬಹುದು.
– ಡಾ| ಅಪರ್ಣಾ ರಾಜೇಶ್ ಭಟ್
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು
ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ವಿಭಾಗ, ಕೆಎಂಸಿ, ಮಂಗಳೂರು)