ಲಂಡನ್: ಬರೋಬ್ಬರಿ 2 ಸಾವಿರ ವರ್ಷಗಳ ಹಿಂದಿನ ಹೇನಿನಲ್ಲಿದ್ದ ಮಾನವನ ಡಿಎನ್‌ಎಯನ್ನು ಅಂತಾರಾಷ್ಟ್ರೀಯ ಸಂಶೋಧಕರ ತಂಡವೊಂದು ಯಶಸ್ವಿಯಾಗಿ ಹೊರತೆಗೆದಿದೆ.
ಈ ಹೇನುಗಳು ಮಾನವನ ತಲೆಕೂದಲಿನಲ್ಲಿ ಮೊಟ್ಟೆಯನ್ನು ಅಂಟಿಸಲು ಬಳಸುತ್ತಿದ್ದ ಅಂಟುಹಿಟ್ಟಿನಿಂದ ಈ ಡಿಎನ್‌ಎಯನ್ನು ಹೊರತೆಗೆಯಲಾಗಿದೆ. ಅರ್ಜೆಂಟೀನಾದಲ್ಲಿರುವ ಸುಮಾರು 1,500ರಿಂದ 2,000 ವರ್ಷಗಳ ಹಿಂದಿನ ಮಮ್ಮಿಗಳಲ್ಲಿ ಈ ಡಿಎನ್‌ಎ ಇತ್ತು.
ಮಾನವನ ಅಸ್ತಿತ್ವದುದ್ದಕ್ಕೂ ಹೇನುಗಳು ಜೀವಿಸುತ್ತಾ ಬಂದಿವೆ. ಹೀಗಾಗಿ ಈ ಹೊಸ ಅಧ್ಯಯನವು ನಮ್ಮ ಪೂರ್ವಿಕರ ಕುರಿತ ಮಾಹಿತಿಯ ಭಂಡಾರದ ಬಾಗಿಲನ್ನು ತೆರೆಯುವ ಸಾಧ್ಯತೆಯಿದೆ ಎಂದು ಯುಕೆಯ ಯುನಿವರ್ಸಿಟಿ ಆಫ್ ರೀಡಿಂಗ್‌ನ ಡಾ| ಅಲೆಜಾಂಡ್ರಾ ಪೆರೋಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ದೇಶದಲ್ಲಿ ಹೆಚ್ಚಲಿದೆ ಆನ್‌ಲೈನ್ ಖರೀದಿ : 2025ರ ವೇಳೆಗೆ ಶೇ.17ಕ್ಕೆ ಏರಿಕೆ ಸಾಧ್ಯತೆ
ಜುರಾಸಿಕ್ ಪಾರ್ಕ್ ಸಿನೆಮಾದಲ್ಲಿ ಡೈನೋಸರ್‌ನ ಡಿಎನ್‌ಎ ಹೊತ್ತು ಸೊಳ್ಳೆಯೊಂದು ಎಸ್ಕೇಪ್ ಆಗುವ ಕಾಲ್ಪನಿಕ ಕಥೆಯ ಮಾದರಿಯಲ್ಲೇ, ನಮ್ಮ ತಲೆಕೂದಲಿನಲ್ಲಿ ಹೇನುಗಳು ಉತ್ಪತ್ತಿ ಮಾಡುವ ಅಂಟಂಟಾದ ವಸ್ತುವಿನಲ್ಲಿ ಮಾನವನ ವಂಶವಾಹಿಯ ಮಾಹಿತಿಯೂ ಅಡಗಿರಬಹುದು ಎನ್ನುವುದು ಸಂಶೋಧಕರ ವಾದ. ಅಲ್ಲದೇ ಹೇನಿನ ಜೀವವಿಜ್ಞಾನವು ಸಾವಿರಾರು ವರ್ಷಗಳ ಹಿಂದೆ ಜನರು ಹೇಗೆ ಜೀವಿಸಿದ್ದರು ಮತ್ತು ಮೃತಪಟ್ಟಿದ್ದರು ಎಂಬುದರ ಬಗ್ಗೆ ಮೌಲ್ಯಯುತ ಸುಳಿವನ್ನೂ ನೀಡಬಹುದು ಎನ್ನುವುದು ಅವರ ಲೆಕ್ಕಾಚಾರವಾಗಿದೆ.