Advertisement

ಹುಲ್ಕಡಿಕೆ: ರಸ್ತೆ, ಸೇತುವೆಗೆ ಬೇಡಿಕೆ: ದಶಕಗಳಿಂದ ಸಿಗದ ಮೂಲ ಸೌಕರ್ಯ-ಪ್ರಧಾನಿ ಮೋದಿಗೆ ಮೊರೆ

01:37 PM Jan 09, 2023 | Team Udayavani |

ಕುಂದಾಪುರ : ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯ ಪಶ್ವಿ‌ಮ ಘಟ್ಟದ ತಪ್ಪಲು ಪ್ರದೇಶವಾದ ಗೋಳಿಹೊಳೆ ಗ್ರಾ.ಪಂ. ವ್ಯಾಪ್ತಿಯ ಎಳಜಿತ್‌ ಗ್ರಾಮದ ಹುಲ್ಕಡಿಕೆ ಎಂಬಲ್ಲಿ ಸುಮಾರು 250 ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರುವ ಮರಾಠಿ ನಾಯ್ಕ ಸಮುದಾಯದ ಬುಡಕಟ್ಟು ಜನಾಂಗ ಸರಿಸುಮಾರು 300 ವರ್ಷಗಳಿಂದ ವಾಸಿಸುತ್ತಿದೆ. ಸಂಪರ್ಕ ರಸ್ತೆ, ವಿದ್ಯುತ್‌, ಮೊಬೈಲ್‌ ನೆಟ್‌ವರ್ಕ್‌ ಸಹಿತ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಇಲ್ಲಿನ ಜನರ ಸ್ಥಿತಿ ಶೋಚನೀಯವಾಗಿದೆ.

Advertisement

ಇಲ್ಲಿನ ಹೊಸೇರಿಯಿಂದ ಹುಲ್ಕಡಿಕೆ ಸಂಪರ್ಕದ ಸುಮಾರು 3-4 ಕಿ.ಮೀ. ದೂರದ ರಸ್ತೆ ಹೊಂಡಗಳಿಂದ‌ ಕೂಡಿದ್ದು, 15-20 ವರ್ಷದ ಹಿಂದೆ ರಸ್ತೆ ಮಾಡಿದ್ದು ಆ ಬಳಿಕ ತೇಪೆ ಕೂಡ ಹಾಕಿಲ್ಲ. ಕರೆ ಮಾಡಬೇಕಾದರೆ ನೆಟ್‌ವರ್ಕ್‌ಗಾಗಿ ಕಿ.ಮೀ.ಗಟ್ಟಲೆ ದೂರ ಬರಬೇಕು. ಇದು ಇಲ್ಲಿನ ಗ್ರಾಮಸ್ಥರ ವಾಸ್ತವ ಸ್ಥಿತಿ.

ಎಲ್ಲರಿಗೂ ಸಂಕಷ್ಟ
ಅನಾರೋಗ್ಯ ಉಂಟಾದರೆ ಇಲ್ಲಿಗೆ ರಿûಾ, ಆ್ಯಂಬುಲೆನ್ಸ್‌ ಬರುತ್ತಿಲ್ಲ. ಹೆರಿಗೆ ನೋವು ಬಂದರೆ ಆಸ್ಪತ್ರೆಗೆ ಕರೆದೊಯ್ಯಲು ಪಡುವ ಪಾಡು ಅನುಭವಿಸಿದವರಿಗಷ್ಟೇ ಗೊತ್ತು.

ಮೂಲಸೌಕರ್ಯಗಳಿಗೆ ಆದ್ಯತೆ
ನೀಡಿ ಶೀಘ್ರ ವ್ಯವಸ್ಥೆ ಕಲ್ಪಿಸಿ ಎಂದು ಸ್ಥಳೀಯ ಮಹಿಳೆಯರು ಅಸಮಾಧಾನ ಹೊರ ಹಾಕಿದರು. ಶಾಲೆ-ಕಾಲೇಜಿಗೆ ತೆರಳಲು ತುಂಬಾ ತೊಂದರೆಯಾಗುತ್ತಿದ್ದು, ಸಮಸ್ಯೆ ಬಗೆಹರಿಸದಿದ್ದರೆ ಚುನಾವಣೆ ಬಹಿಷ್ಕಾರ ಹಾಕುವುದಾಗಿ ವಿದ್ಯಾರ್ಥಿಗಳು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಗವಿಕಲರಿಗೂ ಸಂಕಟ
ಹುಲ್ಕಡಿಕೆಯಿಂದ ಗುಡಿಕೇರಿಗೆ ಹೋಗಲು ರಸ್ತೆ, ಸೇತುವೆ ಸಂಪರ್ಕವಿಲ್ಲ. ಇಲ್ಲಿನ ನಿವಾಸಿಗಳಾದ ಸುರೇಶ್‌ – ಸುಜಾತಾ ದಂಪತಿಯ ಇಬ್ಬರು ಮಕ್ಕಳು ಅಂಗವಿಕಲರಾಗಿದ್ದು, ನಿತ್ಯ ಬೆಳಗ್ಗೆ 9ಕ್ಕೆ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸುರೇಶ್‌ ಶಾಲೆಗೆ ಬಿಡಬೇಕು. ಮಕ್ಕಳೊಂದಿಗೆ ಸುಜಾತಾ ಸಂಜೆ 4ರವರೆಗೆ ಇದ್ದು, ವಾಪಾಸು ಸುರೇಶ್‌ ಅವರನ್ನು ಕರೆತರಬೇಕು. ಹೀಗಾಗಿ ಸುರೇಶ್‌ ಕೆಲಸಕ್ಕೆ ಹೋಗಲು ಸಮಸ್ಯೆಯಾಗುತ್ತಿದೆ. ಅಂಗವಿಕಲ ಮಕ್ಕಳಿಗೆ ಸಿಗಬೇಕಾದ ಸೌಕರ್ಯದ ಜತೆಗೆ ಹುಲ್ಕಡಿಕೆಯಿಂದ ಗುಡಿಕೇರಿವರೆಗೆ 1 ಕಿ.ಮೀ. ರಸ್ತೆ ಹಾಗೂ ಸೇತುವೆ ಅಗತ್ಯವಿದೆ.

Advertisement

ಕಾಡುಪ್ರಾಣಿ ಹಾವಳಿ
ಕಾಡುಪ್ರಾಣಿ ಹಾವಳಿಯಿಂದ ಕೃಷಿಕರು ಕಂಗಾಲಾಗಿದ್ದಾರೆ. ಹಲವು ವರ್ಷಗಳಿಂದ ಆಶ್ವಾಸನೆ ನಂಬಿಕೊಂಡು ಬಂದಿದ್ದೇವೆ. ಕಳೆದ ಗ್ರಾ.ಪಂ. ಚುನಾವಣೆ ವೇಳೆ ಬಂದ ಶಾಸಕರು ರಸ್ತೆ ನಿರ್ಮಾಣದ ಭರವಸೆ ನೀಡಿದ್ದರು. ಸುಮಾರು 300 ವರ್ಷದಿಂದ ಮರಾಠಿ ಜನಾಂಗ ಇಲ್ಲಿ ನೆಲೆಸಿದೆ. ಹಲವು ಶಾಸಕರು ಆಡಳಿತ ನಡೆಸಿದರೂ ಕೂಡ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಇಂದು-ನಾಳೆ ಮಾಡುತ್ತೇವೆ ಎಂಬ ಭರವಸೆ ಹುಸಿಯಾಗಿದೆ. ಜೈಲು ವಾಸದಂತೆ ನಾವಿಲ್ಲಿ ಬದುಕುವಂತಾಗಿದೆ. ಮೂಲಸೌಕರ್ಯ ಒದಗಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುತ್ತೇವೆ ಎಂದು ದಿನಕರ ಮರಾಠಿ ಹಾಗೂ ಪುಟ್ಟಯ್ಯ ಮರಾಠಿ ಹುಲ್ಕಡಿಕೆ ಎಚ್ಚರಿಸಿದ್ದಾರೆ.

ಪ್ರಧಾನಿ ಮೋದಿಗೆ ಮೊರೆ
ಹಲವು ವರ್ಷಗಳಿಂದ ಇಲ್ಲಿನ ಹತ್ತಾರು ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಇತ್ತೀಚೆಗೆ ಇಲ್ಲಿನ ನೂರಾರು ಮಂದಿ ಗ್ರಾಮಸ್ಥರು ಪ್ರತಿಭಟಿಸಿ, ಆಕ್ರೋಶ ಹೊರ ಹಾಕಿದರು. ಪ್ರಧಾನಿ ಮೋದಿಯವರೇ, ನಮ್ಮ ಸಮಸ್ಯೆ ಬಗೆಹರಿಸಿ ಎಂದು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು ಒತ್ತಾಯಿಸಿದ್ದಾರೆ. ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬುಡಕಟ್ಟು ಜನಾಂಗದ ಬಗ್ಗೆ ಎಲ್ಲ ಪಕ್ಷದವರನ್ನು ನಿರ್ಲಕ್ಷé ವಹಿಸಿದ್ದಾರೆ. ಈಗಲಾದರೂ ನಮ್ಮ ಬಗ್ಗೆ ಸ್ಥಳೀಯ ಶಾಸಕರು, ಅಧಿಕಾರಿಗಳು ಗಮನಹರಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲಿ ಎಂದು ಸುಬ್ಬಯ್ಯ ಮರಾಠಿ ಹುಲ್ಕಡಿಕೆ ಆಗ್ರಹಿಸಿದ್ದಾರೆ.

ಎರಡು ಕಡೆ ರಸ್ತೆ ಅಭಿವೃದ್ಧಿ
ಹುಲ್ಕಡಿಕೆಯಿಂದ ಭೂಸಕ್ರಾಡಿ ರಸ್ತೆ ಹಾಗೂ ಹುಲ್ಕಡಿಕೆಯಿಂದ ಹಾಲಂಬೇರು ಹೋಗುವ ರಸ್ತೆಯನ್ನು 1.04 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಗೋಳಿಹೊಳೆ ತೀರಾ ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿನ ರಸ್ತೆ, ಇನ್ನಿತರ ಅಭಿವೃದ್ಧಿಗೆ ದೊಡ್ಡ ಮಟ್ಟದ ಅನುದಾನದ ಅಗತ್ಯವಿದೆ. ಈ ಬಗ್ಗೆ ಕೆಲವೊಂದಕ್ಕೆ ಮನವಿ ಸಲ್ಲಿಸಲಾಗಿದೆ. ಹುಲ್ಕಡಿಕೆ ಗ್ರಾಮಸ್ಥರ ಬೇಡಿಕೆ ಬಗ್ಗೆ ಗಮನದಲ್ಲಿದ್ದು, ಆದಷ್ಟು ಅಲ್ಲಿನ ಪ್ರಮುಖ ರಸ್ತೆಗೆ ಅನುದಾನವಿರಿಸಿ, ಅಭಿವೃದ್ಧಿಪಡಿಸಲಾಗುವುದು. ಬಾಕಿ ಅಗತ್ಯ ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.
– ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next