ಹುಳಿಯಾರು: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ವಿಧಾನಸಭಾ ಕ್ಷೇತ್ರಕ್ಕೊಂದರಂತೆ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆ ತೆರೆದಿದೆ. ಆದರೆ ಶಿಕ್ಷಕರು ಸೇರಿದಂತೆ ಕನಿಷ್ಠ ಮೂಲಸೌಕರ್ಯ ಕೊರತೆಯಿಂದ ಸರ್ಕಾರ ರೂಪಿಸಿರುವ ಯೋಜನೆ ಸಫಲವಾಗುವ ಲಕ್ಷಣ ಕಾಣುತ್ತಿಲ್ಲ.
ಹುಳಿಯಾರಿನಲ್ಲಿ ಈ ವರ್ಷ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಿದ್ದು, ಪ್ರವೇಶ ಪಡೆಯಲು ಜನ ಮುಗಿಬಿದ್ದಿದ್ದರು. ಲಾಟರಿ ಮೂಲಕ ಪ್ರವೇಶ ಲಾಟರಿ ಮೂಲಕ ಪ್ರವೇಶ ಪಡೆದವರು ಹಿರಿಹಿರಿ ಹಿಗ್ಗಿದರೆ, ಪ್ರವೇಶ ಸಿಗದವರು ನಿರಾಸೆಗೊಂಡರು.
336 ಮಂದಿ ಪ್ರವೇಶ: ಹುಳಿಯಾರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ಗೆ ಈ ವರ್ಷ ಎಲ್ಕೆಜಿಯಿಂದ 7ನೇ ತರಗತಿಗೆ ಬರೋಬ್ಬರಿ 336 ಮಂದಿ ಪ್ರವೇಶ ಪಡೆದಿ ದ್ದಾರೆ. 1ನೇ ತರಗತಿಗೆ 60 ಮಕ್ಕಳು ಹಾಗೂ 6ನೇ ತರಗತಿಗೆ 110 ಮಕ್ಕಳು ಪ್ರವೇಶ ಪಡೆದಿದ್ದಾರೆ. ಸರ್ಕಾರದ ನಿಯಮದಂತೆ 30 ಮಕ್ಕಳಿಗೆ ಒಬ್ಬರಂತೆ ಈ ಶಾಲೆಗೆ ಕನಿಷ್ಠ 10 ಶಿಕ್ಷಕರು ಬೇಕು. ಆದರೆ ಇರೋದು ಕೇವಲ 4 ಮಂದಿ ಮಾತ್ರ. ಇದರಲ್ಲಿ ಒಬ್ಬರು ಹೆರಿಗೆ ರಜೆ ಪಡೆದಿದ್ದರೆ, ಒಬ್ಬರು ಮುಖ್ಯ ಶಿಕ್ಷಕರು, ಮತ್ತೂಬ್ಬರು ದೈಹಿಕ ಶಿಕ್ಷಣ ಶಿಕ್ಷಕರು!.
ಒಂದೇ ಕೊಠಡಿಯಲ್ಲಿ ಪಾಠ: ಮೂವರು ಶಿಕ್ಷಕರನ್ನು ಡೆಪ್ಟೇಷನ್ ಮೇಲೆ ಕೊಟ್ಟಿದ್ದರೂ, ಇವರಲ್ಲಿ ಒಬ್ಬರು ದೈಹಿಕ ಶಿಕ್ಷಣ ಶಿಕ್ಷಕರು. ಪರಿಣಾಮ ಕುರಿ ದೊಡ್ಡಿಯಂತೆ ಮಕ್ಕಳನ್ನು ಒಂದೇ ಕೊಠಡಿಗೆ ತುಂಬಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಕನ್ನಡ ಮತ್ತು ಸಮಾಜ ಪಾಠವನ್ನು ಇರೋ ಶಿಕ್ಷಕರೇ ಮಾಡಿದರೂ, ಹಿಂದಿ ಶಿಕ್ಷಕರಿಲ್ಲದೆ ಪುಸ್ತಕವನ್ನೇ ಮಕ್ಕಳು ಇನ್ನೂ ನೋಡಿಲ್ಲ. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾದಂತಾಗಿದೆ.
ಖಾಸಗಿ ಶಾಲೆಗಳ ಹಾವಳಿಯಿಂದ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಸೊರಗು ತ್ತಿವೆ. ಇಂತಹದರಲ್ಲಿ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಉತ್ತಮವಾಗಿದ್ದರೂ ಶಿಕ್ಷಕರು ಮಾತ್ರ ಇಲ್ಲದಾಗಿದ್ದಾರೆ. ವಿಜ್ಞಾನ, ಇಂಗ್ಲಿಷ್, ಹಿಂದಿ ಹಾಗೂ ಜನರಲ್ ಶಿಕ್ಷಕ ಹುದ್ದೆ ಖಾಲಿ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೆಟ್ಟು ಬಿದ್ದಿದೆ.
ಇನ್ನಾದರೂ ಸರ್ಕಾರ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಹಾಗೂ ಶಿಕ್ಷಕರನ್ನು ಕೊಟ್ಟು ಸರ್ಕಾರಿ ಶಾಲೆಗಳನ್ನು ಉಳಿಸಲಿ ಎನ್ನುವುದು ಪೋಷಕರ ಒತ್ತಾಯವಾಗಿದೆ.