Advertisement

ಹುಲಕೋಟಿ ಶಿಕ್ಷಣ ಸಂಸ್ಥೆ ಜ್ಞಾನ ದೀವಿಗೆ

12:11 PM Nov 22, 2019 | Suhan S |

ಗದಗ: ಸಹಕಾರಿ ತತ್ವದಡಿ ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಗೊಂಡಿರುವ ಇಲ್ಲಿನ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಹಲವು ಏಳು-ಬೀಳು ಕಂಡಿರುವ ಈ ಸಂಸ್ಥೆಯು ಗ್ರಾಮೀಣ ಹಾಗೂ ಪರಿಶಿಷ್ಟ ಸಮುದಾಯದ ಸಾವಿರಾರು ವಿದ್ಯಾರ್ಥಿಗಳಲ್ಲಿ ಜ್ಞಾನದ ಜ್ಯೋತಿ ಬೆಳಗುವುದರೊಂದಿಗೆ ಅನೇಕರಿಗೆ ಉಜ್ವಲ ಭವಿಷ್ಯ ರೂಪಿಸಿದ ಹಿರಿಮೆ ಈ ಸಂಸ್ಥೆಯದ್ದು.

Advertisement

ಸಹಕಾರ ರಂಗದ ಭೀಷ್ಮ ಎಂದು ಗುರುತಿಸಿಕೊಂಡಿರುವ ಮಾಜಿ ಸಚಿವ ದಿ| ಕೆ.ಎಚ್‌. ಪಾಟೀಲ ಅವರ ಪ್ರಯತ್ನದ ಫಲವಾಗಿ ಇಂದು ಹುಲಕೋಟಿ ಸಹಕಾರ ಸಂಸ್ಥೆಯ ಅಂಗ ಸಂಸ್ಥೆಗಳಾಗಿ ತಲೆ ಎತ್ತಿರುವ ವಿವಿಧ ಶಾಲೆ-ಕಾಲೇಜುಗಳ ಮೂಲಕ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡುತ್ತಿದೆ.

1921ರಲ್ಲಿ ಸ್ಥಾಪನೆಗೊಂಡಿರುವ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆ ಇಂದು ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಸಂಸ್ಥೆಯು ಅಖಂಡ ಧಾರವಾಡ ಜಿಲ್ಲೆಯಾದ್ಯಂತ ಅನೇಕ ಪ್ರಾಥಮಿಕ ಶಾಲೆ ಪ್ರಾರಂಭಿಸಿ, ಶೋಷಿತ ಜನರಿಗೂ ಅಕ್ಷರ ಜ್ಞಾನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಸಂಸ್ಥೆಗೆ ಜೀವ ತುಂಬಿದ ಕೆಎಚ್‌ಪಿ: 1921ರಲ್ಲಿ ಆರಂಭಗೊಂಡ ಹುಲಕೋಟಿ ಸಹಕಾರಿ ಶಿಕ್ಷಣಸಂಸ್ಥೆ ನಿಯಮಿತ ಹುಲಕೋಟಿ-ಗದಗ ಅಧೀನದಲ್ಲಿ ಗ್ರಾಮೀಣ ಪ್ರದೇಶದ 40 ರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆಗಳಿದ್ದವು. ಸ್ವಾತಂತ್ರ್ಯ ನಂತರ ಸರಕಾರ ಅವುಗಳನ್ನು ವಶಕ್ಕೆ ಪಡೆದಿದ್ದರಿಂದ ಸಂಸ್ಥೆ ಬಾಗಿಲು ಮುಚ್ಚುವಂತಾಗಿತ್ತು. ಆ ಸಂದರ್ಭದಲ್ಲಿ ಕೆ.ಎಚ್‌.ಪಾಟೀಲ ಅವರ ತಂದೆ ರಂಗನಗೌಡರು ಕೆಲಕಾಲ ಅಧ್ಯಕ್ಷರಾಗಿದ್ದರು. ಸಂಸ್ಥೆಯ ಶಕ್ತಿ ಕ್ಷೀಣಿಸುತ್ತಿದ್ದರಿಂದ ಸ್ವತಃ ಕೆ.ಎಚ್‌. ಪಾಟೀಲ ಅದರ ಉಸ್ತುವಾರಿವಹಿಸಿಕೊಂಡರು. ಅವರ ನಿಸ್ವಾರ್ಥ ಸೇವೆಯಿಂದಾಗಿ ಸಂಸ್ಥೆಯ ಪ್ರಗತಿ ಏರುಮುಖವಾಗಿದ್ದು, ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ ಎನ್ನುತ್ತಾರೆ ಟ್ರಸ್ಟಿಗಳು.

ಕೆ.ಎಚ್‌. ಪಾಟೀಲ ಅಧ್ಯಕ್ಷರಾದ ಬಳಿಕಚೇತರಿಸಿಕೊಂಡ ಸಂಸ್ಥೆಯು ಬೆಟಗೇರಿಯಲ್ಲೊ 1961, 9162ರಲ್ಲಿ ಕ್ರಮವಾಗಿ ಉದ್ಯೋಗಸ್ಥ ಪುರುಷ ಮತ್ತು ಮಹಿಳೆಯರ ವಸತಿ ನಿಲಯ ಆರಂಭಿಸಿತು.ಇದರಿಂದ ಈ ಭಾಗದಲ್ಲಿ ಬ್ಯಾಂಕರ್, ಉಪನ್ಯಾಸಕರು, ಸರಕಾರಿ ಹಾಗೂ ಅರೆ ಸರಕಾರಿ ಉದ್ಯೋಗಸ್ಥರಿಗೆಹೆಚ್ಚಿನ ಅನುಕೂಲವಾಗಿತ್ತು. ದಶಕಗಳ ಉಛ್ಛ್ರಾಯ ಸ್ಥಿತಿಯಲ್ಲೇ ಇದ್ದ ಈ ಸಂಸ್ಥೆಗಳು ಇತ್ತೀಚಿನ ವರ್ಷಗಳಲ್ಲಿ ಜನರ ನಿರಾಸಕ್ತಿಯಿಂದ ಬಾಗಿಲು ಮುಚ್ಚಿವೆ ಎಂದು ಹೇಳಲಾಗಿದೆ.

Advertisement

ಸಂಸ್ಥೆಯ ವಿವಿಧ ಶಾಲಾ-ಕಾಲೇಜು: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯಡಿ ಗದಗ, ಬೆಟಗೇರಿಯಲ್ಲಿ ತಲಾ ಒಂದು ಪ್ರಾಥಮಿಕ ಶಾಲೆ, ಗದಗ, ಹುಯಿಲಗೋಳ, ಹರ್ತಿ, ಚಿಂಚಲಿ, ಬೆಟಗೇರಿ, ಅಸುಂಡಿ, ಕುರ್ತಕೋಟಿ ಸೇರಿದಂತೆ 7 ಪ್ರೌಢಶಾಲೆಗಳು, ಗದಗ ಮತ್ತು ಬೆಟಗೇರಿಯಲ್ಲಿ ತಲಾ ಒಂದು ಪದವಿ ಪೂರ್ವ ಕಾಲೇಜು, ಪದವಿ, ಬಿಸಿಎ ಹಾಗೂ ಕಾನೂನು ಮಹಾವಿದ್ಯಾಲಯವನ್ನೂ ಹೊಂದಿದೆ.

ಸಂಸ್ಥೆಯ ಎಲ್ಲ ಶಾಲಾ-ಕಾಲೇಜುಗಳು ಸ್ವಂತ ಕಟ್ಟಡಗಳನ್ನು ಹೊಂದಿದ್ದು, ನೂರಾರು ಕೋಟಿ ರೂ. ಆಸ್ತಿ ಹೊಂದಿದೆ. ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳು ಸರಕಾರದ ಅನುದಾನಕ್ಕೆ ಒಳಪಟ್ಟಿವೆ. ಸರಕಾರ ನಿಗದಿಪಡಿಸಿದ ಶುಲ್ಕದಲ್ಲೇ ಗುಣಮಟ್ಟದ ಶಿಕ್ಷಣ ಒದಗಿಸುತ್ತಿವೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಶೇ.70ಕ್ಕಿಂತ ಕಡಿಮೆ ಪಡೆದಿದ್ದೇ ಇಲ್ಲ ಎನ್ನುತ್ತಾರೆ ಆಯಾ ಶಾಲೆಗಳ ಮುಖ್ಯ ಗುರುಗಳು. ವಿವಿಧ ಶಾಲೆ, ಕಾಲೇಜುಗಳ ಮೂಲಕ ನೂರಾರು ಜನ ಶಿಕ್ಷಕಕರು, ಉಪನ್ಯಾಸಕರು, ಸಿಬ್ಬಂದಿಗೆ ಉದ್ಯೋಗ ಕಲ್ಪಿಸಿದೆ. ನಾನಾ ನೆಪಗಳನ್ನೊಡ್ಡಿ ಅನೇಕ ಸಂಸ್ಥೆಗಳು ಬಾಗಿಲು ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಸಹಕಾರ ಸಂಸ್ಥೆಯ ಶೈಕ್ಷಣಿಕ ಸೇವೆ ಶ್ಲಾಘನೀಯ.

ಆಟ-ಪಾಠದಲ್ಲೂ ಮುಂದು:  ಚಿಂಚಲಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದಾಗಲೇ ನೀಲಮ್ಮ ಮಲ್ಲಿಗವಾಡ ಅವರು ಸೈಕ್ಲಿಂಗ್‌ ಅಭ್ಯಾಸ ಆರಂಭಿಸಿದ್ದು, ನಂತರದ ದಿನಗಳಲ್ಲಿ ಅಂತಾರಾಷ್ಟ್ರೀಯ ಪಟುವಾಗಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದರು. ಸದ್ಯ ರೈಲ್ವೆ ಇಲಾಖೆಯ ಅಧಿಕಾರಿಯಾಗಿದ್ದಾರೆ. ಅಥ್ಲೆಟ್ಸೆಕ್‌ ದಾûಾಯಿಣಿ ಅಸೂಟಿ, ಪುಷ್ಪಾ ಮಣ್ಣೂರ ಅಥ್ಲೆಟ್ಸೆಕ್‌ನಲ್ಲಿ ರಾಜ್ಯ ಮಟ್ಟದಲ್ಲಿ ಜಯ ಸಾಧಿ ಸಿ, ಎಲ್‌ ಐಸಿ, ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದರಂತೆ ಹುಯಿಲಗೋಳ, ಹರ್ತಿ, ಕುರ್ತಕೋಟಿ, ಗದಗ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ರಾಜ್ಯ, ವಿಭಾಗ ಮಟ್ಟದಲ್ಲಿ ಸಾಧನೆ ತೋರಿದ್ದು, ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ.

ಈಗ 685 ವಿದ್ಯಾರ್ಥಿಗಳು:  1972ರಲ್ಲಿ ಆರಂಭಗೊಂಡ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜು ಗದಗಿನಲ್ಲಿ ಮೊದಲಿಗೆ ಕೇವಲ 42 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 685ಕ್ಕೆ ತಲುಪಿದೆ. ಇದೇ ಕಾಲೇಜಿನ ಹಳೇ ವಿದ್ಯಾರ್ಥಿ(2003) ರವಿ ಡಿ. ಚನ್ನಣ್ಣವರ ಈಗ ಐಪಿಎಸ್‌ ಅ ಧಿಕಾರಿಯಾಗಿದ್ದಾರೆ. 2011ರಲ್ಲಿ ಪಿಯುಸಿಯ ಆರ್ಟ್‌ ವಿಭಾಗದಲ್ಲಿ ಇರ್ಸಾರ್‌ ಬಾನು ಬಳ್ಳಾರಿ ರಾಜ್ಯಕ್ಕೆ ಮೊದಲಿಗರಾಗಿದ್ದರು.

 

ಕೆ.ಎಚ್‌. ಪಾಟೀಲರು ಹಾಕಿಕೊಟ್ಟ ತಳಹದಿ ಮೇಲೆ ಹಾಗೂ ಮಾಜಿ ಶಾಸಕ ಡಿ.ಆರ್‌. ಪಾಟೀಲ, ಮಾಜಿ ಸಚಿವ ಎಚ್‌.ಕೆ. ಪಾಟೀಲ ಮಾರ್ಗದರ್ಶನದಲ್ಲಿ ಸಂಸ್ಥೆ ಮುನ್ನಡೆಸಲಾಗುತ್ತಿದೆ. ಸಹಕಾರಿ ತತ್ವದಡಿ ಮತ್ತಷ್ಟು ಶಾಲಾ-ಕಾಲೇಜು ಸ್ಥಾಪಿಸಬೇಕು. ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಕೋರ್ಸ್‌ಗಳನ್ನು ಪ್ರಾರಂಭಿಸುವುದು, ಪ್ರತೀ ಕಾಲೇಜಿನಲ್ಲಿ ಡಿಜಿಟಲ್‌ ಲೈಬ್ರರಿ ಸ್ಥಾಪಿಸುವ ಗುರಿ ಹೊಂದಲಾಗಿದೆ.-ರವೀಂದ್ರನಾಥ ಎಂ. ಮೂಲಿಮನಿ, ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next