Advertisement

ಹುಕ್ಕೇರಿಗೆ ಯಾರ ಸರ್ಟಿಫಿಕೇಟ್ ಅಗತ್ಯವಿಲ್ಲ

11:30 AM May 24, 2022 | Team Udayavani |

ಬೆಳಗಾವಿ: ಜನರೇ ಸರ್ಟಿಫಿಕೇಟ್ ನೀಡಿದ ಮೇಲೆ ಬೇರೆ ಯಾರ ಸರ್ಟಿಫಿಕೇಟ್ ಅವಶ್ಯಕತೆ ಇಲ್ಲ. ಪ್ರಕಾಶ ಹುಕ್ಕೇರಿ ಪ್ರಭಾವಿ ನಾಯಕರು, ಸಂಸದ, ಸಚಿವರಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ಯಾವ ಸರ್ಟಿಫಿಕೇಟ್ ಅಗತ್ಯ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ತಿರುಗೇಟು ನೀಡಿದರು.

Advertisement

ನಗರದ ಹೊಟೇಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಸೋಮವಾರ ಆಯೋಜಿಸಿದ್ದ ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಸಭೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಈ ದೇಶದಲ್ಲಿ ನಾವು ಕೆಲಸ ಮಾಡಿದರೆ ಜನರ ಸರ್ಟಿಫಿಕೇಟ್ ಸಿಗುತ್ತದೆ. ಸ್ಪರ್ಧೆ ಮಾಡುವವರಿಗೆ ಡಿಗ್ರಿ ಇರಬೇಕು ಅಂತ ಏನೂ ಇಲ್ಲ. ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು ಎಂದು ಚುನಾವಣಾ ಆಯೋಗ ಹೇಳಿದೆ. ವೋಟ್‌ ಹಾಕುವವರು ಪದವೀಧರರು ಬೇಕು, ಚುನಾವಣೆಗೆ ನಿಲ್ಲುವವರಿಗೆ ಅರ್ಹತೆ ಇಲ್ಲ ಎಂದರು.

100 ಪರ್ಸೆಂಟ್‌ಗೆ ಏರಿದರೂ ಅಚ್ಚರಿ ಇಲ್ಲ: ಬೆಳಗಾವಿಯಲ್ಲಿ ಆವಾಜ್‌ ಇದ್ದರೆ ರಾಜ್ಯದಲ್ಲಿ ಹೆಚ್ಚು ಆವಾಜ್‌ ಆಗುತ್ತದೆ. ಬೆಳಗಾವಿಯಲ್ಲಿ ಗೆದ್ದರೆ ರಾಜ್ಯದಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಹೀಗಾಗಿ ಎಲ್ಲರೂ ಪ್ರಕಾಶ ಹುಕ್ಕೇರಿ, ಸುನಿಲ ಸಂಕ ಪರ ಕೆಲಸ ಮಾಡಬೇಕು. ಬಿಜೆಪಿಯವರಿಗೆ ಯಾವುದೇ ವಿಷಯ ಇಲ್ಲ. ಬೆಲೆ ಏರಿಕೆ ಗಗನಕ್ಕೇರುತ್ತಿದೆ. ಭ್ರಷ್ಟಾಚಾರ 40ರಿಂದ 50 ಪರ್ಸೆಂಟ್‌ಗೆ ಏರಿಕೆ ಆಗಿದೆ. ನಮ್ಮ ಸದನ ಸಮಿತಿ ರಾಯಚೂರು ಜಿಲ್ಲೆ ಲಿಂಗಸೂರುಗೆ ಹೋಗಿತ್ತು. ಅಲ್ಲಿ 50 ಪರ್ಸೆಂಟ್‌ ಭ್ರಷ್ಟಾಚಾರ ಆಗಿದೆ. ಆ ಕಮಿಟಿಯಲ್ಲಿ ಬಿಜೆಪಿ ಸದಸ್ಯರೇ ಇದ್ದು ಅವರೇ ತನಿಖೆ ಮಾಡುತ್ತಿದ್ದಾರೆ. ಚುನಾವಣೆ ವೇಳೆ 100 ಪರ್ಸೆಂಟ್‌ಗೆ ಏರಿದರೂ ಅಚ್ಚರಿಪಡಬೇಕಿಲ್ಲ ಎಂದು ವಾಗ್ಧಾಳಿ ನಡೆಸಿದರು.

ವಿಧಾನ ಪರಿಷತ್‌ನಲ್ಲಿ ಬಹುಮತ ಸಾಧಿಸಲು ಚುನಾವಣೆ ಮುಗಿದ ಮೇಲೆ ಐದಾರು ಸೀಟು ಕಡಿಮೆ ಬಂದರೆ 30 ಕೋಟಿ ರೂ.ಗೆ ಶಾಸಕರ ಖರೀದಿ ಮಾಡಬೇಕು. 30 ಕೋಟಿ ಪ್ಲಸ್‌ ಮಂತ್ರಿಗಿರಿಗೆ ಹಣ ಬೇಕು. 30 ರಿಂದ 50 ಕೋಟಿ ರೂ. ಹಣ ಬೇಕು. ಕಮಿಷನ್‌ ದಿಂದ ಇವೆಲ್ಲವೂ ಸಾಧ್ಯ. 5-6 ಸೀಟ್‌ ಗಾಗಿ ಕೋಟಿ ಕೊಟಿ ರೂ. ಬಂಡವಾಳ ಹೂಡಿಕೆ ಮಾಡುತ್ತಾರೆ ಎಂದು ಬಿಜೆಪಿಗೆ ತಿವಿದರು.

Advertisement

ಚುನಾವಣೆ ಎಂದರೆ ಕಲೆ ಇದ್ದಂತೆ: ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನೇತೃತ್ವದಲ್ಲಿ ಸ್ಕ್ಯಾನಿಂಗ್ ಕಮಿಟಿ ಆಗಬೇಕು. ಜಿ.ಪಂ. ಸದಸ್ಯರು ಮಾಜಿ ಸದಸ್ಯರಿಗೆ ಕನಿಷ್ಠ ನೂರು ಮತ ತರಿಸುವ ಜವಾಬ್ದಾರಿ ನೀಡಬೇಕು. ಚುನಾವಣೆ ಎಂದರೆ ಒಂದು ಕಲೆ ಇದ್ದಂತೆ. ಪ್ರಕಾಶ ಹುಕ್ಕೇರಿ ಸಾಕಷ್ಟು ಚುನಾವಣೆ ಮಾಡಿದ್ದಾರೆ. ಚುನಾವಣೆಗೆ ನಿಲ್ಲಲು ಆಸಕ್ತಿ ಬೇಕು, ಪ್ರಕಾಶ್‌ ಹುಕ್ಕೇರಿ ಬಳಿ ಇದೆ. ಸೀರಿಯಸ್‌ ಆಗಿ ಎಲ್ಲ ಕಾರ್ಯಕರ್ತರು ಚುನಾವಣೆ ಮಾಡಬೇಕು. ಚನ್ನರಾಜ ಹಟ್ಟಿಹೊಳಿ ಗೆಲುವಲ್ಲಿ ಕಾರ್ಯಕರ್ತರ ಪಾಲು ಹೆಚ್ಚು, ಮುಖಂಡರ ಪಾಲು ಕಡಿಮೆ. ಇದೂ ಕಾರ್ಯಕರ್ತರ ಚುನಾವಣೆ ಆಗಿದೆ ಎಂದರು.

ಮಾಜಿ ಸಚಿವ ಎ ಬಿ.ಪಾಟೀಲ್‌, ಶಾಸಕರಾದ ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ರಮೇಶ ಕುಡಚಿ, ಕಾಕಾಸಾಹೇಬ ಪಾಟೀಲ, ಫಿರೋಜ ಸೇಠ, ನಗರ ಅಧ್ಯಕ್ಷ ರಾಜು ಸೇಠ, ಕೆಪಿಸಿಸಿ ಕಾರ್ಯದರ್ಶಿ ಸುನೀಲ ಹನಮಣ್ಣವರ, ಲಕ್ಷ್ಮಣರಾವ್‌ ಚಿಂಗಳೆ, ವಿನಯ ನಾವಲಗಟ್ಟಿ, ಅರವಿಂದ ದಳವಾಯಿ, ಪ್ರದೀಪ ಎಂ.ಜೆ., ವಿಶ್ವಾಸ ವೈದ್ಯ, ಪಂಚನಗೌಡ ದ್ಯಾಮನಗೌಡ, ಮಹಾವೀರ ಮೋಹಿತೆ, ಗಜಾನನ ಮಂಗಸೂಳಿ ಇತರರಿದ್ದರು.

18ನೇ ವಯಸ್ಸಿನಲ್ಲೇ ಮೀಸೆ ತಿರುವಿದ್ದೇನೆ: ಹುಕ್ಕೇರಿ ಚುನಾವಣೆ ಸ್ಪರ್ಧಿಸುವುದು ಹೊಸದಲ್ಲ. ಐದು ಬಾರಿ ಶಾಸಕನಾಗಿ, ಸಂಸದ, ಎಂಎಲ್‌ಸಿ ಆಗಿದ್ದೇನೆ. 18ನೇ ವಯಸ್ಸಿನಲ್ಲೇ ಮೀಸೆ ತಿರುವಿದ್ದೇನೆ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರು ಸಚಿವ ಉಮೇಶ ಕತ್ತಿಗೆ ಟಾಂಗ್‌ ನೀಡಿದರು. ಈ ಸಲ ಗೆದ್ದು ಬಂದರೆ ಶಿಕ್ಷಕರ ಪರವಾಗಿ ಕೆಲಸ ಮಾಡುತ್ತೇನೆ. ಈ ಬಾರಿ ಅಷ್ಟೇ ಅಲ್ಲ, ಬಹಳ ಸಲ ನನ್ನನ್ನು ಟಾರ್ಗೆಟ್‌ ಮಾಡಿದ್ದಾರೆ. ಮಾಡಲಿ, ಚುನಾವಣೆ ಗೆಲುವಿನ ಮೂಲಕ ಉತ್ತರ ನೀಡುತ್ತೇನೆ ಎಂದರು.

ಕಾಂಗ್ರೆಸ್‌ನಲ್ಲೂ ಭಿನ್ನಮತದ ಹೊಗೆ? ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದ ಹೊಟೇಲ್‌ನಲ್ಲಿ ನಡೆದ ಕಾಂಗ್ರೆಸ್‌ ಸಭೆಯಲ್ಲಿಯೂ ಭಿನ್ನಮತದ ಹೊಗೆ ಕಂಡು ಬಂದಿದ್ದು, ಸಭೆಗೆ ಶಾಸಕಿಯರಾದ ಲಕ್ಷ್ಮೀ ಹೆಬ್ಟಾಳಕರ ಹಾಗೂ ಡಾ. ಅಂಜಲಿ ನಿಂಬಾಳಕರ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಗೈರು ಉಳಿದಿದ್ದರು. ಶಾಸಕಿ ಹೆಬ್ಟಾಳಕರ ಅವರು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದು ಬರಲಾಗಿಲ್ಲ ಎಂದು ಹೆಬ್ಟಾಳಕರ ಪುತ್ರ ಮೃಣಾಲ್‌ ಹೆಬ್ಟಾಳಕರ ತಿಳಿಸಿದರು. ನಿಂಬಾಳಕರ ಹಾಗೂ ಹಟ್ಟಿಹೊಳಿ ಬೆಂಗಳೂರಿನಲ್ಲಿ ಇರುವುದಾಗಿ ಮಾಹಿತಿ ಸಿಕ್ಕಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ಎಲ್ಲರೂ ಬರುತ್ತಾರೆ. ಅವರಿಗೂ ಅವರದ್ದೇ ಆದ ಕೆಲಸಗಳು ಇರುತ್ತವೆ. ಮದುವೆ, ಗೃಹ ಪ್ರವೇಶ ಈ ರೀತಿ ಕಾರ್ಯಕ್ರಮ ಇರುತ್ತವೆ. ಅವರು ಬರದೇ ಇದ್ದರೂ ನಮ್ಮ ಪಕ್ಷದ ಪರವಾಗಿ ಇರುತ್ತಾರೆ ಎಂದರು.

ಕೇಂದ್ರ ಸರ್ಕಾರ 30 ರೂಪಾಯಿ ತೈಲ ಬೆಲೆ ಏರಿಕೆ ಮಾಡಿದೆ. ಈಗ ಏಕಾಏಕಿ 9 ರೂ. ಇಳಿಕೆ ಮಾಡಿದೆ. ಪ್ರತಿ ದಿನವೂ 20 ರಿಂದ 30 ಪೈಸೆ ಏರಿಕೆ ಮಾಡಿದ್ದು ಕಂಡು ಬರುವುದಿಲ್ಲ. ಜನರಿಗೆ ತೋರಿಸಲು, ದಿಶಾ ಭೂಲ್‌ ಮಾಡಲು ಬಿಜೆಪಿಯ ನಾಟಕವಿದು. ಮುಂದಿನ 2-3 ತಿಂಗಳಲ್ಲಿ ಮತ್ತೆ ಏರಿಕೆ ಮಾಡುತ್ತದೆ. –ಸತೀಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷರು

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next