Advertisement

ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ

11:25 AM Dec 22, 2018 | |

“ಕೆಜಿಎಫ್’ ರಾಜ್ಯಾದ್ಯಂತ ಸುಮಾರು 400ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಕಂಡಿದೆ. ಇನ್ನು ಕನ್ನಡ ಚಿತ್ರಗಳು ಹೆಚ್ಚು ಪ್ರದರ್ಶನ ಕಾಣದ ಕೇಂದ್ರಗಳಲ್ಲೂ “ಕೆಜಿಎಫ್’ ಭರ್ಜರಿ ಓಪನಿಂಗ್‌ ಪಡೆದುಕೊಂಡಿದೆ. ಶಿವಮೊಗ್ಗ, ಗದಗ, ರಾಯಚೂರು, ಹಾವೇರಿ ಮೊದಲಾದ ಕಡೆಗಳಲ್ಲಿ ಯಶ್‌ ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಚಿತ್ರಮಂದಿರದ ಮಾಲೀಕರು ಬೆಳಗಿನ ಜಾವ 4 ಗಂಟೆಯಿಂದಲೇ ಚಿತ್ರ ಪ್ರದರ್ಶನ ಪ್ರಾರಂಭಿಸಿದರು.

Advertisement

ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬಳ್ಳಾರಿ, ರಾಮನಗರ, ಮಂಡ್ಯ ಮೊದಲಾದ ಕಡೆಗಳಲ್ಲಿ ಬೆಳಗ್ಗೆ 5.30 ರಿಂದಲೇ ಚಿತ್ರ ಪ್ರದರ್ಶನ ಆರಂಭವಾಯಿತು. ಇನ್ನು ಕೋಲಾರ, ಮಾಲೂರು, ಮುಳಬಾಗಿಲು, ತುಮಕೂರು, ಹಾಸನ, ಚಿಕ್ಕಮಗಳೂರು, ಮೈಸೂರಿನಲ್ಲಿ ಜನ ಚಳಿಯನ್ನೂ ಲೆಕ್ಕಿಸದೇ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಚಿತ್ರ ಮಂದಿರಗಳ ಮುಂದೆ ಜಮಾಯಿಸಿದ್ದರು. 

ಚಿತ್ರ ಬಿಡುಗಡೆಯಾದ ಕೇಂದ್ರಗಳಲ್ಲಿ ಅಭಿಮಾನಿಗಳು ಯಶ್‌ ಕಟೌಟ್‌ಗೆ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ, ಹಾಲಿನ ಅಭಿಷೇಕ ಮಾಡುವ ಮೂಲಕ ತಮ್ಮ ನಾಯಕನ ಚಿತ್ರ ಉತ್ತಮ ಪ್ರದರ್ಶನ ಕಾಣಲಿ ಎಂದು ಶುಭ ಹಾರೈಸಿದ ದೃಶ್ಯಗಳು ಕಂಡು ಬಂದವು.

ಕೆಲವು ಚಿತ್ರಮಂದಿರಗಳಲ್ಲಿ ಯಶ್‌ ಅಭಿಮಾನಿಗಳು ಆರತಿ ಬೆಳಗಿ, ಅನ್ನದಾನ ಮಾಡಿ, ಸಿಹಿ ವಿತರಿಸುವ ಮೂಲಕ ಚಿತ್ರವನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಟಿಕೆಟ್‌ಗಾಗಿ ನೂಕುನುಗ್ಗಲು ಅಥವಾ ಪ್ರದರ್ಶನದ ವೇಳೆ ಅಹಿತಕರ ಘಟನೆಗಳು ಸಂಭವಿಸಬಹುದು ಎಂಬ ಕಾರಣಕ್ಕೆ ಅನೇಕ ಚಿತ್ರಮಂದಿರಗಳ ಮುಂದೆ ಪೊಲೀಸರ ಬಿಗಿ ಬಂದೋಬಸ್ತ್ ಕೈಗೊಂಡಿದ್ದು ಕೂಡ ಕಂಡುಬಂತು. 

Advertisement

Udayavani is now on Telegram. Click here to join our channel and stay updated with the latest news.

Next