ನವದೆಹಲಿ: ಸಂಸತ್ ಭವನದ ಭದ್ರತೆಯಲ್ಲಿ ಭಾರೀ ಭದ್ರತಾ ಲೋಪವಾಗಿರುವುದು ಇದೀಗ ಬೆಳಕಿಗೆ ಬಂದಿದೆ. ಸಂಸತ್ತಿನ ಕಲಾಪ ನಡೆಯುತ್ತಿದ್ದ ವೇಳೆಯೇ ಸಂದರ್ಶಕರ ಗ್ಯಾಲರಿಯಿಂದ ಅಪರಿಚಿತ ವ್ಯಕ್ತಿಯೊಬ್ಬ ಸದನದೊಳಕ್ಕೆ ಬಂದು ಭಾರಿ ಕೋಲಾಹಲ ಸೃಷ್ಟಿಸುವ ಮೂಲಕ ಭಾರಿ ಭದ್ರತಾ ವೈಫಲ್ಯವಾಗಿರುವುದು ಸ್ಪಷ್ಟವಾಗಿದೆ.
ಬುಧವಾರ ನೂತನ ಸಂಸತ್ ಕಟ್ಟಡದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಇಬ್ಬರು ಅಪರಿಚಿತರು ಸದನದ ಒಳಗೆ ಪ್ರವೇಶ ಮಾಡಿದ್ದಾರೆ ಇದನ್ನು ಕಂಡ ಸದನದೊಳಗಿದ್ದ ಸಂಸದರು ಗಾಬರಿಯಿಂದ ಹೊರ ಓಡಿ ಬಂದಿದ್ದಾರೆ.
ಒಳಗೆ ಬಂದ ಅಪರಿಚಿತರ ಕೈಯಲ್ಲಿ ಅಶ್ರುವಾಯು ಹಿಡಿದುಕೊಂಡು ಬಂದಿದ್ದು ಕೂಡಲೇ ಸದನದ ಒಳಗಿದ್ದ ಇತರ ಸಂಸದರು ವ್ಯಕ್ತಿಯನ್ನು ಹಿಡಿಯಲು ಯತ್ನಿಸಿದ ವೇಳೆ ಆತ ಸದನದ ಸುತ್ತ ಓಡಾಡಿ ಕೈಯಲ್ಲಿದ್ದ ಅಶ್ರುವಾಯು ಸಿಡಿಸಿ ಸದನದ ಒಳಗೆ ಫ್ಲೋರೊಸೆಂಟ್ ಬಣ್ಣದ ಅನಿಲವನ್ನು ಸಿಂಪಡಿಸಿದ್ದಾನೆ ಕೊನೆಗೂ ಸಂಸದರು ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ. ವಶಕ್ಕೆ ಪಡೆದವರಲ್ಲಿ ಓರ್ವ ಪುರುಷ ಹಾಗೂ ಓರ್ವ ಮಹಿಳೆ ಸೇರಿದ್ದಾರೆ ಎನ್ನಲಾಗಿದ್ದು ಸದ್ಯ ಇಬ್ಬರು ಪೋಲೀಸರ ವಶದಲ್ಲಿದ್ದಾರೆ.
ಸಂಸತ್ತಿನ ಮೇಲಿನ ದಾಳಿಯಾಗಿ ಇಂದಿಗೆ ಸುಮಾರು 22 ವರ್ಷವಾಗುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ವಿಪರ್ಯಾಸವೇ ಸರಿ.