ಉಡುಪಿ: ದಸರಾ ಸಂಭ್ರಮಕ್ಕೆ ಮತ್ತಷ್ಟು ಭಕ್ತರನ್ನು ಕೊಂಡೊಯ್ಯುವ ದೃಷ್ಟಿಯಿಂದ ಕೆ.ಎಸ್.ಆರ್.ಟಿ.ಸಿ. ಈ ಬಾರಿ ದಸರಾ ಪ್ಯಾಕೇಜ್ ಮಾಡಿದ್ದು, ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಈ ಸೇವೆಯನ್ನು ಅ. 9ರ ವರೆಗೆ ವಿಸ್ತರಿಸಲಾಗಿದೆ.
ಉಡುಪಿ ಸಿಟಿ ಬಸ್ ನಿಲ್ದಾಣದಿಂದ ಆರಂಭಗೊಂಡು ಕಡಿಯಾಳಿ, ಕನ್ನರ್ಪಾಡಿ, ಅಂಬಲಪಾಡಿ, ಪುತ್ತೂರು, ಮಂದಾರ್ತಿ, ನೀಲಾವರ, ಕುಂಜಾರುಗಿರಿ, ಕಾಪು ಮಾರಿಗುಡಿ, ಉಚ್ಚಿಲ ದೇವಸ್ಥಾನಕ್ಕೆ ಹೋಗಿ ಬಳಿಕ ಸಿಟಿ ಬಸ್ ನಿಲ್ದಾಣಕ್ಕೆ ತಂದು ಬಿಡಲಾಗುತ್ತದೆ.
ಸೆ.29ರಿಂದ ಈ ಸೇವೆ ಆರಂಭಗೊಂಡಿದ್ದು, ಮೊದಲು ದಿನ 2 ಬಸ್‌ಗಳನ್ನು ಓಡಿಸಲಾಗಿತ್ತು. ಎರಡೂ ಬಸ್‌ಗಳೂ ಭರ್ತಿಯಾದ ಪರಿಣಾಮ ಬಸ್‌ಗಳ ಸಂಖ್ಯೆಯನ್ನು ಅಧಿಕಗೊಳಿಸಲಾಗಿದೆ. ಕೆಲವು ದಿನ 4ರಿಂದ 7 ಬಸ್‌ಗಳೂ ಓಡಾಟ ಮಾಡಿವೆ. ಅ.2ರಂದು ರವಿವಾರ ಒಟ್ಟು 17 ಬಸ್‌ಗಳು ಓಡಾಟ ಮಾಡಿವೆ. ಜನರು ಮುಂಗಡವಾಗಿ ಟಿಕೆಟ್‌ಗಳನ್ನು ಬುಕಿಂಗ್ ಮಾಡಿದ ಪರಿಣಾಮ ಹೆಚ್ಚುವರಿ ಬಸ್ ಒದಗಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಕೆ.ಎಸ್.ಆರ್.ಟಿ.ಸಿ. ಉಡುಪಿ ಡಿಪೋ ಮ್ಯಾನೇಜರ್ ಶಿವರಾಮ್ ನಾಯಕ್, ಯೋಜನೆಯಂತೆ ಅ. 4ರಂದು ಈ ಸೇವೆಯನ್ನು ಕೊನೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಪ್ರಯಾಣಿಕರು ಈಗಾಗಲೇ ಟಿಕೆಟ್ ಗಳನ್ನು ದಿನಂಪ್ರತಿ ಬುಕ್ ಮಾಡುತ್ತಿರುವ ಕಾರಣ ಈ ಸೇವೆಯನ್ನು ಮತ್ತೆ 2 ದಿನಗಳ ಕಾಲ ವಿಸ್ತರಿಸಲಾಗಿದೆ. ಮತ್ತಷ್ಟು ಬೇಡಿಕೆ ಬಂದರೆ ಇದನ್ನು ಮತ್ತೆ ವಿಸ್ತರಣೆ ಮಾಡುವ ಯೋಜನೆಯಿದೆ ಎನ್ನುತ್ತವೆ ಕೆ.ಎಸ್.ಆರ್.ಟಿ.ಸಿ. ಮೂಲಗಳು.
ದಸರಾವಷ್ಟೇ ಅಲ್ಲದೆ ಪ್ರವಾಸೋದ್ಯಮದ ದೃಷ್ಟಿಯಿಂದಲೂ ಈ ಯೋಜನೆ ಬಹಳಷ್ಟು ಉಪಕಾರಿಯಾಗಿದೆ. ಈಗಾಗಲೇ ಟೆಂಪಲ್ ಟೂರಿಸಂ ಬಗ್ಗೆ ಹಲವಾರು ಸಭೆಗಳಲ್ಲಿ ಚರ್ಚೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ವಾರಾಂತ್ಯದ ದಿನ ಅಥವಾ ದಿನಂಪ್ರತಿಯಂತೆ ನಿಗದಿತ ಅವಧಿಯಲ್ಲಿ ಜಿಲ್ಲೆಯ ವಿವಿಧ ದೇವಸ್ಥಾನಗಳು ಹಾಗೂ ಪ್ರವಾಸಿ ತಾಣಗಳಿಗೆ ಕೆ.ಎಸ್.ಆರ್.ಟಿ.ಸಿ. ಸೇವೆ ನೀಡುವ ಬಗ್ಗೆ ಅಧಿಕಾರಿಗಳು ಯೋಜನೆ ರೂಪಿಸಿಕೊಂಡಿದ್ದಾರೆ.
ಸಾವಿರಕ್ಕೂ ಅಧಿಕ ಮಂದಿಗೆ ಸೇವೆ
ಕೆ.ಎಸ್.ಆರ್.ಟಿ.ಸಿ. ಸೆ.29ರಿಂದ ಅ.5ರ ವರೆಗೆ ಸಾವಿರಕ್ಕೂ ಅಧಿಕ ಮಂದಿಯನ್ನು ವಿವಿಧ ದೇವಸ್ಥಾನಗಳಿಗೆ ಕರೆದೊಯ್ದಿದೆ. ಒಂದು ಬಸ್‌ನಲ್ಲಿ ತಲಾ 30ರಿಂದ 35 ಮಂದಿಯನ್ನು ಕೊಂಡೊಯ್ಯಲಾಗುತ್ತಿದೆ. ಮುಂಗಡವಾಗಿ ಅಷ್ಟೇ ಅಲ್ಲದೆ ಕೆಲವರು ನಿಲ್ದಾಣಕ್ಕೆ ಬಂದಲ್ಲಿ ಆ ಕೂಡಲೇ ಟಿಕೆಟ್ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.