ಆನೇಕಲ್: ದಲಿತರ ಭೂಮಿಗೆ ಕಾಂಪೌಂಡ್ ಹಾಕಲು ಸಿಪಿಐ ಸಹಕಾರ ನೀಡಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹಿರಿಯ ದಲಿತ ಹೋರಾಟಗಾರ ಬಿ.ಗೋಪಾಲ್ ಆಗ್ರಹಿಸಿದರು.
ತಾಲೂಕಿನ ಸರ್ಜಾಪುರದಲ್ಲಿ ಸಂವಿಧಾನ ರಕ್ಷಣಾ ಒಕ್ಕೂಟ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಹೆಗ್ಗೊಂಡಹಳ್ಳಿ ದಲಿತರ ಭೂಮಿಯನ್ನು ಬಲಾಡ್ಯರಿಗೆ ಕಾಂಪೌಂಡ್ ಹಾಕಲು ಸಹಕಾರ ನೀಡಿರುವುದನ್ನು ಹಾಗೂ ಕೆಲವು ದಲಿತ ಹೊರಟಗಾರರ ಮೇಲೆ ರೌಡಿಶೀಟ್ ದಾಖಲಿಸಿರುವುದನ್ನು ಖಂಡಿಸಿ ಈ ಹೋರಾಟ ನಡೆಸಲಾಗುತ್ತಿದೆ. ಹೆಗ್ಗೊಂಡಹಳ್ಳಿ ಸರ್ವೆ ನಂಬರ್ 72/2ರಲ್ಲಿನ ಭೂಮಿಯನ್ನು ಕಬಳಿಸಲು ಇನ್‌ಸ್ಪೆಕ್ಟರ್ ಚಾಂಪಿಯನ್ ಟ್ರಸ್ಟ್‌ಗೆ ಸಹಕಾರ ನೀಡಲು ಮುಂದಾಗಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಬೇಕು ಎಂದರು.
ಹಿರಿಯ ಹೋರಾಟಗಾರ ಮಾವಳ್ಳಿ ಶಂಕರ್ ಮಾತನಾಡಿ, ಕಾನೂನಿ ನಡಿ ಅಧಿಕಾರಿಗಳು ಕೆಲಸ ಮಾಡಬೇಕು. ದಲಿತರ ವಿರೋಧ ಕಟ್ಟಿಕೊಂಡರೆ ಕಾಂತಾರ ಸಿನಿಮಾ ರೀತಿ ಬೆನ್ನಟ್ಟಬೇಕಾಗುತ್ತದೆ. ಸರ್ಜಾಪುರ ಸಿಪಿಐ ಮಂಜುನಾಥ್ ಅವರನ್ನು ಅಮಾನತು ಮಾಡಬೇಕು. ಇಲ್ಲವಾದರೆ ಹಿರಿಯ ಅಧಿಕಾರಿಗಳ ಮೇಲೆಯೂ ನಮಗೆ ಇರುವ ಗೌರವ ಹೋಗುತ್ತದೆ ಎಂದರು.
ಜ್ಞಾನ ಪ್ರಕಾಶಸ್ವಾಮೀಜಿ ಮಾತನಾಡಿ, ದೌರ್ಜನ್ಯಕ್ಕೆ ಒಳಗಾದ ದಲಿತರ ಮೇಲೆಯೇ ರೌಡಿಶೀಟರ್ ಹಾಕಿರುವುದು ಸರಿಯಲ್ಲ. ನ್ಯಾಯಯುತ ಬೇಡಿಕೆಗಳ ಬಗ್ಗೆ ಸಂಘಟಿತ ಹೋರಾಟ ನಡೆಸಬೇಕು ಎಂದು ಮನವಿ ಮಾಡಿದರು.
Related Articles
ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಚ್ಚುವರಿ ಎಸ್ಪಿ ಪುರುಷೋತ್ತಮ್ ಅವರಿಗೆ ಮನವಿ ಪತ್ರ ನೀಡಲಾಯಿತು. ಅಧಿಕಾರಿಗಳ ಸೂಚನೆ ಮೇರೆಗೆ ಕಾನೂನು ಕ್ರಮ ಜರುಗಿಸಲಾಗುವುದಾಗಿ ಪುರುಷೋತ್ತಮ್ ಭರವಸೆ ನೀಡಿದರು.
ಬೃಹತ್ ಮೆರವಣಿಗೆ: ಇನ್ಸ್‌ಪೆಕ್ಟರ್ ಅಮಾನತಿಗೆ ಆಗ್ರಹಿಸಿ ಸಾವಿರಾರು ಕಾರ್ಯಕರ್ತರು ಹೆಗ್ಗೊಂಡನಹಳ್ಳಿ ಯಿಂದ ಸರ್ಜಾಪುರ ಆಟದ ಮೈದಾನದವರೆಗೂ ಸುಮಾರು 9 ಕಿ.ಮೀ. ಕಾಲ್ನಡಿಗೆ ಜಾಥಾ ನಡೆಸಿದರು.
ಪ್ರತಿಭಟನೆಯಲ್ಲಿ ಹಿರಿಯ ಹೋರಾಟಗಾರರಾದ ಆನೇಕಲ್ ಕೃಷ್ಣಪ್ಪ, ಹೆಣ್ಣೂರು ಶ್ರೀನಿವಾಸ್, ಕೆ.ಸಿ.ರಾಮಚಂದ್ರ, ಶ್ರೀರಾಮುಲು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿನ್ನಪ್ಪ ಚಿಕ್ಕಾಗಡೆ, ಗೋವಿಂದರಾಜ್, ಎಂ.ಸಿ.ಹಳ್ಳಿ ವೇಣು, ಚಿಕ್ಕನಾಗಮಂಗಲ ಗುರು, ಹುಸ್ಕೂರು ಮದ್ದೂರಪ್ಪ, ವಕೀಲ ಆನಂದ್‌ಚಕ್ರವರ್ತಿ ಇತರರಿದ್ದರು.