Advertisement

ಮೇ 14, 15ರಂದು ಬೃಹತ್‌ ಆರೋಗ್ಯ ಮೇಳ

06:28 PM Apr 28, 2022 | Team Udayavani |

ಚಿಕ್ಕಬಳ್ಳಾಪುರ: ಮೇ 14 ಮತ್ತು 15 ರಂದು ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ಎಸ್‌ ಜೆಸಿಐಟಿ ಕಾಲೇಜು ಆವರಣದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಮಟ್ಟದ ಉಚಿತ ಬೃಹತ್‌ ಆರೋಗ್ಯ ಮೇಳವನ್ನು ಆರೋಗ್ಯ ಸಚಿವರ ನಿರ್ದೇಶನದಂತೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದರು.

Advertisement

ಅವರು, ಬುಧವಾರ ಜಿಪಂ ಸಭಾಂಗಣದಲ್ಲಿ ನಡೆದ ಉಚಿತ ಬೃಹತ್‌ ಆರೋಗ್ಯ ಮೇಳದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಬೃಹತ್‌ ಆರೋಗ್ಯ ಮೇಳವು 2 ದಿನ ನಡೆಯಲಿದ್ದು, ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳ
ಬಹುದಾಗಿದೆ ವಿತರಿಸಲಾಗುವುದು ಎಂದರು.

ನೋಂದಣಿ ಹೇಗೆ? ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು, ಮನೆ ಮನೆ ಭೇಟಿ ಮಾಡಿ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೆ ಅಗತ್ಯವಿರುವವರ ಮಾಹಿತಿಯನ್ನು ಸಂಗ್ರಹಿಸಿ ಆನ್‌ ಲೈನ್‌ ಮೂಲಕ ನೋಂದಾಯಿಸಲಿದ್ದಾರೆ. ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಸ್ಥಳೀಯ ಅಧಿಕಾರಿಗಳು
ಮತ್ತು ಸಿಬ್ಬಂದಿ ನೋಂದಾಯಿಸಲಿದ್ದಾರೆ. ಯಾವುದೇ ರೀತಿಯ ಆರೋಗ್ಯ ತಪಾಸಣೆ ಅಥವಾ ಚಿಕಿತ್ಸೆ ಮಾಡಿಸಿ ಕೊಳ್ಳಲು ಬಯಸುವ ಎಲ್ಲಾ ವಯೋಮಾನದವರನ್ನು ನೋಂದಾಯಿಸಲಾಗುವುದು ಅದರಲ್ಲೂ 50ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆದ್ಯತೆ ನೀಡಿ ನೋಂದಣಿ ಮಾಡಿಕೊಳ್ಳಬೇಕು ಎಂದು ಡೀಸಿ ಸೂಚಿಸಿದರು.

ಉಚಿತ ವಾಹನ ವ್ಯವಸ್ಥೆ: ಆರೋಗ್ಯ ಸೇವೆ ಪಡೆಯಲು ಮೇಳದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಜನರು ನೋಂದಾಯಿಸಿಕೊಳ್ಳುವ ಸಾಧ್ಯತೆಯಿದೆ. ಅವರಿಗೆ ಪ್ರತಿ ಗ್ರಾಪಂ ಕೇಂದ್ರದಿಂದ ಎಸ್‌ಜೆಸಿಐಟಿ ಕಾಲೇಜಿನವರೆಗೂ ಉಚಿತ ವಾಹನ ವ್ಯವಸ್ಥೆಯನ್ನು ಮೇಳ ನಡೆಯುವ 2 ದಿನಗಳಲ್ಲಿ ಪ್ರತಿ 2 ಗಂಟೆಗೊಮ್ಮೆ ವಾಹನ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿರುತ್ತದೆ. ಮತ್ತೆ ಗ್ರಾಪಂಗಳಿಗೆ ತಲುಪಿಸುವ ಹೊಣೆಯನ್ನೂ ಹೊರಬೇಕಾಗುತ್ತದೆ ಎಂದರು.

ಸಾವಿರಕ್ಕೂ ಹೆಚ್ಚು ವೈದ್ಯರು: ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳ ಸಾವಿರಕ್ಕೂ ಹೆಚ್ಚು ತಜ್ಞ ವೈದ್ಯರು ಮತ್ತು ಸಿಬ್ಬಂದಿ ಮೇಳದಲ್ಲಿ ಈ ಮೇಳದಲ್ಲಿ ಭಾಗವಹಿಸಲಿದ್ದಾರೆ. 150 ಕ್ಕೂ ಹೆಚ್ಚು ತಪಾಸಣಾ ಮಳಿಗೆಗಳನ್ನು ತೆರೆದು ನೋಂದಾಯಿತ ಎಲ್ಲರಿಗೆ ಉಚಿತವಾಗಿ ಆರೋಗ್ಯ ತಪಾಸಣೆ
ಮಾಡಿ ಸ್ಥಳದಲ್ಲಿಯೇ ಸೂಕ್ತ ಪರೀಕ್ಷೆಗಳನ್ನು ನಡೆಸಿ ಆರೋಗ್ಯ ಚಿಕಿತ್ಸೆಗಳನ್ನು ನೀಡಲಿದ್ದಾರೆ.

Advertisement

ಸಮಿತಿಗಳ ರಚನೆ: ಮೇಳವನ್ನು ನೋಂದಣಿ ಸಮಿತಿ ಸೇರಿದಂತೆ ವಾಹನ, ಸ್ವಾಗತ, ವೇದಿಕೆ, ಪ್ರಚಾರ, ಔಷಧಿ ಹಾಗೂ ಜಿಲ್ಲಾ ನೋಡಲ್‌ ಸಮಿತಿಗಳನ್ನು ರಚಿಸಿ ಮೇಳದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ, ಕುಡಿವ ನೀರು ಮತ್ತು ಊಟದ ವ್ಯವಸ್ಥೆ ಕಲ್ಪಿಸುವ ಸಂಬಂಧ ವಿವಿಧ ಕಾರ್ಯಗಳನ್ನು ಹಂಚಿಕೆ ಮಾಡಿದರು. ಮೇಳದ ಕರ್ತವ್ಯಕ್ಕೆ ಸ್ವಯಂ ಸೇವಕರು, ಎನ್‌ಎಸ್‌ಎಸ್‌ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳು, ನೆಹರು ಯುವ ಕೇಂದ್ರದ ಕಾರ್ಯ ಕರ್ತರನ್ನು ನಿಯೋಜಿಸಿಕೊಳ್ಳುವಂತೆ ತಿಳಿಸಿದರು.

ಜಿಪಂ ಸಿಇಒ ಪಿ.ಶಿವಶಂಕರ್‌, ಉಪವಿಭಾಗಾಧಿಕಾರಿ ಸಂತೋಷ್‌ ಕುಮಾರ್‌, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಆರ್‌.ಕಬಾಡೆ, ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ಪೌರಾಯುಕ್ತ ಮಹಾಂತೇಶ್‌ ಸೇರಿದಂತೆ ಸಿಬ್ಬಂದಿ ಇದ್ದರು.

ಉಚಿತ ಶಸ್ತ್ರಚಿಕಿತ್ಸೆಗೆ ಒತ್ತು
ತಪಾಸಣಾ ವೇಳೆ ರೋಗಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಲ್ಲಿ ಅಂತಹ ರೋಗಿಗಳನ್ನು ಶಸ್ತ್ರ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗೆ ದಾಖಲಿಸಿ ಸಂಪೂರ್ಣವಾಗಿ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಸಾರಿಗೆ ವೆಚ್ಚಸಹಿತವಾಗಿ ಒದಗಿಸಲಾಗುವುದು. ಈ ಸೌಲಭ್ಯವು ಆರೋಗ್ಯ ಮೇಳಕ್ಕೆ ನೋಂದಾಯಿಕೊಳ್ಳುವವರಿಗೆ ಮಾತ್ರ ಲಭ್ಯವಿರುತ್ತದೆ. ಆದ್ದರಿಂದ ಆರೋಗ್ಯ ಸೇವೆ ಅಗತ್ಯವಿರುವವರು ತಮ್ಮ ವ್ಯಾಪ್ತಿಯ ಗ್ರಾಪಂಗಳಲ್ಲಿ ಹಾಗೂ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕೂಡಲೇ ಸಂಪರ್ಕಿಸಿ ನೋಂದಾಯಿಸಿ ಕೊಳ್ಳುವಂತೆ ಡೀಸಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮೇಳದಲ್ಲಿ ಏನೇನು ಇರಲಿದೆ?
ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ (ಎಬಿ-ಎಆರ್‌ ಕೆ) ನೋಂದಣಿ ಹಾಗೂ ಕಾರ್ಡ್‌ ವಿತರಣೆ, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ತಪಾಸಣೆ, ಎಕೋ ಟೆಸ್ಟ್‌, ಆಂಜಿಯೋಗ್ರಾಮ್‌ ಚಿಕಿತ್ಸೆ, ಮೂಳೆ, ದಂತ, ಕಿವಿ ಮತ್ತು ಗಂಟಲು ತಪಾಸಣೆ, ತಾಯಿ ಮತ್ತು ಮಕ್ಕಳ ಆರೋಗ್ಯ ತಪಾಸಣೆ, ಬಾಯಿಯ ಕ್ಯಾನ್ಸರ್‌ ತಪಾಸಣೆ ಸೇರಿ ಎಲ್ಲಾ ರೀತಿಯ ರಕ್ತದ ಪರೀಕ್ಷೆಗಳು ಲಭ್ಯವಿರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next