Advertisement

19ರಂದು ಬೃಹತ್‌ ಇ-ಲೋಕ ಅದಾಲತ್‌

08:28 PM Aug 29, 2020 | Suhan S |

ಬಳ್ಳಾರಿ: ಕೋವಿಡೆದಂತ ಭಯಾನಕ ಸನ್ನಿವೇಶದಲ್ಲಿ ಇಡೀ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಇ-ಲೋಕ ಅದಾಲತ್‌ನ್ನು ಸೆ.19ರಂದು ರಾಜ್ಯದಲ್ಲಿ ಏರ್ಪಡಿಸಲಾಗಿದ್ದು, ಬಾಕಿ ಇರುವ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಇದರ ಪ್ರಯೋಜನವನ್ನು ಬಾಕಿ ಪ್ರಕರಣ  ಗಳಿರುವ ಜನರು ಪಡೆದುಕೊಳ್ಳಬೇಕು ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ| ಅರವಿಂದಕುಮಾರ್‌ ಹೇಳಿದರು.

Advertisement

ಬೆಂಗಳೂರು ಹೈಕೋರ್ಟ್‌ ಮೂಲಕ ಸಂಚಾರಿ ಹೈಕೋರ್ಟ್‌ ಪೀಠಗಳ ನ್ಯಾಯಾಧೀಶರು, ಜಿಲ್ಲಾ ಪ್ರಧಾನಮತ್ತು ಸತ್ರ ನ್ಯಾಯಾಧೀಶರು ಹಾಗೂ  ಮಾಧ್ಯಮದವರೊಂದಿಗೆ ಶುಕ್ರವಾರ ನಡೆಸಿದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಉದ್ದೇಶ ಸರ್ವರಿಗೂ ನ್ಯಾಯ ಮತ್ತು ಸಮಾನ ಅವಕಾಶ ಕಲ್ಪಿಸುವುದಾಗಿದ್ದು, ಈ ನಿಟ್ಟಿನಲ್ಲಿ ಕೋವಿಡ್ ಇರುವಿಕೆಯ ಈ ಸಂದರ್ಭದಲ್ಲಿ ಬೃಹತ್‌ (ಮೇಲ್‌) ಇ-ಲೋಕ ಅದಾಲತ್‌ ಆಯೋಜಿಸಲಾಗಿದೆ. ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿ ಸಿದಂತೆ ವಕೀಲರ ಮೂಲಕ ಅಥವಾ ನೇರವಾಗಿ ಸಾರ್ವಜನಿಕರೇ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಹೇಗೆ ಸಂಪರ್ಕಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಲಿಂಕ್‌ಗಳು, ಇ-ಮೇಲ್‌ ವಿವರ ಹಾಗೂ ಸಂಬಂಧಿಸಿದ ದೂರವಾಣಿ ಸಂಖ್ಯೆ ತಿಳಿಸಲಾಗುತ್ತದೆ ಎಂದರು.

ಇ-ಲೋಕ ಅದಾಲತ್‌ ಯಶಸ್ವಿಯಾಗಿ ಆಯೋಜನೆ ಮಾಡುವುದಕ್ಕೆ ಸಂಬಂಧಿ ಸಿದಂತೆ ಈಗಾಗಲೇ 4 ಬಾರಿ ಸಭೆ ನಡೆಸಲಾಗಿದೆ ಎಂದು ವಿವರಿಸಿದ ನ್ಯಾ| ಅರವಿಂದಕುಮಾರ್‌ ಅವರು, ಯಾವುದೇ ಕಾರಣಕ್ಕೂ ಕಕ್ಷಿದಾರರು ನ್ಯಾಯಾಲಯಕ್ಕೆ ಬರುವುದಿಲ್ಲ ಎಂದರು.

ವಿಮಾ ಕಂಪನಿಗಳ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಕಾರ್ಮಿಕ ವಿವಾದ, ಬ್ಯಾಂಕ್‌ ವಿಷಯಗಳು, ಚೆಕ್‌ ಬೌನ್ಸ್‌, ಹಣ ವಸೂಲಾತಿ ಪ್ರಕರಣಗಳು, ಕ್ರಿಮಿನಲ್‌ ಕಂಪೌಂಡೇಬಲ್‌ ಅಪರಾಧಗಳು, ಎಂಎಸಿಟಿ ಪ್ರಕರಣಗಳು, ಭೂಸ್ವಾಧೀನ, ವಿದ್ಯುತ್‌, ಎಂಎಂಡಿಆರ್‌ ಕಾಯ್ದೆ ಸೇರಿದಂತೆ ಇನ್ನಿತರೆ ವಿಷಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದ್ದು, ಇಂತಹ ಸಂದರ್ಭದಲ್ಲಿ ಜನರಿಗೆ ಒಳ್ಳೆಯ ಸದಾವಕಾಶ ಒದಗಿ ಬಂದಿದ್ದು, ಇದನ್ನು ಬಳಸಿಕೊಳ್ಳಬೇಕು ಎಂದು ಅವರು ಕೇಳಿಕೊಂಡರು.

ಹೈಕೋರ್ಟ್‌ ನ್ಯಾ| ಅಲೋಕಕುಮಾರ್‌ ಮಾತನಾಡಿ, ಕೊರೊನಾ ಮಹಾಮಾರಿಯ ಈ ಸಂದರ್ಭದಲ್ಲಿ ಇ-ಲೋಕ ಅದಾಲತ್‌ ಅತ್ಯಂತ ಪರಿಣಾಮಕಾರಿ ಆಗಿದೆ. ವಿವಿಧ ವಿಷಯಗಳಲ್ಲಿ ಸಾವಿರಾರು ವ್ಯಾಜ್ಯಗಳಿವೆ. ಅವುಗಳನ್ನು ಇ-ಅದಾಲತ್‌ನಲ್ಲಿ ಪರಿಹರಿಸಬಹುದು. ಬಾಕಿ ಇರುವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವವರು ಸೆ.18ರವರೆಗೂ ತಮ್ಮ ಮಾಹಿತಿ ಸಲ್ಲಿಸಬಹುದಾಗಿದೆ ಎಂದರು.

Advertisement

ಈ ಸಂದರ್ಭದಲ್ಲಿ 2ನೇ ಅಪರ ಜಿಲ್ಲಾ ನ್ಯಾಯಾಧೀಶರಾದ ಖಾಸಿಂ ಚೂರಿಖಾನ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೀಣಾ ಎಂ.ನಾಯ್ಕರ್‌, 4ನೇ ಅಪರ ಜಿಲ್ಲಾ ನ್ಯಾಯಾ ಧೀಶರಾದ ಎನ್‌. ಬಿ. ಭವಾನಿ, ಜಿಲ್ಲಾ ನ್ಯಾಯಾಲಯದ ವ್ಯವಸ್ಥಾಪಕರಾದ ಈರೇಶ ಅಂಗಡಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next