ದೊಡ್ಡಬಳ್ಳಾಪುರ: ಕೃಷಿ ಮತ್ತು ಹೈನುಗಾರಿಕೆಯಲ್ಲಿ ರೈತರು ಆಧುನಿಕ ತಂತ್ರಜ್ಞಾನ ಹಾಗೂ ಪರಿಕರಗಳನ್ನು ಬಳಸಿಕೊಳ್ಳುವ ಅಗತ್ಯವಿದೆ. ರೈತರಿಗೆ ಈ ಬಗ್ಗೆ ಮಾಹಿತಿ ನೀಡಲು ಕೆ.ಎಂ.ಎಫ್ ವತಿಯಿಂದ ಜೂ.24ರಿಂದ 26ರವರೆಗೆ 3 ದಿನಗಳ ಕಾಲ ಬೃಹತ್ ಡೇರಿ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಎಂ.ಎಫ್ ಹಾಗೂ ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ತಿಳಿಸಿದ್ದಾರೆ.
ಬಮೂಲ್ ಶಿಬಿರ ಕಚೇರಿಯಲ್ಲಿ ಬೃಹತ್ ಡೇರಿ ಮೇಳ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಮೂಲ್ ಬೃಹತ್ ಡೇರಿ ಮೇಳವನ್ನು ಬಮೂಲ್ ಶಿಬಿರ ಕಚೇರಿ ಮುಂಭಾಗ ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ ಆಧುನಿಕ ತಂತ್ರಜ್ಞಾನದ ಮಾಹಿತಿ, ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಕೃಷಿ ಸಾಲ ಸೌಲಭ್ಯದ ಮಾಹಿತಿ, ಪಶು ವೈದ್ಯಕೀಯ ಔಷಧಗಳ ಪ್ರದರ್ಶನ, ಪ್ರಸಿದ್ಧ ಕಂಪನಿಗಳ ವಸ್ತು ಪ್ರದರ್ಶನ ಸೇರಿ 100ಕ್ಕೂ ಹೆಚ್ಚು ಮಳಿಗೆಗಳು ತೆರೆಯಲಿವೆ. ಮೇಳದಲ್ಲಿ ಜಿಲ್ಲೆಯ ಎಲ್ಲಾ ಡೇರಿಗಳ ಕಾರ್ಯದರ್ಶಿಗಳು, ಸದಸ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಜೂ.24ರ ಬೆಳಗ್ಗೆ 11.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಕೃಷ್ಣಬೈರೇಗೌಡ, ಟಿ.ವೆಂಕಟರಮಣಯ್ಯ, ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಭಾಗವಹಿಸಲಿದ್ದಾರೆ ಎಂದರು.
ರೈತರಿಗೆ ಅನುಕೂಲವಾಗಲಿ: ಬೃಹತ್ ಡೇರಿ ಮೇಳದ ಪ್ರಚಾರ ವಾಹನಕ್ಕೆ ಚಾಲನೆ ನೀಡಿದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ರೈತರು ತಮ್ಮ ಕೃಷಿ ಮತ್ತು ಹೈನುಗಾರಿಕೆ ಅಭಿವೃದ್ಧಿಗೆ ಮೇಳ ಸಹಕಾರಿಯಾಗಲಿದೆ. ರೈತರಿಗೆ ಅನುಕೂಲವಾಗಲಿ ಎಂದು ಬೆಂಗಳೂರಿಗೆ ಬದಲಾಗಿ ದೊಡ್ಡಬಳ್ಳಾಪುರದಲ್ಲಿ ಮೇಳ ಆಯೋಜಿಸಲಾಗುತ್ತಿದೆ. ಪ್ರಚಾರ ವಾಹನದ ಮೂಲಕ ಗ್ರಾಮಗಳಲ್ಲಿ ಪ್ರಚಾರ ಕೈಗೊಳ್ಳಲಾಗುತ್ತಿದೆ. ಒಂದೇ ಸೂರಿನಲ್ಲಿ ಎಲ್ಲಾ ಪರಿಕರಗಳು, ಮಾಹಿತಿ ಸಿಗುವುದರಿಂದ ರೈತರಿಗೆ ಅನುಕೂಲವಾಗಲಿದ್ದು, ಜಿಲ್ಲೆಯ ರೈತರು ಮೇಳದ ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು.