Advertisement

ಕಾಡು ಪ್ರಾಣಿಗಳಿಂದ ಅಪಾರ ಬೆಳೆ ನಷ್ಟ : ತಪ್ಪದ ಸಂಕಷ್ಟ

04:18 PM Oct 07, 2022 | Team Udayavani |

ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಕರಾವಳಿ, ಮಲೆನಾಡಿನಲ್ಲಿ ಕಾಡುಪ್ರಾಣಗಳ ಹಾವಳಿ ಮಿತಿಮೀರಿದ್ದು ಕೋಟ್ಯಾಂತರ ರೂ. ರೈತರ ಬೆಳೆ ಮಣ್ಣುಪಾಲಾಗುತ್ತಿದೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇತ್ತೀಚೆ ವಿಧಾನಸಭೆಯಲ್ಲಿ ಈ ವಿಷಯವನ್ನು ಸುದೀರ್ಘ‌ವಾಗಿ ಪ್ರಸ್ತಾಪಿಸಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದಾಗ ಅವರ ಕಾಳಜಿಗೆ ವಿಧಾನಸಭೆಯಲ್ಲಿ ಸ್ಪಂದನೆ ಇರಲಿಲ್ಲ. ರೈತರು ಏನು ಮಾಡಬೇಕು?

Advertisement

ಪ್ರಾಣಿಗಳನ್ನು ಕೊಂದರೆ ಕಾನೂನಿನಂತೆ ಅಪರಾಧ, ಅಪರಾಧಿಯಾಗಲು ಬಯಸದ ರೈತ ಬೆಳೆ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲದ ಸರ್ಕಾರಕ್ಕೆ ಮೊರೆ ಇಡಲು ತೊಡಗಿ ಹಲವು ವರ್ಷಗಳೇ ಕಳೆದವು.

ಯಡಿಯೂರಪ್ಪನವರು ಮುಖ್ಯಮಂತ್ರಿ ಗಳಾಗಿದ್ದಾಗ ವಿಧಾನಸಭೆಯಲ್ಲಿ ಈ ಪ್ರಸ್ತಾಪ ಬಂದಿತ್ತು. ಆಸ್ಸಾಂನಂತೆ ಮಂಗಗಳನ್ನು ಹಿಡಿದು ಅವುಗಳನ್ನು ನಡುಗಡ್ಡೆಯಲ್ಲಿ ಬಿಡಬೇಕು, ಅಲ್ಲಿ ಹಣ್ಣಿನ ಗಿಡ ನೆಡಬೇಕು. ಈ ಪ್ರಯೋಗ ಅಲ್ಲಿ ಯಶಸ್ವಿಯಾದಂತೆ ಇಲ್ಲಿಯೂ ಯಶಸ್ವಿಯಾಗಬಲ್ಲದು ಎಂದು ಶಿವಮೊಗ್ಗ ಜಿಲ್ಲೆಯ ಶಾಸಕರು ಆಗ್ರಹಿಸಿದಾಗ ತಕ್ಷಣ ಒಪ್ಪಿಕೊಂಡ ಯಡಿಯೂರಪ್ಪನವರು ಅಲ್ಲಿ ಹೋಗಿ ಅಧ್ಯಯನ ಮಾಡುವುದು ಬೇಡ, ಇಲ್ಲಿಯೇ ಸ್ಥಳ ನೋಡಿ ಕೂಡಲೇ ಆರಂಭಿಸಿ ಎಂದು ಹೇಳಿ ಶರಾವತಿ ಹಿನ್ನೀರಿನ ನಡುಗಡ್ಡೆಯೊಂದನ್ನು ಆಯ್ಕೆ ಮಾಡಲಾಯಿತು.

ಮುಖ್ಯಮಂತ್ರಿಗಳು ಬದಲಾದ ಮೇಲೆ ವಿಷಯ ನನೆಗುದಿಗೆ ಬಿತ್ತು. ಜನ ಕಾಟ ತಡೆಯಲಾರದೆ ಮಂಗನನ್ನು ಹಿಡಿಸಿ ದೂರಕಾಡಿಗೆ ಬಿಟ್ಟರು, ಮರಳಿ ಊರಿಗೆ ಬಂತು. ಕೊಂದರೆ ಇನ್ನೊಂದು ತಂಡ ಮರಳಿ ಬಂತು. ತೆಂಗಿನ ಬೆಳೆ ಅರ್ಧದಷ್ಟು ಕೈಗೆ ಸಿಗುತ್ತಿಲ್ಲ. ಎಳೆನೀರನ್ನು ಕಿತ್ತು ಪೂರ್ತಿ ತಿನ್ನಲಾಗದೆ ಎಸೆಯುವ ಮಂಗಗಳು ಒಮ್ಮೆ ತೋಟ ಹೊಕ್ಕರೆ ಖಾಲಿ ಮಾಡಿ ಇನ್ನೊಂದು ತೋಟಕ್ಕೆ ಹಾರುತ್ತವೆ.

ಹಂದಿಗಳು ನೆಟ್ಟ ತೆಂಗಿನ ಸಸಿಯನ್ನು ಕಿತ್ತು ಕಾಯಿ ತಿನ್ನುತ್ತವೆ. ಭತ್ತ, ಕಬ್ಬಿನ ಗದ್ದೆಗಳನ್ನು ಹಾಳುಗೆಡಹುತ್ತವೆ. ಇತ್ತೀಚೆ ಮಂಗ ಎಳೆಯ ಅಡಕೆಯನ್ನು ಕಚ್ಚಿ ರಸ ಹೀರಿ ಎಸೆಯತೊಡಗಿದೆ. ಇದರ ಹೊರತು ಕೇಸಾಳ, ಕಾಡುಬೆಕ್ಕು, ಇಣಚಿ ಕಾಟ ತಪ್ಪಿದ್ದಲ್ಲ. ಮನೆಯ ಹಿಂದೆ ಅಂಗಳದಲ್ಲಿ, ಪ್ರತಿ ಮನೆಯಲ್ಲೂ ತರಕಾರಿ ತೋಟವಿರುತ್ತಿತ್ತು. ತೋಟದಲ್ಲಿ ತೊಂಡೆ, ಬೆಂಡೆ, ಪಪ್ಪಾಯಿ ಬೆಳೆಯುತ್ತಿತ್ತು. ಹೊಸದಾಗಿ ಗೊಬ್ಬರ, ನೀರು ಬೇಕಿರಲಿಲ್ಲ, ಪೇಟೆಯಿಂದ ತರಕಾರಿ ಒಯ್ಯುವ ಅಗತ್ಯವಿರಲಿಲ್ಲ. ಕಾಡುಪ್ರಾಣಿಗಳ ಕಾಟದಿಂದ ಪೇಟೆ ಯಿಂದ ತರಕಾರಿ ಒಯ್ಯಬೇಕಾಗಿದ್ದು ಹಳ್ಳಿಯವರು ತರಕಾರಿ ಬೆಳೆಯುವುದನ್ನೇ ಬಿಟ್ಟಿದ್ದಾರೆ.

Advertisement

ಇಬ್ಬರು ರೈತರು ಪರಸ್ಪರ ಮಾತಿಗೆ ತೊಡಗಿದರು ಎಂದರೆ ಅಲ್ಲಿ ಕಾಡುಪ್ರಾಣಿಗಳ ಕಾಟದ ಅಸಹಾಯಕತೆ ತೋಡಿಕೊಳ್ಳುತ್ತಾರೆ. ಕೆಲವರು ಸರ್ಕಾರಕ್ಕೆ ಮನವಿ ಕೊಡುತ್ತಾರೆ. ಜಿಲ್ಲೆಯ ಎಲ್ಲ ಶಾಸಕರಿಗೂ ಈ ಸಮಸ್ಯೆ ಗೊತ್ತಿದೆ. ಅರಣ್ಯಾಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ವಿಧಾನ ಸಭಾಪತಿಗಳೇ ಸ್ವತಃ ಪ್ರಸ್ತಾಪಿಸಿ ಜನರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದಾಗ ಮುಖ್ಯಮಂತ್ರಿಗಳು, ಅರಣ್ಯ, ಕಂದಾಯ ಮಂತ್ರಿಗಳೆಲ್ಲಾ ಅಲ್ಲೇ ಇದ್ದರು. ಜಿಲ್ಲೆಯ ಶಾಸಕರೂ ಇದ್ದರು. ಯಾರೊಬ್ಬರೂ ಸಭಾಪತಿಗಳ ಮಾತನ್ನು ಎತ್ತಿ ಮಾತನಾಡಲಿಲ್ಲ, ಚರ್ಚೆಗೆ ತೊಡಗಲಿಲ್ಲ. ಬಾವಿಗಿಳಿದು ಗಮನಸೆಳೆಯಲಿಲ್ಲ. ಅಂದಮೇಲೆ ಕಾಡುಪ್ರಾಣಿಗಳ ಕಾಟ ತಪ್ಪುವ ಲಕ್ಷಣವಿಲ್ಲ. ಸೂಪರ್‌ ಸ್ಪೇಶಾಲಿಟಿ ಆಸ್ಪತ್ರೆಗೆ ದೊಡ್ಡ ಧ್ವನಿ ಎತ್ತಿದ ಜಿಲ್ಲೆಯ ಶಾಸಕರಿಗೆ ರೈತರ ತೊಂದರೆ ಅರ್ಥವಾಗಲಿಲ್ಲವೇ? ಅಥವಾ ಜನ ಒಟ್ಟಾಗಿ ವಿವಿಧ ಮಾಧ್ಯಮಗಳ ಮುಖಾಂತರ ಮೊದಲು ಶಾಸಕರನ್ನು ಎಚ್ಚರಿಸಬೇಕೇ? ಸಭಾಪತಿ ಕಾಗೇರಿಯವರ ಮಾತಿಗೆ ಸರ್ಕಾರ ಸ್ಪಂದಿಸಿಲ್ಲ ಎಂದ ಮೇಲೆ ಮುಂದೇನು?

„ಜೀಯು

Advertisement

Udayavani is now on Telegram. Click here to join our channel and stay updated with the latest news.

Next