ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮ ಪರಿಸರ ವಲಯದಲ್ಲಿ ಬೃಹತ್ ಕಟ್ಟಡ ತಲೆ ಎತ್ತುತ್ತಿದ್ದರೂ ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ವಹಿಸದೆ ಮೌನಕ್ಕೆ ಶರಣಾಗಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಹೇರಿರುವ ಲಾಕ್‌ಡೌನ್ ದುರುಪಯೋಗ ಪಡಿಸಿಕೊಂಡು ಬೆಂಗಳೂರಿನ ಉದ್ಯಮಿಯೊಇಬ್ಬರು ಪರಿಸರ ಸೂಕ್ಷ್ಮ ವಲಯದ ಪ್ರದೇಶದಲ್ಲಿ ಹೋಂ ಸ್ಟೇ ನಿರ್ಮಿಸಲು ಹೊರಡಿದ್ದಾರೆ. ಬೃಹತ್ ಕಟ್ಟಡದಿಂದ ಕೇವಲ 300 ಮೀಟರ್ ದೂರದಲ್ಲಿ ಆನೆ ಕಂದಕ ನಿರ್ಮಿಸಿದ್ದಾರೆ. 600 ಮೀಟರ್ ಅಂತರದಲ್ಲಿಗೋಪಾಲಸ್ವಾಮಿ ಬೆಟ್ಟ ವಲಯಾರಣ್ಯ ಕಚೇರಿ ಇದೆ. ಸದಾ ಅರಣ್ಯ ಸಿಬ್ಬಂದಿ ಓಡಾಟ ಇದ್ದರೂ ಸಹ ಈ ಬಗ್ಗೆ ಚಕಾರ ಎತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ.
ಗ್ರಾಮದ ಒಳಗೆ ಹೆಚ್ಚುವರಿಯಾಗಿ ಕೊಠಡಿ ನಿರ್ಮಿಸಿದರೆ ಅದನ್ನು ಪ್ರಶ್ನಿಸುವ ಅರಣ್ಯ ಇಲಾಖೆ ಸಿಬ್ಬಂದಿ, ಕಾಡಂಚಿನಲ್ಲಿ ಬೃಹತ್ ಕಟ್ಟಡ ನಿರ್ಮಿಸುತ್ತಿದ್ದರೂ ಏಕೆ ಸುಮ್ಮನಿದ್ದಾರೆ ಎಂದುು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಮಹೇಶ್ ಪ್ರಶ್ನಿಸಿದ್ದಾರೆ.
ಈ ಭಾಗದಲ್ಲಿ ಕಾಡು ಪ್ರಾಣಿಗಳ ಓಡಾಟ ಹೆಚ್ಚಾಗಿದ್ದು, ಕಳೆದ ವರ್ಷ ಹುಲಿ ಚಿರತೆ ದಾಳಿಯಿಂದ ನಾಲ್ಕೈದು ರಾಸುಗಳು ಸಾವನ್ನಪ್ಪಿದ್ದವು. ಇಷ್ಟಾದರೂ ಅರಣ್ಯ ಇಲಾಖೆಯ ನಿಯಮ ಮೀರಿ ಹೇಗೆ ಕಟ್ಟಡ ನಿರ್ಮಾಣ ಆಗುತ್ತಿದೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಹಂಗಳ ಗ್ರಾಪಂ ಪಿಡಿಒ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಪಂಚಾಯ್ತಿ ಮತ್ತು ಗ್ರಾಪಂ ಅಧಿಕಾರಿಗಳಿಂದ ಮೇಲುಕಾಮನಹಳ್ಳಿ ಆಸುಪಾಸು ಯಾವುದೇ ಕಟ್ಟಡಕ್ಕೆ ಅನುಮತಿ ನೀಡಿಲ್ಲ. ಜೊತೆಗೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿ ನಮ್ಮನ್ನು ಸಂಪರ್ಕಿಸಿಲ್ಲ ಎಂದು ತಿಳಿಸಿದ್ದಾರೆ.
ಸೂಕ್ಷ್ಮ ಪರಿಸರ ವಲಯದಲ್ಲಿ ಹೋಂ ಸ್ಟೇ ಉದ್ದೇಶದಿಂದ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ. ಜೊತೆಗೆ ಅಕ್ರಮ ಕಟ್ಟಡ ನಿರ್ಮಾಣದ ಮಾಹಿತಿ ಇಲ್ಲ. ಇದರ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು.
– ನವೀನ್ ಕುಮಾರ್, ಆರ್‌ಎಫ್ಓ, ಜಿ. ಎಸ್.ಬೆಟ್ಟ ವಲಯ.
ಮೇಲುಕಾಮನಹಳ್ಳಿ ಕಾಡಂಚಿನಲ್ಲಿ ನಿಯಮ ಮೀರಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರೆ ಅಂತಹ ವ್ಯಕ್ತಿ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಲಾಗುವುದು.
-ನಟೇಶ್. ಸಿಎಫ್, ಬಂಡೀಪುರ.
– ಬಸವರಾಜು ಎಸ್.ಹಂಗಳ