Advertisement

ಭವಾನಿ ಫೌಂಡೇಶನ್‌ ಆರ್ಥಿಕವಾಗಿ ಹಿಂದುಳಿದವರ ಆಶಾಕಿರಣ: ಡಾ|ಶಿಶಿರ್‌ ಶೆಟ್ಟಿ

12:23 PM Jun 19, 2022 | Team Udayavani |

ಮುಂಬಯಿ: ರಕ್ತದಾನವು ಮಾನವೀ ಯತೆಯ ಸೇವೆಯಾಗಿದೆ. ರಕ್ತದಾನ ವನ್ನು ಅರ್ಹತೆ ಇರುವ ಪ್ರತಿಯೊಬ್ಬರೂ ಮಾಡಬಹುದು. ಒಂದು ಜೀವವನ್ನು ಉಳಿಸುವ ಶಕ್ತಿ ರಕ್ತದಾನಕ್ಕಿದೆ. ಭವಾನಿ ಫೌಂಡೇಶನ್‌ ಮುಂಬಯಿ ಕೆ. ಡಿ. ಶೆಟ್ಟಿಯವರ ನೇತೃತ್ವದಲ್ಲಿ  ಕಳೆದ ಏಳು ವರ್ಷಗಳಿಂದ ವರ್ಷ ಕ್ಕೆರಡು ಬಾರಿ ರಕ್ತದಾನ ಶಿಬಿರವನ್ನು ಆಯೋಜಿ ಸುತ್ತಿರುವುದು ಸಮಾಜ ಸೇವೆಯ ಬಗ್ಗೆ ಭವಾನಿ ಫೌಂಡೇಶನ್‌ಗಿರುವ ಕಾಳಜಿಯನ್ನು ತೋರಿಸುತ್ತದೆ. ಇದು ಬಡವರ ಆಶಾಕಿರಣ ಎಂದು ನವಿ ಮುಂಬಯಿ ಫೋರ್ಟಿಸ್‌ ಆಸ್ಪತ್ರೆಯ ಗ್ರಂಥಿ ವಿಜ್ಞಾನ ವಿಭಾಗದ ನಿರ್ದೇಶಕ ಡಾ| ಶಿಶಿರ್‌ ಶೆಟ್ಟಿ ಅವರು ತಿಳಿಸಿದರು.

Advertisement

ಭವಾನಿ ಫೌಂಡೇಶನ್‌ ವತಿಯಿಂದ ಸಿಬಿಡಿ ಬೇಲಾಪುರ ಸೆಕ್ಟರ್‌ 15ರಲ್ಲಿರುವ ಟೈಮ್ಸ… ಸ್ಕೋರ್‌ನಲ್ಲಿ  ಜೂ. 18ರಂದು ಜರಗಿದ ಬೃಹತ್‌ ರಕ್ತದಾನ ಶಿಬಿರವನ್ನು  ಅವರು ಉದ್ಘಾಟಿಸಿ, ಬಡವರ, ದೀನ ದಲಿತರ ಸೇವೆಯಲ್ಲಿ ತೊಡಗಿರುವ ಈ ಸಂಸ್ಥೆಗೆ ಎಲ್ಲರ ಸಹಾಯ, ಪ್ರೋತ್ಸಾಹ ಅಗತ್ಯವಾಗಿದೆ. ಕೆ. ಡಿ. ಶೆಟ್ಟಿ ಅವರು ಉದ್ಯಮಿಯಾಗಿ, ಸಮಾಜ ಸೇವಕರಾಗಿ, ದಾನಿಯಾಗಿ ಮಾಡುತ್ತಿರುವ ಸೇವೆ ಅಪಾರವಾಗಿದೆ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಭವಾನಿ ಫೌಂಡೇಶನ್‌ನ ಅಧ್ಯಕ್ಷ ಕುಸುಮೋಧರ ಡಿ. ಶೆಟ್ಟಿ ಚೆಲ್ಲಡ್ಕ  ಮಾತನಾಡಿ ಸಂಸ್ಥೆಯ ಸಮಾಜಪರ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಅತಿಥಿಯಾಗಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಶಾಂತಾರಾಮ್‌ ಬಿ. ಶೆಟ್ಟಿ  ಶುಭ ಹಾರೈಸಿದರು.

ಬಿಜೆಪಿ ಮಹಾರಾಷ್ಟ್ರ ಘಟಕ ಯುವ ಮೋರ್ಚಾದ ಕಾರ್ಯಾಧ್ಯಕ್ಷೆ ಮೀನಾ ಸಂದೀಪ್‌ ಕೇದಾರ್‌ ಮಾತನಾಡಿ, ಭವಾನಿ ಫೌಂಡೇಶನ್‌ ಮಾಡುತ್ತಿರುವ ಸಮಾಜಪರ ಕಾರ್ಯಗಳನ್ನು ಗಮನಿಸುತ್ತಿದ್ದು, ಒಂದೇ ಪರಿವಾರದಂತೆ ಸೇರಿ ಸಮಾಜಕ್ಕಾಗಿ ತಮ್ಮ ಸಮಯವನ್ನು ವಿನಿಯೋಗಿಸುತ್ತಿರುವುದು ಅಭಿನಂದನೀಯ. ಇದಕ್ಕೆ ಭವಾನಿ ಮಾತೆಯ ಆಶೀರ್ವಾದ ಸದಾ ಇರುತ್ತದೆ. ಇದು ದೇಶದಲ್ಲಿ ಅತ್ಯುತ್ತಮ ಸೇವಾಸಂಸ್ಥೆಯಾಗಿ ಬೆಳೆಯಲಿದೆ ಎಂದು ಶುಭ ಹಾರೈಸಿದರು.

ಭಂಡಾರಿ ಸೇವಾ ಸಂಘದ ಮಾಜಿ ಅಧ್ಯಕ್ಷ, ಸಮಾಜ ಸೇವಕ ಬಾಲಕೃಷ್ಣ ಭಂಡಾರಿ ಮಾತನಾಡಿ, ತನ್ನ ಸಂಪಾದನೆಯಲ್ಲಿ ಸ್ವಲ್ಪ ಪಾಲನ್ನು ಸಮಾಜಕ್ಕೆ ವಿನಿಯೋಗಿಸುತ್ತ ಅಸಹಾಯಕರ ಸೇವೆಯಲ್ಲಿ ತೊಡಗಿರುವ ಕೆ. ಡಿ. ಶೆಟ್ಟಿ ಅವರು ಭವಾನಿ ಫೌಂಡೇಶನ್‌ನ ಮೂಲಕ ಮಾಡುತ್ತಿರುವ ಕಾರ್ಯವು ರಾಷ್ಟ್ರಮಟ್ಟದಲ್ಲೂ ಗಮನ ಸೆಳೆದಿದೆ. ಕರ್ನಾಟಕ ಸರಕಾರ ಅವರನ್ನು ಗುರುತಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಇವರ ಸೇವೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು.

Advertisement

ಭವಾನಿ ಫೌಂಡೇಶನ್‌ನ ವಿಶ್ವಸ್ತ ಧರ್ಮಪಾಲ್‌ ದೇವಾಡಿಗ ಮಾತನಾಡಿ, ಕಳೆದ ಏಳು ವರ್ಷಗಳಿಂದ ಭವಾನಿ ಫೌಂಡೇಶನ್‌ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಶೈಕ್ಷಣಿಕ, ಸಾಮಾಜಿಕ, ವೈದ್ಯಕೀಯ ಸಹಿತ ಆರ್ಥಿಕವಾಗಿ ಹಿಂದುಳಿದವರ ಆಶಾಕಿರಣವಾಗಿ ಕಂಗೊಳಿಸುತ್ತಿದೆ ಎಂದರು.

ಭವಾನಿ ಫೌಂಡೇಶನ್‌ನ ವಿಶ್ವಸ್ತ ದೀಕ್ಷಿತ್‌ ಕೆ. ಶೆಟ್ಟಿ  ಮಾತನಾಡಿ, ಭವಾನಿ ಫೌಂಡೇಶನ್‌ನ ಸರ್ವಸದಸ್ಯರ ಸಂಪೂರ್ಣ ಸಹಕಾರ ಹಾಗೂ ಪ್ರೋತ್ಸಾಹದಿಂದ ಸಮಾಜಪರ ಕಾರ್ಯ ಮಾಡುವಲ್ಲಿ ಸಹಾಯ ವಾಗುತ್ತಿದೆ. ವರ್ಷಕ್ಕೆರಡು ಬಾರಿ ನಡೆಯುವ ರಕ್ತದಾನ ಶಿಬಿರದಲ್ಲಿ  ಫೌಂಡೇಶನ್‌ನ ಎಲ್ಲ ಕಾರ್ಯಕರ್ತರು ರಕ್ತದಾನ ಮಾಡುತ್ತಿದ್ದಾರೆ. ಯಾವುದೇ ಕೆಲಸದಲ್ಲಿ ನಮ್ಮ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸುತ್ತಿರುವುದು ನಮಗೆ ಉತ್ತೇಜನ ನೀಡಿದಂತಾಗಿದೆ ಎಂದರು.

ಸರಿತಾ ಕೆ. ಶೆಟ್ಟಿ  ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಶಿಖಾ ಪ್ರಜ್ವಿತ್‌ ಶೆಟ್ಟಿ ಅತಿಥಿಗಳಿಗೆ ಹಾಗೂ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಉಪಾಧ್ಯಕ್ಷ ದಿನೇಶ್‌ ಎಸ್‌. ಶೆಟ್ಟಿ, ಕೋಶಾಧಿಕಾರಿ ಕರ್ನೂರು ಮೋಹನ್‌ ರೈ ಹಾಗೂ ಭವಾನಿ ಫೌಂಡೇಶನ್‌ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಭವಾನಿ ಫೌಂಡೇಶನ್‌ನ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ  ರಕ್ತದಾನಗೈದು ಶಿಬಿರದ ಯಶಸ್ಸಿಗೆ ಸಹಕರಿಸಿದರು.

ಕೆ. ಡಿ. ಶೆಟ್ಟಿಯವರಂತಹ ಸಮಾಜಪರ ಕಾಳಜಿ ಇರುವ ಉದ್ಯಮಿ ಎಲ್ಲರಿಗೂ ಮಾದರಿ. ತನ್ನ ಸಂಪಾದನೆಯಲ್ಲಿ ಒಂದಷ್ಟು ಪಾಲನ್ನು ಸಮಾಜಕ್ಕಾಗಿ ವಿನಿಯೋಗಿಸಿ ಅಸಹಾಯಕರ ಕಣ್ಣೀರೊರೆಸುವ ಕೆಲಸವನ್ನು ತನ್ನ ತಾಯಿಯ ಹೆಸರಿನಲ್ಲಿ ಸ್ಥಾಪಿಸಿದ ಭವಾನಿ ಫೌಂಡೇಶನ್‌ ಮೂಲಕ ಮಾಡುತ್ತಿರುವುದು ಅಭಿನಂದನೀಯ. ಅದೆಷ್ಟೋ ಜನರ ಬಾಳಿಗೆ ಬೆಳಕನ್ನು ನೀಡುವ ಕಾರ್ಯ ಮಾಡುತ್ತಿರುವ ಕೆ. ಡಿ. ಶೆಟ್ಟಿಯವರು ನಮಗೆಲ್ಲರಿಗೂ ಪ್ರೇರಣೆ.-ಶಾಂತಾರಾಮ್‌ ಬಿ. ಶೆಟ್ಟಿ ಕಾರ್ಯಾಧ್ಯಕ್ಷರು, ಬಂಟರ ಸಂಘ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ

ತಾಯಿಯ ಹೆಸರಿನಲ್ಲಿ ಅವರ ಪ್ರೇರಣೆಯಿಂದ ಸ್ಥಾಪಿಸಲಾದ ಭವಾನಿ ಫೌಂಡೇಶನ್‌ ಇಂದು ಜಗದಗಲ ಜನಪರ ಸೇವೆಯಲ್ಲಿ ತೊಡಗಿದೆ. ಸಂಸ್ಥೆಯ ಎಲ್ಲ  ಸದಸ್ಯರು ಒಂದೇ ಪರಿವಾರದಂತೆ ಸದಾ ಅಸಹಾಯಕರ ಸೇವೆಯಲ್ಲಿ ತೊಡಗಿದ್ದಾರೆ. ಸಮಾಜಕ್ಕೆ ಬೇಕಾಗಿ ನಮ್ಮ ಫೌಂಡೇಶನ್‌ನ ಮುಖಾಂತರ ಅನೇಕ ಯೋಜನೆಗಳು ನಮ್ಮ ಮುಂದಿದ್ದು, ಅದು ಪೂರ್ಣಗೊಳ್ಳುತ್ತದೆ ಎಂಬ ವಿಶ್ವಾಸವಿದೆ. ವರ್ಷಕ್ಕೆ ಎರಡು ಬಾರಿ ಆಯೋಜಿಸಲಾಗುವ ರಕ್ತದಾನ ಶಿಬಿರದಲ್ಲಿ  ಭವಾನಿ ಫೌಂಡೇಶನ್‌ನ ಎಲ್ಲ  ಸದಸ್ಯರು ಭಾಗವಹಿಸಿ ರಕ್ತದಾನ ಮಾಡುತ್ತಿರುವುದು ಅಭಿನಂದನೀಯ. ಸಂಸ್ಥೆಯ ಸಮಾಜಪರ ಕಾರ್ಯಗಳ ಯಶಸ್ಸಿಗೆ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆಗಳು.-ಕುಸುಮೋಧರ ಡಿ. ಶೆಟ್ಟಿ ಅಧ್ಯಕ್ಷರು, ಭವಾನಿ ಫೌಂಡೇಶನ್‌  ಟ್ರಸ್ಟ್‌ ಮುಂಬಯಿ

-ಚಿತ್ರ-ವರದಿ: ಸುಭಾಷ್‌ ಶಿರಿಯ

Advertisement

Udayavani is now on Telegram. Click here to join our channel and stay updated with the latest news.

Next