Advertisement

ಹುಬ್ಬಳ್ಳಿ: 13.8 ಲಕ್ಷದಲ್ಲಿ ಬ್ಯಾಹಟ್ಟಿ ಕೆರೆಗೆ ‌ಮರುಹುಟ್ಟು

04:50 PM Jan 10, 2024 | Team Udayavani |

ಉದಯವಾಣಿ ಸಮಾಚಾರ
ಹುಬ್ಬಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ)ಬಿ.ಸಿ.ಟ್ರಸ್ಟ್‌ ನ ಧಾರವಾಡ ಪ್ರಾದೇಶಿಕ ಕಚೇರಿ ವತಿಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಅಂದಾಜು 13.85ಲಕ್ಷ ರೂ. ವೆಚ್ಚದಲ್ಲಿ 10 ಎಕರೆ ವಿಸ್ತೀರ್ಣದಲ್ಲಿ ದೊಡ್ಡ ಕಟ್ಟೆ ಕೆರೆ ಹೂಳೆತ್ತಲಾಗಿದೆ.

Advertisement

ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಎಸ್‌ಕೆಡಿಆರ್‌ಡಿಪಿಯ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ, ಸಂಸ್ಥೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕು ವತಿಯಿಂದ ಗ್ರಾಮದ ಒಟ್ಟು 17 ಎಕರೆ ಕೆರೆ ಜಾಗದಲ್ಲಿದ್ದ ದೊಡ್ಡ ಕಟ್ಟೆ ಕೆರೆ, ಸಣ್ಣ ಕಟ್ಟೆ ಕೆರೆ ಸೇರಿ ಅವಳಿ ಕೆರೆಗಳ ಒಟ್ಟು 10 ಎಕರೆ ಜಾಗ ಹೂಳೆತ್ತಿ ಪುನಶ್ಚೇತನಗೊಳಿಸಲಾಗಿದೆ. ಡಿ.5ರಿಂದ ಕೆರೆಯ ಹೂಳೆತ್ತುವ ಕಾರ್ಯ ಆರಂಭಿಸಲಾಗಿತ್ತು. 38 ದಿನಗಳಲ್ಲಿ ಒಟ್ಟು 60 ಸಾವಿರ ಘನಮೀಟರ್‌ ಹೂಳು ತೆಗೆಯಲಾಗಿದೆ. ಇದರಿಂದ ಕೆರೆ ಇನ್ಮುಂದೆ 4 ಕೋಟಿ ಲೀಟರ್‌ ನೀರಿನ ಸಂಗ್ರಹ ಸಾಮರ್ಥಯ ಹೊಂದಲಿದೆ. ಇದರಿಂದ ಗ್ರಾಮದ ಅಂದಾಜು 5,500 ಕುಟುಂಬಗಳು ಇದರ ಪ್ರಯೋಜನ ಪಡೆಯಲಿವೆ ಎಂದರು.

ಕೆರೆಯ ಹೂಳೆತ್ತಲು ಎರಡು ಹಿಟಾಚಿ ಯಂತ್ರ, 160ಟ್ರಾಕ್ಟರ್‌ ಬಳಸಲಾಗಿದೆ. ರೈತರು ಸ್ವತಃ ತಮ್ಮ ಟ್ರಾಕ್ಟರ್‌ಗಳನ್ನು ತಂದು ಹೂಳೆತ್ತಿದ್ದ ಮಣ್ಣು ಒಯ್ದಿದ್ದಾರೆ. ಒಟ್ಟು 24 ಸಾವಿರ ಟ್ರಾಕ್ಟರ್‌ ಲೋಡ್‌ ಗಳ ಮಣ್ಣು ಸಾಗಾಟವಾಗಿದೆ. ಈ ಕಾಮಗಾರಿಯ ಒಟ್ಟು ವೆಚ್ಚ 25.85ಲಕ್ಷ ರೂ.ಆಗಿದ್ದು, ಸ್ಥಳೀಯರ ಅನುದಾನ 12ಲಕ್ಷ ರೂ. ಆಗಿದೆ. ಗ್ರಾಮಸ್ಥರು ಈ ಕಾರ್ಯಕ್ಕೆ ತುಂಬಾ ಸಹಕಾರ ನೀಡಿದರು.ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಕೆರೆ ಹೂಳೆತ್ತಲು ಸಾಧ್ಯವಾಯಿತು ಎಂದರು. ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ ಅಂದಾಜು 2.09ಕೋಟಿ ರೂ. ವೆಚ್ಚದಲ್ಲಿ ಒಟ್ಟು 19 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಇದರಲ್ಲಿ ಯೋಜನೆಯ ಅನುದಾನ 1.06 ಕೋಟಿ ರೂ. ಹಾಗೂ ಸ್ಥಳೀಯರ ಅನುದಾನ 1.03 ಕೋಟಿ ರೂ. ಆಗಿದೆ.

ಮಳೆಗಾಲ ವೇಳೆ ಕೆರೆಯ ಸುತ್ತಲೂ ಗಿಡ ನಾಟಿ ಮಾಡಲಾಗುವುದು. ಇದರಿಂದ ಕೆರೆ ಸಂರಕ್ಷಿಸದಂತಾಗುತ್ತದೆ. ಗ್ರಾಮಸ್ಥರು ಸಹಿತ
ಕೆರೆಯ ಸುತ್ತಲೂ ಸ್ವತ್ಛತೆ ಕಾಪಾಡಿಕೊಳ್ಳುವುದು ಅವರ ಜವಾಬ್ದಾರಿ ಆಗಿದೆ. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಈ ನಿಟ್ಟಿನಲ್ಲಿ ಮುತುರ್ವಜಿ ವಹಿಸಬೇಕು ಎಂದರು. ಎಸ್‌ಕೆಡಿಆರ್‌ಡಿಪಿ ಹುಬ್ಬಳ್ಳಿ ತಾಲೂಕು ಗ್ರಾಮೀಣ ಯೋಜನಾಧಿಕಾರಿ ಸುಧಾ ಪಿ. ಗಾಂವಕರ, ಕೃಷಿ ಅಧಿಕಾರಿಗಳಾದ ಗ್ರಾಮೀಣ ತಾಲೂಕಿನ ಮಾಳಪ್ಪ ದನಗರ, ಶಹರ ತಾಲೂಕಿನ ಶಿವಾನಂದ ಮಳಲಿ, ಗ್ರಾಪಂ ಉಪಾಧ್ಯಕ್ಷೆ ಮಧು ಹುಬ್ಬಳ್ಳಿ ಹಾಗೂ ಸದಸ್ಯರು, ಕೆರೆ ಸಮಿತಿ ಅಧ್ಯಕ್ಷ ಪರಮೇಶ್ವರ ಯಡ್ರಾವಿ, ಗೌರವ ಅಧ್ಯಕ್ಷ ಶಿವಾನಂದ ಪೂಜಾರ, ಉಪಾಧ್ಯಕ್ಷ ಶಿದ್ರಾಮಪ್ಪ ಕುರುಬರ, ಅಶೋಕ ನಂದಿ,ಗ್ರಾಮಸ್ಥರು ಇದ್ದರು.

ಗ್ರಾಮದಲ್ಲಿನ ಈ ಕೆರೆ ಗ್ರಾಮಸ್ಥರ ಜೀವಾಳವಾಗಿದೆ. ಕೆರೆ ಹೂಳೆತ್ತಿದ್ದರಿಂದ 150 ಬೋರ್‌ ವೆಲ್‌ಗ‌ಳು, ಐದು ಬಾವಿಗಳು ಜಲಪೂರಣಗೊಂಡಿವೆ. ಒತ್ತುವರಿಯಾಗಿದ್ದ ಒಂದು ಎಕರೆ ಕೆರೆ ವಿಸ್ತೀರ್ಣ ತೆರವು ಮಾಡಲಾಗಿದೆ. ತಾಯಿ ಮಣ್ಣಿಗೆ ಹಾನಿ ಆಗದಂತೆ ಹೂಳು ತುಂಬಿದ್ದ ಮಣ್ಣನ್ನು 4ಅಡಿಗಳಷ್ಟು ತಳಮಟ್ಟದಿಂದ ಹೂಳೆತ್ತಲಾಗಿದೆ. ಈ ಕಾರ್ಯಕ್ಕೆ ಗ್ರಾಮಸ್ಥರು ತುಂಬಾ ಸಹಕಾರ ನೀಡಿದ್ದಾರೆ. ಸ್ವತಃ ತಾವೇ ಟ್ರಾಕ್ಟರ್‌ ತಂದು ಶಿಸ್ತುಬದ್ಧವಾಗಿ ಮಣ್ಣು ತೆಗೆದುಕೊಂಡು ಹೋಗಿದ್ದಾರೆ.
ನಿಂಗರಾಜ ಮಾಳವಾಡ, ಎಸ್‌ಕೆಡಿಆರ್‌ಡಿಪಿ, ಕೆರೆ ಅಭಿಯಂತರ, ಪ್ರಾದೇಶಿಕ ಕಚೇರಿ ಧಾರವಾಡ

Advertisement

ಗ್ರಾಮದಲ್ಲಿ ಎಸ್‌ಕೆಡಿಆರ್‌ಡಿಪಿಯಿಂದ ಕೆರೆ ಹೂಳೆತ್ತುವ ಕಾರ್ಯ ಕೈಗೊಂಡಿದ್ದರಿಂದ ರೈತರು, ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಿದೆ. ಬರಗಾಲದಲ್ಲಿ ಕೈಕಟ್ಟಿ ಕುಳಿತಿದ್ದ ರೈತರಿಗೆ ಹಾಗೂ ಟ್ರಾಕ್ಟರ್‌ ಮಾಲಕರಿಗೆ ಒಂದಿಷ್ಟು ಆದಾಯವಾಗಿದೆ. ಗ್ರಾಮದ ಸುತ್ತಲೂ ಕುಡಿಯುವ ನೀರಿನ 50ಬಾವಿಗಳಿವೆ. ಕೆರೆ ತುಂಬಿದರೆ ಅಂತರ್ಜಲ ಹೆಚ್ಚಿನಮಗೆಲ್ಲ ಅನುಕೂಲವಾಗುತ್ತದೆ.
ವೀರಯ್ಯ ಕಟ್ಟಿಮನಿ
ಕೆರೆ ಸಮಿತಿ ಕಾರ್ಯದರ್ಶಿ

ಗ್ರಾಮಸ್ಥರಲ್ಲಿ ಶಿಕ್ಷಣ, ಆರ್ಥಿಕ ಮಟ್ಟ ಸುಧಾರಿಸಿದೆ. ಮಹಿಳೆಯರು ಮನೆ ನಿರ್ವಹಣೆ ಮಾಡಲು ಅನುಕೂಲವಾಗಿದೆ. ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಟ್ಟು 168 ಸಂಘಗಳಿದ್ದು, ಅದರಲ್ಲಿ ಮಹಿಳೆಯರ 140 ಮತ್ತು ಪುರುಷರ 28 ಸಂಘಗಳಿವೆ.
ಮಹಾದೇವಿ ಹಂಗರಕಿ
ಗ್ರಾಪಂ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next