Advertisement

ಆರ್‌ಪಿಎಫ್‌ ಸಿಬ್ಬಂದಿ ನಿರ್ಲಕ್ಷ್ಯ?

03:16 PM Oct 24, 2019 | Naveen |

ಹುಬ್ಬಳ್ಳಿ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ನಡೆದ ವಸ್ತುವೊಂದರ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಪೊಲೀಸ್‌, ಆರ್‌ಪಿಎಫ್‌ ಹಾಗೂ ಸ್ಥಳೀಯ ಪೊಲೀಸ್‌ ಹಿರಿಯ ಅಧಿಕಾರಿಗಳು ಬುಧವಾರ ಜಂಟಿಯಾಗಿ ಸಭೆ ನಡೆಸಿದರು.

Advertisement

ಸಮನ್ವತೆಯೊಂದಿಗೆ ಪ್ರಕರಣದ ಸಮಗ್ರ ತನಿಖೆಗೆ ಹಾಗೂ ಇಂತಹ ಅನಾಹುತಗಳು ಸಂಭವಿಸದಂತೆ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.

ವಿಭಾಗೀಯ ಭದ್ರತಾ ಆಯುಕ್ತ ವಲ್ಲೇಸ್ವರ ತೋಕಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲ ಇಲಾಖೆಗಳ ಸಮನ್ವತೆಯೊಂದಿಗೆ ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಕಟ್ಟುನಿಟ್ಟಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ನಿಲ್ದಾಣಕ್ಕೆ ಆಗಮಿಸುವ ವಾಹನಗಳ ಹಾಗೂ ಸಂಶಯಾಸ್ಪದ
ವ್ಯಕ್ತಿ ಹಾಗೂ ವಸ್ತುಗಳ ಬಗ್ಗೆ ನಿಗಾವಹಿಸಬೇಕು. ವಸ್ತು ಮತ್ತು ವ್ಯಕ್ತಿಗಳ ಬಗ್ಗೆ ಶಂಕೆ ಬಂದರೆ ಸಮಗ್ರವಾಗಿ ತಪಾಸಣೆ ಮಾಡಬೇಕು. ವಸ್ತುಗಳನ್ನು ಮೆಟಲ್‌ ಡಿಟೆಕ್ಟರ್‌, ಶ್ವಾನದಳ ಮೂಲಕ ತಪಾಸಣೆ ನಡೆಸಬೇಕು.

ಶಂಕಾಸ್ಪದ ವಸ್ತುಗಳು ದೊರೆತರೆ ಅದನ್ನು ಹಿರಿಯ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಜೊತೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಸ್ಫೋಟಕ ವಸ್ತುಗಳು ಇದ್ದರೆ ಬಾಂಬ್‌ ತಪಾಸಣೆ ಮತ್ತು ನಿಷ್ಕ್ರಿಯ ತಂಡಕ್ಕೆ ಮಾಹಿತಿ ನೀಡಬೇಕು. ಸಮನ್ವತೆಯಿಂದ ಯಾವುದೇ ಅನಾಹುತಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು ಎನ್ನಲಾಗಿದೆ.

ಸಭೆಯಲ್ಲಿ ರೈಲ್ವೆ ಪೊಲೀಸ್‌ ಡಿವೈಎಸ್‌ಪಿ ಬಸನಗೌಡ ಪಾಟೀಲ, ಆರ್‌ಪಿಎಫ್‌ ಇನ್‌ಸ್ಪೆಕ್ಟರ್‌, ಶಹರ ಠಾಣೆ ಇನ್‌ಸ್ಪೆಕ್ಟರ್‌ ಗಿರೀಶ ಬೋಜನ್ನವರ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next