Advertisement

ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ ಲೋಕಾರ್ಪಣೆ

11:10 AM Aug 10, 2020 | Suhan S |

ಹುಬ್ಬಳ್ಳಿ: ಇಲ್ಲಿನ ಗದಗ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಉತ್ತರ ಕರ್ನಾಟಕದ ಪ್ರಥಮ ರೈಲು ಮ್ಯೂಸಿಯಂ ಅನ್ನು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ರವಿವಾರ ರಾಷ್ಟ್ರಕ್ಕೆ ಸಮರ್ಪಿಸಿದರು.

Advertisement

ನೈಋತ್ಯ ರೈಲ್ವೆ ವತಿಯಿಂದ ವರ್ಚುವಲ್‌ ವೇದಿಕೆಯ ಮೂಲಕ ಆಯೋಜಿಸಲಾಗಿದ್ದ  ಸಮಾರಂಭದಲ್ಲಿ ಹುಬ್ಬಳ್ಳಿಯ ರೈಲು ಮ್ಯೂಸಿಯಂ ಅನ್ನು ದೇಶಕ್ಕೆ ಸಮರ್ಪಿಸಲಾಯಿತು. ನಂತರ ಮಾತನಾಡಿದ ಸಚಿವ ಪ್ರಹ್ಲಾದ ಜೋಶಿ, ಐತಿಹಾಸಿಕ ಮಹತ್ವ ಹೊಂದಿರುವ ಹುಬ್ಬಳ್ಳಿಯಲ್ಲಿ ಮ್ಯೂಸಿಯಂ ಆಗಿರುವುದು ಅತ್ಯಂತ ಸಮಂಜಸವಾಗಿದೆ. ಈ ಮ್ಯೂಸಿಯಂ ಮುಂಬರುವ ದಿನಗಳಲ್ಲಿ ಅತ್ಯಾಕರ್ಷಕ ಪ್ರವಾಸಿ ಕೇಂದ್ರವಾಗಲಿದೆ ಎಂದರು.

ಎಲೆಕ್ಟ್ರಿಕ್‌ ರೈಲು ಸಂಪರ್ಕಕ್ಕೆ ಮನವಿ: ಹುಬ್ಬಳ್ಳಿ-ಬೆಳಗಾವಿ-ಬೆಂಗಳೂರು ನಡುವೆ ಎಲೆಕ್ಟ್ರಿಕ್‌ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ಮನವಿ ಮಾಡಿದರು. ಇದರಿಂದ ಪ್ರಯಾಣದ ಅವಧಿ 8ರಿಂದ 6 ತಾಸುಗಳಿಗೆ ಇಳಿಕೆಯಾಗಲಿದೆ. ಇದು ಬೆಳಗಾವಿ ಮತ್ತು ಹುಬ್ಬಳ್ಳಿ ಜನರಿಗೆ ಅನುಕೂಲವಾಗಲಿದೆ ಎಂದರು. ದೇಶದ ಅತ್ಯಂತ ಉದ್ದದ ಅಂದರೆ 1400 ಮೀಟರ್‌ ಪ್ಲಾಟ್‌ಫಾರ್ಮ್ ಹೊಂದಿರುವುದು ಹುಬ್ಬಳ್ಳಿಯ ಹೆಗ್ಗಳಿಕೆಯಾಗಿದೆ. ಇದಕ್ಕೆ ಸಹಕರಿಸಿದ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಮತ್ತು ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ರೈಲ್ವೆ ಸಚಿವ ಪಿಯುಷ ಗೋಯಲ್‌ ಮಾತನಾಡಿ, ರೈಲ್ವೆಯು ಪ್ರತಿಯೊಬ್ಬ ಭಾರತೀಯರ ಭಾವನಾತ್ಮಕ ಸಂಬಂಧ ಹೊಂದಿದೆ. ಬಹುಜನರ ಬದುಕಿನಲ್ಲಿ ರೈಲ್ವೆ ಪ್ರಮುಖ ಪಾತ್ರ ವಹಿಸಿದೆ. ವಿದ್ಯಾರ್ಥಿ ಜೀವನ, ಉದ್ಯೋಗ,  ಕೌಟುಂಬಿಕ ಪ್ರವಾಸ, ಹೋರಾಟ ಹೀಗೆ ಅನೇಕ ಮಜಲುಗಳಲ್ಲಿ ರೈಲ್ವೆ ಪಾತ್ರ ಹಿರಿದಾಗಿದೆ. ಕೋವಿಡ್‌ ಸಂದರ್ಭದಲ್ಲಿ ರೈಲ್ವೆ ಇಲಾಖೆ ಸೇವೆ ಅಪೂರ್ವವಾಗಿದ್ದು, ದೇಶ ಸೇವೆಗೆ ಬದ್ಧವಾಗಿದೆ. ದೇಶದ ಅಭಿವೃದ್ಧಿಗೆ ರೈಲ್ವೆ ಇಲಾಖೆಯು ಎಂಜಿನ್‌ ಆಗಲಿದೆ. ಆತ್ಮನಿರ್ಭರ್‌ ಭಾರತ ಅಭಿಯಾನದಲ್ಲಿ ಕೈಜೋಡಿಸಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರೈಲ್ವೆ ಸಹಾಯಕ ಸಚಿವ ಸುರೇಶ ಅಂಗಡಿ ಮಾತನಾಡಿ, ರೈಲು  ಮ್ಯೂಸಿಯಂ ಹುಬ್ಬಳ್ಳಿ-ಧಾರವಾಡ ನಗರದ ಜನರಿಗೆ ದೊಡ್ಡ ಕೊಡುಗೆಯಾಗಿದೆ. 167 ವರ್ಷಗಳ ರೈಲ್ವೆ ಇಲಾಖೆಯ ಇತಿಹಾಸ ಮತ್ತು ಬೆಳೆದುಬಂದ ಹಾದಿಯನ್ನು ಮ್ಯೂಸಿಯಂ ಪರಿಚಯಿಸಲಿದೆ. ಹುಬ್ಬಳ್ಳಿ ಐತಿಹಾಸಿಕ ಮಹತ್ವ ಹೊಂದಿರುವ ಸ್ಥಳವಾಗಿದ್ದು, ಇಲ್ಲಿ ಮ್ಯೂಸಿಯಂ ಸ್ಥಾಪಿಸಿರುವುದು ಅರ್ಥಪೂರ್ಣವಾಗಿದೆ. ಕೋವಿಡ್‌-19 ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಸೇವೆ ಮತ್ತು ಅದರ ಕಾರ್ಯತತ್ಪರತೆ ಪ್ರದರ್ಶಿಸಲು ಒಂದು ಕೋಚ್‌ ಅನ್ನು ಮೀಸಲಿಡಬೇಕು. ಇದರಿಂದ ಮುಂದಿನ ಜನಾಂಗಕ್ಕೆ ಕೋವಿಡ್‌ ಪರಿಸ್ಥಿತಿಯ ಬಗ್ಗೆ ಮಾಹಿತಿ ದೊರೆಯುವುದು ಎಂದರು.

Advertisement

ಮ್ಯೂಸಿಯಂ ರವಿವಾರದಿಂದ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ ಎಂದು ಸಚಿವ ಸುರೇಶ ಅಂಗಡಿ ತಿಳಿಸಿದರು. ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ ಮೊದಲಾದವರಿದ್ದರು.

ಹುಬ್ಬಳ್ಳಿ -ಬೆಳಗಾವಿ ಮಧ್ಯೆ ರೈಲ್ವೆ ಕಾಮಗಾರಿ ಶೀಘ್ರ ಆರಂಭ: ಜೋಶಿ : ಹುಬ್ಬಳ್ಳಿಯಿಂದ ಕಿತ್ತೂರು ಮಾರ್ಗವಾಗಿ ಬೆಳಗಾವಿಗೆ ನೂತನ ರೈಲ್ವೆ ಮಾರ್ಗ ರಚನೆ ಕುರಿತು ಸಮೀಕ್ಷೆ ಮುಗಿದಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ನಗರದಲ್ಲಿ ಸ್ಥಾಪನೆಯಾದ ರೈಲು ಮ್ಯೂಸಿಯಂ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಿಂದ ಬೆಂಗಳೂರುವರೆಗೆ ಇಲೆಕ್ಟ್ರಿಫಿಕೇಶನ್‌, ಜೋಡು ಮಾರ್ಗ ಹಾಗೂ ಇತರೆ ಕಾಮಗಾರಿ ನಡೆಯುತ್ತಿದೆ. ಅದು ಪೂರ್ಣಗೊಂಡ ನಂತರ ಬೆಳಗಾವಿಯಿಂದ ಬೆಂಗಳೂರು ವರೆಗಿನ ಪ್ರಯಾಣದ ಸಮಯವು ಒಂದಿಷ್ಟು ಕಡಿಮೆಯಾಗಲಿದೆ ಎಂದರು.ಹುಬ್ಬಳ್ಳಿಯ ರೈಲ್ವೆಗೆ ರೋಚಕವಾದ ಇತಿಹಾಸವಿದೆ. ಸದರ್ನ್ ಮರಾಠಾ ಕಂಪನಿಯ ಪ್ರಧಾನ ಕಚೇರಿ(ಹೆಡ್‌ ಕ್ವಾರ್ಟರ್‌)ಯಿಂದ ಆರಂಭವಾಗಿ ನಂತರ ಸದರ್ನ್ ರೈಲ್ವೆ, ದಕ್ಷಿಣ ಮಧ್ಯ ರೈಲ್ವೆ, ವೆಸ್ಟರ್ನ್ ರೈಲ್ವೆ ತದನಂತರ ನೈಋತ್ಯ ರೈಲ್ವೆಯಾಗಿ ರೂಪಾಂತರಗೊಂಡು, ನ್ಯಾರೋ ಗೇಜ್‌, ಮೀಟರ್‌ ಗೇಜ್‌, ಬ್ರಾಡ್‌ಗೆಜ್‌, ಕಲ್ಲಿದ್ದಲು, ಡೀಸೆಲ್, ಇಲೆಕ್ಟ್ರಿಕಲ್‌ ಆಗಿ ಪರಿವರ್ತನೆಗಳು ಆಗುತ್ತ ಬಂದಿತು. ರೈಲು ಮ್ಯೂಸಿಯಂ ಅನ್ನು ನೈಋತ್ಯ ರೈಲ್ವೆಯವರು ಅತ್ಯಾಕರ್ಷಕವಾಗಿ, ಸುಸಜ್ಜಿತವಾಗಿ ನಿರ್ಮಿಸಿದ್ದಾರೆ. ಮ್ಯೂಸಿಯಂ ನಿರ್ಮಾಣದಲ್ಲಿ ಶ್ರಮಿಸಿದ ಜಿಎಂ ಎ.ಕೆ. ಸಿಂಗ್‌, ರೂಪಾ ಶ್ರೀನಿವಾಸನ್‌, ಮಿಶ್ರಾ ಹಾಗೂ ಇತರೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸಾರ್ವಜನಿಕರು ರೈಲು ಮ್ಯೂಸಿಯಂಗೆ ಭೇಟಿ ಕೊಡುವ ಮೂಲಕ ರೈಲ್ವೆ ಇತಿಹಾಸ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ನೈಋತ್ಯ ರೈಲ್ವೆ ಜಿಎಂ ಎ.ಕೆ. ಸಿಂಗ್‌, ಡಿಆರ್‌ಎಂ ಅರವಿಂದ ಮಾಳಖೇಡ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next