ಹುಬ್ಬಳ್ಳಿ: ನಟೋರಿಯಸ್ ಕ್ರಿಮಿನಲ್ ಜೊತೆಗೆ ಬಂದಿದ್ದ ಗೋವಾ ಪೊಲೀಸನನ್ನು ಹಳೇ ಹುಬ್ಬಳ್ಳಿಯ ಪೊಲೀಸರು ಶುಕ್ರವಾರ (ಡಿ.13) ತಡರಾತ್ರಿ ವಶಕ್ಕೆ ಪಡೆದು, ಗೋವಾ ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿ ಕ್ರಿಮಿನಲ್ ತಲೆಮರೆಸಿಕೊಂಡಿದ್ದಾನೆ.
ಹಳೇಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡಿದಿದ್ದ ಪೇದೆ ಅಮಿತ ನಾಯಕನು ಗೋವಾ ಪೊಲೀಸ್ ಕ್ರೈಂ ಬ್ರಾಂಚ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆರೋಪಿ ಸುಲೇಮಾನ್ ಸಿದ್ದಿಕಿ ಹೈದರಾಬಾದ್, ಪುಣೆ, ದೆಹಲಿ, ಗೋವಾ ರಾಜ್ಯಗಳ ಪೊಲೀಸರಿಗೆ ಬೇಕಾಗಿದವನು. ಈತನ ವಿರುದ್ಧ ಕೊಲೆ, ಕೊಲೆಯತ್ನ, ಬೆದರಿಕೆ, ವಂಚನೆ, ಭೂ ಮಾಫಿಯಾ ದಂಧೆ, ಸಾರ್ವಜನಿಕರನ್ನು ಹೆದರಿಸಿ ದುಡ್ಡು ಕೀಳುವುದು, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಹತ್ತಕ್ಕೂ ಹೆಚ್ಚು ರಾಜ್ಯಗಳಿಗೆ ಬೇಕಾಗಿರುವ ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿಯನ್ನು ಗೋವಾ ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿ ಕಾರಾಗೃಹದಲ್ಲಿರಿಸಿದ್ದರು. ಈತನನ್ನು ಕಾಯಲು ಪೇದೆ ಅಮಿತ್ ನಾಯಕನನ್ನು ನೇಮಕ ಮಾಡಲಾಗಿತ್ತು.
ಆದರೆ, ಪೇದೆ ಅಮಿತ್ ಈ ನಟೋರಿಯಸ್ ಸುಲೇಮಾನ್ ಸಿದ್ದಿಕಿಯನ್ನು ಶುಕ್ರವಾರ ಕಸ್ಟಡಿಯಿಂದ ಬಿಟ್ಟಿದ್ದಲ್ಲದೆ, ಆತನೊಂದಿಗೆ ತಾನು ಪರಾರಿಯಾಗಿ ತಲೆಮರೆಸಿಕೊಳ್ಳಲು ಹುಬ್ಬಳ್ಳಿ ಕಡೆಗೆ ಬಂದಿದ್ದ. ಗೋವಾ ಪೊಲೀಸರ ಖಚಿತ ಮಾಹಿತಿ ಮೇರೆಗೆ ಇಬ್ಬರ ಪತ್ತೆಗಾಗಿ ಕಾರ್ಯಾಚರಣೆಗೆ ಮುಂದಾಗಿದ್ದಾಗ ಪೇದೆ ಅಮಿತ ನಾಯಕನು ಹಳೇಹುಬ್ಬಳ್ಳಿ ಠಾಣೆಗೆ ಆಗಮಿಸಿ ಶರಣಾಗಿದ್ದಾನೆ. ನಟೋರಿಯಸ್ ಕ್ರಿಮಿನಲ್ ಸುಲೇಮಾನ್ ಸಿದ್ದಿಕಿ ತಲೆಮರೆಸಿಕೊಂಡಿದ್ದಾನೆ. ಪೇದೆ ಅಮಿತ ನಾಯಕನನ್ನು ಗೋವಾ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.