ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಕಳೆದ ಕೆಲ ತಿಂಗಳಿನಿಂದ ಅಹಿತಕರ ಘಟನೆಗಳು ನಡೆಯುತ್ತಿವೆ. ಇಬ್ಬರು ಯುವತಿಯರ ಕೊಲೆಯಾಗಿದೆ. ಈ ನಿಟ್ಟಿನಲ್ಲಿ ಅಪರಾಧಿಗಳ ವಿರುದ್ಧ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಆರ್. ಹೇಳಿದರು.
‘ಹು-ಧಾ. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಆಯುಕ್ತಾಲಯ ಘಟಕದಲ್ಲಿ ನಡೆಯುತ್ತಿರುವ ಘಟನೆಗಳಿಂದ ಜನರಲ್ಲಿ ಆತಂಕ ಮೂಡಿದೆ. ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ. ಪುನಃ ನಂಬಿಕೆ ಮೂಡಿಸುವ ನಿಟ್ಟಿನಲ್ಲಿ ಇಲಾಖೆಯು ಹೆಚ್ಚಿನ ಕಾನೂನು ಕ್ರಮ ಬಿಗಿಗೊಳಿಸಬೇಕಿದೆ’ ಎಂದರು.
‘ಇಬ್ಬರು ಯುವತಿಯರ ಕೊಲೆ ಆಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಭಿಪ್ರಾಯ, ನಮ್ಮ ಇಲಾಖೆ ಕಾರ್ಯವೈಖರಿ ಬಗ್ಗೆ ಸಮೀಕ್ಷೆ ಮಾಡಿ ಇಂಪ್ರೆಶನ್ ತೆಗೆದುಕೊಂಡಿದ್ದೇನೆ. ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ಕೊಡುವೆ’ ಎಂದರು.
‘ಕಾನೂನು, ಸುವ್ಯವಸ್ಥೆ ಹಾಳಾಗಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಇಲಾಖೆಯ ಆಂತರಿಕ ವಿಷಯ ಬಹಿರಂಗ ಪಡಿಸುವುದಿಲ್ಲ. ಅಪರಾಧ ಕುರಿತು ಮಾಧ್ಯಮದವರ ಅಂಕಿ ಅಂಶಗಳನ್ನು ನಾವು ಕೂಡ ಪರಿಶೀಲಿಸುತ್ತಿದ್ದೇವೆ. ರಾಜ್ಯದಲ್ಲಿ 2021-22, 22-23ಕ್ಕೆ ತುಲನೆ ಮಾಡಿದರೆ ಈ ವರ್ಷ ಅಂತಹ ಏನು ವ್ಯತ್ಯಾಸವಿಲ್ಲ. ಅಂಕಿ ಅಂಶಗಳ ಪ್ರಕಾರ 2024ರಲ್ಲಿ ಕಡಿಮೆ ಇದೆ. ಒಂದೊಂದು ಜಿಲ್ಲೆಗಳಲ್ಲಿ ಈ ರೀತಿ ಆತಂಕ ಮೂಡಿಸುವಂತ ಘಟನೆ ನಡೆಯುತ್ತಿರುವುದು ಸತ್ಯ. ಈ ಬಗ್ಗೆ ನಮ್ಮ ಅಧಿಕಾರಿಗಳಿಗೆ ಏನು ಸೂಚನೆ ನೀಡಬೇಕೋ ಅದನ್ನಯ ನೀಡಿದ್ದೇನೆ ಎಂದರು.
ಹು-ಧಾ ಕಮಿಷನರ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ನಂಬಿಕೆ ಮೂಡಿಸುವ ಕೆಲಸ ಆಗಬೇಕು. ರಾಜ್ಯದಲ್ಲಿ ಕಳೆದ ವರ್ಷ ಗಾಂಜಾದ 6000 ಕೇಸ್ ಮಾಡಿದ್ದೇವೆ. ಮೊದಲಿನ ಸಂಖ್ಯೆಗೆ ತುಲನೆ ಮಾಡಿದರೆ ಈಗ ಅದು ಜಾಸ್ತಿನೇ ಇದೆ ಎಂದರು.
ಅಹಿತಕರ ಘಟನೆಗಳ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವುದರಿಂದ ನಿಯಂತ್ರಣ ಮಾಡಬಹುದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ನಿರ್ಧಾರಗಳನ್ನು ನಾವು ಬಹಿರಂಗವಾಗಿ ಹೇಳಲಾಗಲ್ಲ. ಸಾರ್ವಜನಿಕರಿಂದ ದೂರು ಬಂದಾಗ ಕೆಲವೊಂದಷ್ಟು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅಂಜಲಿ ಅಂಬಿಗೇರ ಪ್ರಕರಣದಲ್ಲಿ ಅವಳ ಅಜ್ಜಿ ಬಂದು ದೂರು ಕೊಟ್ಟರೂ ಕ್ರಮ ಕೈಗೊಂಡಿಲ್ಲ ಅನ್ನು ಆರೋಪವಿದೆ. ಈ ಬಗ್ಗೆ ಪರಿಶೀಲಿಸಲಾಗುವುದು. ಅವರನ್ನು ಭೇಟಿ ಮಾಡಲಾಗುವುದು ಎಂದರು.
ಯಾವುದೇ ಇಲಾಖೆ, ಸರ್ಕಾರವಾಗಲಿ ಕಣ್ಮುಚ್ಚಿ ಕುಳಿತುಕೊಳ್ಳಲು ಆಗಲ್ಲ. ಕಾನೂನಲ್ಲಿ ಕ್ರಮಕ್ಕೆ ಏನೆಲ್ಲಾ ಅವಕಾಶವಿದೆ ಅದನ್ನೆಲ್ಲ ತೆಗೆದುಕೊಳ್ಳುತ್ತೇವೆ ಎಂದರು.