Advertisement

ಅಧಿಕಾರಿಗಳ ಅವಾಂತರ; ಗ್ರಾಮಾಂತರ ಅತಂತ್ರ !

03:44 PM Mar 31, 2019 | Team Udayavani |

ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆ ಕೆಲ ಹಿರಿಯ ಅಧಿಕಾರಿಗಳ ಬೇಕಾಬಿಟ್ಟಿ ನಿರ್ಧಾರದಿಂದ ಇಲ್ಲಿನ ಹೊಸ ಬಸ್‌ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮಾಂತರ ಮೂರನೇ ಘಟಕದ ಕಾಮಗಾರಿ ಕಳೆದ ಆರು ತಿಂಗಳಿನಿಂದ ಸ್ಥಗಿತಗೊಂಡಿದ್ದು, ಇದೀಗ ಸಂಸ್ಥೆಯ ಆರ್ಥಿಕ ಸಂಕಷ್ಟವೇ ಕಾಮಗಾರಿ ನಿಲುಗಡೆಗೆ ಕಾರಣ ಎಂದು ತೇಪೆ ಹಚ್ಚುವ ಕೆಲಸ ನಡೆಯುತ್ತಿದೆ.

Advertisement

ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಾಮಾಂತರ ಮೂರನೇ ಘಟಕ ವೋಲ್ವೋ, ಮಲ್ಟಿ ಎಕ್ಸೆಲ್‌ಗ‌ಳಂತಹ ದೊಡ್ಡ ಬಸ್‌ ಗಳ ನಿರ್ವಹಣೆಗೆ ಪೂರಕವಾಗಿಲ್ಲ. ಈ ಕಾರಣದಿಂದ ಸುಸಜ್ಜಿತ ಬಸ್‌ ಘಟಕ ನಿರ್ಮಾಣಕ್ಕೆ ಆಡಳಿತ ಮಂಡಳಿಯಲ್ಲಿ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗಿತ್ತು. 2017 ಸೆ. 16ರಂದು ಅಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೂಮಿಪೂಜೆ ನೆರವೇರಿಸಿದ್ದರು. 2018 ಸೆ.15ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಅಧಿಕಾರಿಗಳು ಮಾಡಿಕೊಂಡಿರುವ ಯಡವಟ್ಟಿನಿಂದಾಗಿ ಸಾಕಷ್ಟು ಕಾಮಗಾರಿ ಬಾಕಿ ಉಳಿದಿದೆ.

ಆಗಿದ್ದೇನು?: ವೋಲ್ವೋ ಹಾಗೂ ಮಲ್ಟಿ ಎಕ್ಸೆಲ್‌ ಬಸ್‌ಗಳ ನಿರ್ವಹಣೆಗೆ ಅಗತ್ಯವಾದ ಅತ್ಯಾಧುನಿಕ ಘಟಕ ನಿರ್ಮಾಣ ಮಾಡುವ ಉದ್ದೇಶದಿಂದ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು. ಈಗಿರುವ ಘಟಕವನ್ನೇ ಆಧುನೀಕರಣ ಮಾಡುವುದು, ಅಗತ್ಯ ಸೌಲಭ್ಯ ಕಲ್ಪಿಸುವುದು ಉತ್ತಮ ಎಂದು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಇದಕ್ಕಾಗಿ ಕ್ರಿಯಾ ಯೋಜನೆ ತಯಾರಿಸಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಘಟಕ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು.

ಆದರೆ ಸಂಸ್ಥೆಯ ಕೆಲ ಹಿರಿಯ ಅಧಿಕಾರಿಗಳು ಇರುವ ಸ್ಥಳದಲ್ಲಿ ಘಟಕ ಮೇಲ್ದರ್ಜೆಗೇರಿಸುವ ಬದಲು ಹೊಸ ಬಸ್‌ ನಿಲ್ದಾಣದಲ್ಲಿ ಖಾಲಿ ಇರುವ ಜಾಗದಲ್ಲಿ ಘಟಕ ನಿರ್ಮಾಣ ಮಾಡುವುದು ಸೂಕ್ತ. ಸಾಕಷ್ಟು ಖಾಲಿ ಜಾಗವಿದ್ದು ಅಲ್ಲಿ ಹೊಸ ಘಟಕ ನಿರ್ಮಾಣ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು. ಈ ಸಲಹೆ ಯೋಜನೆಯ ವೆಚ್ಚದ ಗಾತ್ರ ಹೆಚ್ಚಿಸುವ ಕಾರಣಕ್ಕಾಗಿಯೋ ಅಥವಾ ಇನ್ನಾವ ಉದ್ದೇಶಕ್ಕೋ ಗೊತ್ತಿಲ್ಲ. ಯೋಜನಾ ಸ್ಥಳ ಬದಲಾಯಿಸಿ ಹೊಸ ಬಸ್‌ ನಿಲ್ದಾಣದಲ್ಲಿ ಘಟಕ ನಿರ್ಮಾಣಕ್ಕೆ ಮುಂದಾಗಿರುವುದು ಇದೀಗ ಕಗ್ಗಂಟಾಗಿ ಪರಿಣಮಿಸಿದೆ.

ಹೆಚ್ಚುವರಿ ಅನುದಾನವಿಲ್ಲ: ಘಟಕದ ಆಡಳಿತ ಕಚೇರಿ, ಬಸ್‌ ದುರಸ್ಥಿ ರ್‍ಯಾಂಪ್‌, ಇಂಧನ ಸಂಗ್ರಹ, ಕಾಂಪೌಂಡ್‌ ಗೋಡೆ ಸೇರಿದಂತೆ ಇತರೆ ಕಟ್ಟಡಗಳ ನಿರ್ಮಾಣವಾಗಿದ್ದು, ಇದಕ್ಕೆ ಪೂರಕವಾಗಿ ಮೂಲಸೌಲಭ್ಯ ಕಲ್ಪಿಸಬೇಕಾಗಿದೆ. ಈಗಾಗಲೇ ಸುಮಾರು 3 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದ್ದು, ಯೋಜನೆ ಪೂರ್ಣಗೊಳಿಸಲು ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಆಡಳಿತ ಮಂಡಳಿ ಸಭೆಯ ನಿರ್ಣಯ ಹಾಗೂ ಕ್ರಿಯಾಯೋಜನೆ ಪ್ರಕಾರ 4 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಸ್ಥಳ ಬದಲಾವಣೆಯಿಂದ ಕಾಮಗಾರಿ ವೆಚ್ಚ ಹೆಚ್ಚಳವಾಗಿದ್ದು, ಹೆಚ್ಚುವರಿ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಪ್ರಸ್ತಾವನೆ ನಿರಾಕರಿಸಿರುವ ಪರಿಣಾಮ ನಿರ್ಮಾಣ ಕಾರ್ಯ ಕಳೆದ 6 ತಿಂಗಳಿನಿಂದ ಸ್ಥಗಿತಗೊಂಡಿದೆ.

Advertisement

ಅನುದಾನ ಕೊರತೆಯಿಲ್ಲ: ಸಂಸ್ಥೆಯಲ್ಲಿ ನಡೆಯುವ ಸಿವಿಲ್‌ ಕಾಮಗಾರಿಗಳಿಗೆ ಸರಕಾರದಿಂದ ಅನುದಾನ ಬರುತ್ತದೆ. ಕೆಲ ಯೋಜನೆಗಳಿಗೆ ನಮ್ಮ ಪಾಲಿನ ಷೇರು ಕೊಡಬೇಕು.

ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹಳೆಯ ಕಾಮಗಾರಿಗಳಿಗೆ ಅನುದಾನ ಕೊರತೆಯಾಗಿಲ್ಲ. ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಪರಿಣಾಮ ಕಳೆದ ಎರಡು ವರ್ಷಗಳ ಈಚೆಗೆ ಯಾವುದೇ ಹೊಸ ಕಾಮಗಾರಿಗಳಿಗೆ ಅನುಮೋದನೆ ನೀಡಿಲ್ಲ. ಇದೀಗ ಹೆಚ್ಚುವರಿ ಅನುದಾನಕ್ಕೆ ಸಲ್ಲಿಸಿರುವ ಪ್ರಸ್ತಾವನೆಗೆ ಮಂಜೂರು ನೀಡದಿರುವುದು ಕಗ್ಗಂಟಾಗಿ ಪರಿಣಮಿಸಿದೆ. ಈಗಿರುವ ಘಟಕ ಗೋಕುಲ ಮುಖ್ಯ ರಸ್ತೆಗೆ ತಾಗಿಕೊಂಡಿದೆ ಎನ್ನುವ ಕಾರಣಕ್ಕೆ ಸ್ಥಳ ಬದಲಾವಣೆ ಮಾಡಿರುವುದು ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು.

100ಕ್ಕೂ ಹೆಚ್ಚು ಮರಗಳಿಗೆ ಬೀಳಲಿದೆ ಕೊಡಲಿ ಏಟು
ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದ ರೀತಿಯಲ್ಲಿ ಅಸ್ತಿತ್ವದಲ್ಲಿರುವ ಘಟಕವನ್ನೇ ಮೇಲ್ದರ್ಜೆಗೇರಿಸಿದ್ದರೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿರುವ ಸುಮಾರು 100ಕ್ಕೂ ಹೆಚ್ಚು ಮರಗಳು ಉಳಿಯುತ್ತಿದ್ದವು. ಇಷ್ಟೊತ್ತಿಗಾಗಲೇ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಹೆಚ್ಚುವರಿ ಅನುದಾನದ ಅಗತ್ಯವೂ ಇರಲಿಲ್ಲ. ಆದರೆ ಅಧಿಕಾರಿಗಳ ಅವೈಜ್ಞಾನಿಕ ನಿರ್ಧಾರದಿಂದ ಬಸ್‌ ನಿಲ್ದಾಣಕ್ಕೆ ಕಳೆಯಾಗಿದ್ದ 100ಕ್ಕೂ ಹೆಚ್ಚು ಮರಗಳಿಗೆ ಕೊಡಲಿ ಬೀಳಲಿದೆ. ಮರಗಳನ್ನು ಕಡಿಯದ ಹೊರತು ಬಸ್‌ಗಳ ಸಂಚಾರ ಸಾಧ್ಯವಿಲ್ಲ ಎಂಬಂತಾಗಿದೆ. ಈಗಾಗಲೇ ಮರಗಳ ಕಡಿತಕ್ಕೆ ಅರಣ್ಯ ಇಲಾಖೆಯಿಂದ ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರು ವಿಳಂಬ ಮಾಡುತ್ತಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ ಎನ್ನುತ್ತಾರೆ ಸಂಸ್ಥೆ ಅಧಿಕಾರಿಗಳು.

ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದಿರುವ ಕೆಲಸಕ್ಕೆ ಹೆಚ್ಚುವರಿ ಅನುದಾನ ಕೇಳಿದ್ದೇವೆ. ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಎಲ್ಲರಿಗೂ ಗೊತ್ತಿರುವ ವಿಷಯ. ಅನುದಾನ ಬಾರದಿರುವುದು ಕಾಮಗಾರಿ ಸ್ಥಗಿತಗೊಂಡಿರುವುದಕ್ಕೆ ಕಾರಣವಾಗಿದೆ.
ನರೇಂದ್ರಕುಮಾರ,
ಮುಖ್ಯ ಅಭಿಯಂತ, ವಾಯವ್ಯ ಸಾರಿಗೆ ಸಂಸ್ಥೆ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next