Advertisement

ಖಾದಿಗೆ ಕೈ ಹಾಕಿರುವ ಕೇಂದ್ರದ ನಡೆ ಮಹಾ ದುರಂತ

04:43 PM Jul 28, 2022 | Team Udayavani |

ಹುಬ್ಬಳ್ಳಿ: “ರಾಷ್ಟ್ರದ ಪ್ರತೀಕವಾಗಿರುವ ಖಾದಿಗೆ ಕೈ ಹಾಕಿರುವ ಕೇಂದ್ರ ಸರಕಾರದ ನಡೆ ಮಹಾ ದುರಂತವಾಗಿದೆ. ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ ಮಾಡುವ ಮೂಲಕ ಸ್ವಾಭಿಮಾನವನ್ನು ಕೆದಕಿದ್ದಾರೆ. ಖಾದಿಯನ್ನು ಕಸಿದುಕೊಳ್ಳುತ್ತಿರುವುದು ದಡ್ಡತನ ಪರಮಾವಧಿಯಾಗಿದ್ದು, ಈ ಕೃತ್ಯಕ್ಕೆ ರಾಷ್ಟ್ರದ ಜನರು ತಕ್ಕ ಪಾಠ ಕಲಿಸಲಿದ್ದಾರೆ’.

Advertisement

ಇದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕಮಲಾಪುರ ಮೂಲದ ಗುಂಡೂರಾವ ದೇಸಾಯಿ ಅವರು ಖಾರವಾದ ಪ್ರತಿಕ್ರಿಯೆ.

ಕೇಂದ್ರ ಸರಕಾರದ ಈ ನಡೆ ನೋಡಿದರೆ ಖಾದಿ ಎಂಬುದು ಕೇವಲ ಬಟ್ಟೆ ಎಂದು ತಿಳಿದಂತಿದೆ. ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಸೆಣಸಲು ಹೋರಾಟಗಾರರನ್ನು ಬಡಿದೆಬ್ಬಿಸಿದ ಅಸ್ತ್ರವೇ ಖಾದಿ. ಬ್ರಿಟೀಷರ ವಿರುದ್ಧ ತೊಡೆ ತಟ್ಟುವಂತೆ ಮಾಡಿದೆ. ಸ್ವಾಭಿಮಾನದ ಸಂಕೇತವಾಗಿರುವ ಖಾದಿ ಧರಿಸಿಯೇ ಹಲವರು ಹೋರಾಟದಲ್ಲಿ ಅಮರರಾಗಿದ್ದಾರೆ. ಇಂತಹ ಪವಿತ್ರ ವಸ್ತುವಿಗೆ ಪರ್ಯಾಯವಾಗಿ ಇನ್ನೊಂದು ಬಟ್ಟೆ ತಂದಿಟ್ಟಿರುವ ಕೇಂದ್ರ ಸರಕಾರದ ನಿರ್ಧಾರ ದಾಸ್ಯದ ಸಂಕೇತವಾಗಿದೆ.

ಖಾದಿಯೇ ನನ್ನ ಜೀವನ: ಕೇವಲ 17-18 ವರ್ಷದವನಿದ್ದಾಗ ಖಾದಿ ಧರಿಸಿಯೇ ಬ್ರಿಟೀಷರ ವಿರುದ್ಧದ ಹೋರಾಟಕ್ಕೆ ಧುಮುಕಿದ್ದೆ. ಆದಾಗಲೇ ನನ್ನ ಸೋದರ ಮಾವ ಹಾನಗಲ್ಲಿನ ತಮ್ಮಣ್ಣ ದೇಸಾಯಿ (ನಾಗೇಶ ವೆಂಕಟರಾವ ದೇಸಾಯಿ) ಅವರು ಸಂಗಡಿಗರು ಸ್ಥಳೀಯರ ಪೊಲೀಸರಿಗೆ ತಲೆ ನೋವಾಗಿದ್ದರು. ಇಂತಹ ಸಂದರ್ಭದಲ್ಲಿ ನನ್ನ ವಯಸ್ಸಿನ ನಾಲ್ವರು ಗೆಳೆಯರೊಂದಿಗೆ ಹಾನಗಲ್ಲನಲ್ಲಿ ಖಾದಿ ಧರಿಸಿ ಅಂಚೆ ಕಚೇರಿಯಲ್ಲಿ ದಾಂಧಲೆ ಮಾಡಿ ಬ್ರಿಟೀಷರ ವಿರುದ್ಧ ಘೋಷಣೆ ಕೂಗಿದ್ದೆವು. ಏಕಕಾಲಕ್ಕೆ ಸಾಕಷ್ಟು ಜನರನ್ನು ಸೆರೆ ಹಿಡಿದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಹಾಕಿದ್ದರು. ಅಂದು ಬಂಧಿತರಾದವರೆಲ್ಲಾ ಖಾದಿಧಾರಿಗಳಾಗಿದ್ದರು. ಆರು ತಿಂಗಳು ಜೈಲುವಾಸ ಅನುಭವಿಸಿದೆವು. ಮಹಾತ್ಮಗಾಂಧಿ ಅವರು ಅಂದು ಘೋಷಿಸಿದ ಖಾದಿ ಮಂತ್ರವನ್ನು ಕಳೆದ 80 ವರ್ಷಗಳಿಂದ ಜೀವನದಲ್ಲಿ ರೂಢಿಸಿಕೊಂಡು ಬಂದಿದ್ದೇನೆ. ಸ್ವಾತಂತ್ರ್ಯ ಸಿಕ್ಕಾಗ ಖಾದಿ ಉಡುಪು ಧರಿಸಿ ನನ್ನ ಸ್ವಗ್ರಾಮ ಹೊಸಪೇಟೆ ಬಳಿಯ ಕಮಲಾಪುರದಲ್ಲಿ ಸರಕಾರಿ ಕಚೇರಿಗಳ ಮೇಲೆ ಧ್ವಜ ಹಾರಿಸಿದ್ದನ್ನು ಮರೆಯಲು ಸಾಧ್ಯವಿಲ್ಲ. ಇಂದಿಗೂ ಕೂಡ ಅಂಬರ ಚರಕ ಕೊಡಿ ನಾನೇ ನೇಯ್ದುಕೊಳ್ಳುತ್ತೇನೆಂದು ಖಾದಿಯೊಂದಿಗಿನ ತಮ್ಮ ಬಾಂಧವ್ಯ ವ್ಯಕ್ತಪಡಿಸಿದರು.

ತಿದ್ದುಪಡಿ ವಿಷಾದನೀಯ: ಖಾದಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತರಾಗಿದ್ದಾರೆ. ಖಾದಿಯ ಸೇವೆಯ ಜತೆಗೆ ಒಂದೊತ್ತಿನ ಊಟ ಮಾಡುತ್ತಿದ್ದ ಕುಟುಂಬಗಳಿಗೆ ಇದು ಕಂಟಕವಾಗಿದೆ. ಪವಿತ್ರ ಖಾದಿ ಬಳಸಿ ರಾಷ್ಟ್ರಧ್ವಜ ತಯಾರಿಸುವ ಕಾರ್ಯ ದೇಶ ಸೇವೆಯಾಗಿದೆ. ಯಾವುದೇ ರಾಜಕೀಯ ಪಕ್ಷಗಳು ರಾಷ್ಟ್ರದ ಸ್ವಾಭಿಮಾನಕ್ಕೆ ಧಕ್ಕೆಯಾಗುವ ನಿರ್ಧಾರ ಕೈಗೊಳ್ಳಬಾರದು. ಇದೊಂದು ವಿಷಾಧನೀಯ ಘಟನೆಯಾಗಿದೆ. ಖಾದಿಯ ಖದರ್‌ ಅರಿತಿದ್ದರೆ ಕೇಂದ್ರ ಸರಕಾರ ಇಂತಹ ನಿರ್ಧಾರ ಮಾಡುತ್ತಿರಲಿಲ್ಲ. ಕಾಲ ಮಿಂಚಿಲ್ಲ ಕೂಡಲೇ ತಿದ್ದುಪಡಿ ರದ್ದುಗೊಳಿಸಿ ಖಾದಿ ಹಾಗೂ ರಾಷ್ಟ್ರಧ್ವಜದ ಘನತೆ ಎತ್ತಿ ಹಿಡಿಯುವ ಕೆಲಸ ಸರಕಾರ ಮಾಡಬೇಕೆಂದರು.

Advertisement

ಪ್ರಧಾನಿಗೆ ಪತ್ರ ಬರೆಯುವೆ: ಖಾದಿ, ರಾಷ್ಟ್ರಧ್ವಜಕ್ಕೆ ಕೈ ಹಾಕಿರುವ ಸಂದರ್ಭದಲ್ಲಿ ಹೋರಾಟಗಳು ಅನಿವಾರ್ಯ. ರಾಷ್ಟ್ರದ ವಿಚಾರ ಬಂದಾಗ ವಯಸ್ಸು ನೋಡಲ್ಲ. ಯಾವುದೇ ಹೋರಾಟಗಳಿಗೆ ಕರೆದರೂ ಬರುತ್ತೇನೆ. ಖಾದಿ ಕಾರ್ಯರ್ತರು, ರಾಷ್ಟ್ರಪ್ರೇಮಿಗಳು, ಮಹಾತ್ಮಗಾಂಧಿ ಸಿದ್ಧಾಂತ ಮೇಲೆ ನಂಬಿಕೆಯಿಟ್ಟವರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿರುವುದನ್ನು ಸಹಿಸಿಕೊಳ್ಳಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತೇನೆ. ಸ್ವಾತಂತ್ರ್ಯ ಹೋರಾಟಗಾರ, ಖಾದಿ ಪ್ರಿಯನಾಗಿ ಇಷ್ಟು ಮಾಡದಿದ್ದರೆ ಹೇಗೆ? ಯಾರಾದರೂ ಕರೆದುಕೊಂಡು ಹೋದರೆ ದೆಹಲಿಗೆ ಹೋಗಿ ಪ್ರಧಾನಿಗಳನ್ನು ಭೇಟಿಯಾಗಲು ಸಿದ್ಧನಿದ್ದೇನೆ ಎನ್ನುತ್ತಾರೆ ಗುಂಡೂರಾವ ದೇಸಾಯಿ.

ಕಾಂಗ್ರೆಸ್‌ ಎಚ್ಚರವಾಗಿಲ್ಲ: ರಾಷ್ಟ್ರ ಸಂಹಿತೆ ತಿದ್ದುಪಡಿ ಖಾದಿ ಬಿಡಿ ಎನ್ನುವ ಮನಸ್ಥಿತಿ ತೋರುತ್ತದೆ. ಇದಕ್ಕೆ ಪ್ರತಿಯಾಗಿ ಯಾವ ಪಾಠ ಕಲಿಸಬೇಕೆನ್ನುವ ಬುದ್ಧಿ ಜನರಲ್ಲಿದೆ. ಖಾದಿ ತೊಡಬೇಕೆಂದು ಅರಿವು ಮೂಡಿಸುವ ಕೆಲಸ ಸರಕಾರ ಮಾಡಬೇಕಿತ್ತು ಆದರೆ ಸರಕಾರ ಮಾಡಿರುವುದು ಘೋರ ಅನ್ಯಾಯ. ಕೇಂದ್ರದ ಈ ನಿರ್ಧಾರ ನನಗೆ ಬಹಳ ನೋವಾಗಿದೆ. ಅವರಿಗೆ ಅಧಿಕಾರ ಇದೆ ಎನ್ನುವ ಕಾರಣಕ್ಕೆ ಇಂತಹ ನಿರ್ಧಾರಗಳು ಸರಿಯಲ್ಲ. ಅಧಿಕಾರ ಶಾಶ್ವತವಲ್ಲ ಎಂಬುದನ್ನು ಎಲ್ಲಾ ರಾಜಕೀಯ ಪಕ್ಷಗಳು ಅರಿತುಕೊಳ್ಳಬೇಕು. ಖಾದಿ ಬಗ್ಗೆ ಇಂದಿನ ಕಾಂಗ್ರೆಸ್‌ನವರಿಗೆ ಇನ್ನೂ ಎಚ್ಚರವಾಗಿಲ್ಲ. ಖಾದಿಯ ಹಾಗೂ ಕಾಂಗ್ರೆಸ್‌ ನಡುವಿನ ಅವಿನಾಭಾವ ಸಂಬಂಧವನ್ನು ಮರೆಯಬಾರದು. ಹಿಂದಿನ ಕಾಂಗ್ರೆಸ್‌ ಹೋರಾಟ ತಿಳಿಸಿಕೊಡಬೇಕಾಗಿದೆ. ಇದು ಹೋರಾಟದ ರೂಪ ಪಡೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next