Advertisement

ಮಾನವೀಯ ಮೌಲ್ಯದಿಂದ ಗೌರವ-ಸಂಪತ್ತು ಪ್ರಾಪ್ತಿ: ಡಾ|ರಮೇಶ 

11:54 AM Feb 24, 2019 | |

ಹುಬ್ಬಳ್ಳಿ: ವೈದ್ಯರು ರೋಗಿಗಳ ನಂಬಿಕೆಗೆ ದ್ರೋಹ ಬಗೆಯದೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಗೌರವ ಹಾಗೂ ಸಂಪತ್ತು ತಾನಾಗಿಯೇ ಬರುತ್ತದೆ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್‌) ಕುಲಸಚಿವ ಡಾ| ಎಂ.ಕೆ. ರಮೇಶ ಕಿವಿಮಾತು ಹೇಳಿದರು. ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ್‌) ಸಭಾಂಗಣದಲ್ಲಿ ಶನಿವಾರ ನಡೆದ 56ನೇ ಎಂಬಿಬಿಎಸ್‌ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಮೊದಲು ವೈದ್ಯರನ್ನು ಎರಡನೆಯ ದೇವರು ಎನ್ನುತ್ತಿದ್ದರು. ಆದರೆ ಈಗ ಹಾಗಾಗುತ್ತಿಲ್ಲ. ಸಮಾಜ ಮತ್ತು ವೈದ್ಯರ ನಡುವೆ ಭಾರೀ ಅಂತರವುಂಟಾಗಿದೆ. ಹೀಗಾಗಿ ಸಮಾಜದಲ್ಲಿ ವೈದ್ಯರಿಗೆ ಅಷ್ಟಾಗಿ ಗೌರವ ಸಿಗುತ್ತಿಲ್ಲ. ವೈದ್ಯರು ಪ್ರತಿಯೊಬ್ಬ ರೋಗಿಗಳೊಂದಿಗೆ ಉತ್ತಮ ಸಂವಹನ ಮಾಡಬೇಕು. ಅವರ ನಂಬಿಕೆಗೆ ದ್ರೋಹ ಬಗೆಯುವ ಕೆಲಸ ಎಂದೂ ಮಾಡಬಾರದು. ಅಲ್ಪಾವಧಿಯಲ್ಲಿ ಹೆಚ್ಚಿನ ಗಳಿಕೆ ಬಗ್ಗೆ ಯೋಚಿಸದೆ ರೋಗಿಗಳೊಂದಿಗೆ ಪ್ರಾಮಾಣಿಕತೆ, ಶ್ರದ್ಧೆ, ವಿಶ್ವಾಸ ಬೆಳೆಸಿಕೊಂಡರೆ ಅದು ದೀರ್ಘಾವಧಿಯಲ್ಲಿ ತುಂಬಾ ಅನುಕೂಲವಾಗಲಿದೆ. ಪ್ರಗತಿ ಕಾಣಲಿದೆ. ವೈದ್ಯಕೀಯ ವೃತ್ತಿಯಲ್ಲಿ ಮೌಲ್ಯ ಮುಖ್ಯ. ಅದನ್ನು ಅಳವಡಿಸಿಕೊಳ್ಳುವ ಮೂಲಕ ಗತಕಾಲದ ವೈಭವ ಮರುಕಳಿಸಬೇಕು ಎಂದರು. ಒತ್ತಡ ರಹಿತ ಜೀವನ ಸಾಗಿಸಲು ಯೋಗ, ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಸಂಗೀತ ಆಲಿಸಬೇಕು, ಚಲನಚಿತ್ರ ನೋಡಬೇಕು, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದ ಅವರು, ಸಮಾಜದಲ್ಲಿ ಸಾಕಷ್ಟು ಅವಕಾಶಗಳಿದ್ದು, ಯಾವುದೇ ರಂಗದಲ್ಲಿದ್ದರೂ ಸಮಾಜಕ್ಕೆ ಒಳ್ಳೆಯ ಸೇವೆ ಮಾಡಿ, ಕೊಡುಗೆ ನೀಡಿ ಎಂದರು.

ಜೈಪುರದ ರಾಜಸ್ತಾನ ಹೌಸಿಂಗ್‌ ಬೋರ್ಡ್‌ ನ ಆಯುಕ್ತ, ಕಿಮ್ಸ್‌ ಹಳೆಯ ವಿದ್ಯಾರ್ಥಿ ಡಾ| ರವಿಕುಮಾರ ಸುರಪುರ ಮಾತನಾಡಿ, ಇನ್ನೊಬ್ಬರ ಯಶಸ್ಸು ಬಗ್ಗೆ ಗಮನ ಹರಿಸದೆ ನಾನು ಏನಾಗಬೇಕೆಂದು ನೀವೇ ನಿರ್ಧರಿಸಬೇಕು, ನಿಯಂತ್ರಣ ಹೊಂದಬೇಕು, ನೀವು ತಲುಪಬೇಕಾದ ಮೈಲುಗಲ್ಲು ಕುರಿತು ಚಿಂತಿಸಬೇಕು, ಸಾಮಾಜಿಕ ಪ್ರತಿಷ್ಠೆಗಾಗಿ ಕೆಲಸ ಮಾಡಬೇಕು. ಓದುವ ಜೊತೆ ಜನರು, ಸ್ನೇಹಿತರು, ನೆರೆ-ಹೊರೆಯವರೊಂದಿಗೆ ಸಂಪರ್ಕ ಹೊಂದಬೇಕು. ಇದಕ್ಕೆ ಭಾಷೆಗಿಂತ ಭಾವನೆ ಮುಖ್ಯ. ಅಂದಾಗ ಪ್ರಾಮಾಣಿಕತೆ ತನ್ನಿಂದ ತಾನೇ ಬರುತ್ತದೆ ಎಂದರು.

ಕಿಮ್ಸ್‌ ಪ್ರಭಾರಿ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯರಲ್ಲಿ ಮೌನವೀಯ ಗುಣ, ಪ್ರಾಮಾಣಿಕತೆ, ಶ್ರದ್ಧೆ ಇದ್ದರೆ ಯಶಸ್ಸು ತನ್ನಿಂದತಾನೇ ದೊರೆಯುತ್ತದೆ ಎಂದರು. ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ| ಅರುಣಕುಮಾರ ಸಿ., ಪ್ರಭಾರಿ ಪ್ರಾಚಾರ್ಯ ಡಾ| ಎಂ.ಸಿ. ಚಂದ್ರು, ಕಾರ್ಯಕ್ರಮ ಅಧ್ಯಕ್ಷ ಡಾ| ಕೆ.ಎಫ್.ಕಮ್ಮಾರ, ಉಪಾಧ್ಯಕ್ಷ ಡಾ| ಈಶ್ವರ ಹೊಸಮನಿ, ಡಾ| ಶಿಲ್ಪಾ ಎಸ್‌.ಎಚ್‌., ಆಡಳಿತಾಧಿಕಾರಿ ಬಸವರಾಜ ಸೋಮಣ್ಣವರ, ಡಾ| ಪ್ರಕಾಶ ವಾರಿ, ಡಾ| ರಾಜೇಶ್ವರಿ ಎಲಿಗಾರ, ಡಾ| ಗಜಾನನ ನಾಯಕ, ಡಾ| ಸೂರ್ಯಕಾಂತ ಕಲ್ಲೂರಯ್ಯ ಮೊದಲಾದವರಿದ್ದರು.

ಡಾ| ವಿನಯ ಕೌಲಗಿಗೆ 5 ಚಿನ್ನದ ಪದಕ
ಒಟ್ಟು 143 ವಿದ್ಯಾರ್ಥಿಗಳಿಗೆ ಗಣ್ಯರು ಪದವಿ ಪ್ರದಾನ ಮಾಡಿದರು. ಇವರಲ್ಲಿ ಡಾ| ವಿನಯ ಕೌಲಗಿ ಐದು ಚಿನ್ನದ ಪದಕ, ಡಾ| ನಿಷ್ಕಲಾ ರಾವ್‌ ನಾಲ್ಕು, ಡಾ| ಅಂಕಿತಾ ತ್ಯಾಗಿ ಮೂರು ಚಿನ್ನದ ಪದಕ ಮುಡಿಗೇರಿಸಿಕೊಂಡರು. ಕೆಲವರು ವಿವಿಧ ವಿಭಾಗದಲ್ಲಿ ಚಿನ್ನದ ಪದಕ ಪಡೆದರು. ಇದೇ ಸಂದರ್ಭದಲ್ಲಿ ಕಿಮ್ಸ್‌ನ 1984ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಕೊಡಮಾಡುವ ಔಟ್‌ ಗೋಯಿಂಗ್‌ ಹಸ್‌ ಸರ್ಜನ್‌ ಅಭಿನಂದನಾ ಪ್ರಶಸ್ತಿ, ನಗದು ಬಹುಮಾನವನ್ನು ಡಾ| ರಾಜೇಂದ್ರ ಹಬೀಬ, ಡಾ| ನಿಷ್ಕಲಾ ರಾವ್‌, ಡಾ| ಶ್ರೀನಿಧಿ ಪ್ರತಿನಿಧಿ, ಡಾ| ವಿದ್ಯಾಶ್ರೀ ಅವರಿಗೆ ಕೊಡಮಾಡಲಾಯಿತು. ಡಾ|ಅಭಿನ್‌, ಡಾ|ದೇಶಪಾಂಡೆ, ಡಾ| ಸೌರಭ ಜೋಶಿ, ಡಾ| ಅಖೀಲಾ, ಡಾ| ನಿಷ್ಕಲಾ ರಾವ್‌, ಡಾ| ಶ್ರೀನಿಧಿ ಪ್ರತಿನಿಧಿ, ಡಾ| ರಾಜೇಂದ್ರ ಹಬೀಬ ಇನ್ನಿತರೆ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು.

Advertisement

ಚಿನ್ನದ ಪದಕ ಪಡೆದಿರುವುದು ತುಂಬಾ ಖುಷಿ ತಂದಿದೆ. ನಮ್ಮ ಸೋದರ ಮಾವ ವೈದ್ಯರಿದ್ದರು. ಅವರೇ ನನಗೆ ಸ್ಫೂರ್ತಿ. ನಾನು ಮತ್ತು ನನ್ನ ಸಹೋದರ ಅವಳಿ-ಜವಳಿ ಆಗಿದ್ದು, ಇಬ್ಬರೂ ಕಿಮ್ಸ್‌ನಲ್ಲಿ ಎಂಬಿಬಿಎಸ್‌ ಮಾಡಿದ್ದೆವು. ಮುಂದೆ ಮಕ್ಕಳ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಆಸೆ ಇದೆ. 
ಡಾ| ವಿನಯ ಕೌಲಗಿ,
ಚಿನ್ನದ ಪದಕ ಪಡೆದ ವಿದ್ಯಾರ್ಥಿ

ನಮ್ಮ ಕುಟುಂಬದಲ್ಲಿಯೇ ಯಾರೂ ವೈದ್ಯರಿಲ್ಲ. ನಾನೇ ಮೊದಲಿಗಳು. ನನ್ನ ಸಹೋದರರಿಬ್ಬರು ಆಟೋಮೊಬೈಲ್‌ ಎಂಜಿನಿಯರ್‌ ಆಗಿದ್ದಾರೆ. ತಂದೆ ಹೋಟೆಲ್‌ ಬಿಸಿನೆಸ್‌ ಮಾಡುತ್ತಿದ್ದಾರೆ. ಸಮಾಜ ಸೇವೆ ಮಾಡಬೇಕೆಂಬ ಇಚ್ಛೆ ಮೊದಲಿನಿಂದಲೂ ಇತ್ತು. ಹೀಗಾಗಿ ವೈದ್ಯೆ ಆಗಿದ್ದೇನೆ. ಜನರಲ್‌ ಮೆಡಿಸನ್‌ ದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುವ ಆಸೆ ಇದೆ. ಅದಕ್ಕೆ ತಂದೆ-ತಾಯಿ ಪ್ರೋತ್ಸಾಹ ಕೊಡುತ್ತಿದ್ದಾರೆ.
ಡಾ| ನಿಷ್ಕಲಾ ರಾವ್‌,
ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ

Advertisement

Udayavani is now on Telegram. Click here to join our channel and stay updated with the latest news.

Next