Advertisement

ಏಪ್ರಿಲ್‌ಗೆ ಹುಬ್ಬಳ್ಳಿ ಇನ್ನಷ್ಟು ಸ್ಮಾರ್ಟ್‌

11:12 AM Jan 31, 2020 | Team Udayavani |

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಹುಬ್ಬಳ್ಳಿಯಲ್ಲಿ ಇಂಟಿಗ್ರೇಟೆಡ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ರೂಂ ಈಗಾಗಲೇ ಘನತ್ಯಾಜ್ಯ ವಿಲೇವಾರಿ ನಿಟ್ಟಿನಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದ್ದು, ಏಪ್ರಿಲ್‌ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡು ಸೇವೆಗೆ ಸಮರ್ಪಣೆಗೊಳ್ಳಲಿದೆ.

Advertisement

ನಾಗರಿಕರಿಗೆ ನೀಡುವ ವಿವಿಧ ಮೂಲಭೂತ ಸೌಕರ್ಯಗಳಿಗೆ ಸ್ಮಾರ್ಟ್‌ ಸ್ಪರ್ಶ ನೀಡಿಕೆಗೆ ಪೂರಕವಾಗುವ ನಿಟ್ಟಿನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಒಂದೇ ಸೂರಿನಡಿ ವಿವಿಧ ಸೌಲಭ್ಯಗಳ ಮಾಹಿತಿ, ಪರಿಹಾರ ಕಾರ್ಯಗಳಿಗೆ ಸುಲಭವಾಗುವ ನಿಟ್ಟಿನಲ್ಲಿ ಇಂಟಿಗ್ರೇಟೆಡ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ರೂಂನ್ನು ಇಲ್ಲಿನ ನ್ಯೂ ಕಾಟನ್‌ ಮಾರ್ಕೆಟ್‌ನಲ್ಲಿರುವ ಸಾಂಸ್ಕೃತಿಕ ಭವನದಲ್ಲಿ ರೂಪಿಸಲಾಗುತ್ತಿದೆ.

ಕಳೆದ ಮೂರು ತಿಂಗಳಿಂದಲೇ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ರೂಂ ಘನತ್ಯಾಜ್ಯ ವಿಲೇವಾರಿಯನ್ನು ಸ್ಮಾರ್ಟ್‌ ಆಗಿಸುವ ಕಾರ್ಯವನ್ನು ಆರಂಭಿಸಿದೆ. ಕಂಟ್ರೋಲ್‌ ರೂಂಗೆ ಈಗಾಗಲೇ ಸರ್ವರ್‌, ಆಡಿಯೋ ವಾಲ್‌ ಸೇರಿದಂತೆ ವಿವಿಧ ಸಾಮಗ್ರಿಗಳು ಬಂದಿವೆ. ಅಗತ್ಯವಿರುವ ಕಟ್ಟಡ ಕಾಮಗಾರಿ ಬಾಕಿ ಇದ್ದು, ಏಪ್ರಿಲ್‌ ವೇಳೆಗೆ ಇದು ಸಹ ಪೂರ್ಣಗೊಂಡು, ಲೋಕಾರ್ಪಣೆಗೆ ಸಜ್ಜುಗೊಳ್ಳಲಿದೆ ಎಂಬುದು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ ಸಿಟಿ ಯೋಜನೆ ಅಧಿಕಾರಿಗಳ ಅನಿಸಿಕೆ. ಇಂಟಿಗ್ರೇಟೆಡ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ರೂಂ ಅಡಿಯಲ್ಲಿ ಜಲಮಂಡಳಿ, ಘನತ್ಯಾಜ್ಯ,ಬಿಆರ್‌ಟಿಎಸ್‌, ಜಿಲ್ಲಾ ಪರಿಸರ ದತ್ತಾಂಶ ಸಂಗ್ರಹ, ಆಂಬ್ಯುಲೆನ್ಸ್‌ ಸೇವೆ, ಅಗ್ನಿ ಶಾಮಕದಳ ಸೇರಿದಂತೆ ಒಟ್ಟು ಆರು ಸೇವಾ ವಿಭಾಗಗಳನ್ನು ರೂಪಿಸಲಾಗುತ್ತಿದೆ.

ಘನತ್ಯಾಜ್ಯ ವಿಲೇವಾರಿಗೆ ಸ್ಮಾರ್ಟ್‌ ಸ್ಪರ್ಶ: ಅವಳಿ ನಗರದಲ್ಲಿನ ಘನತ್ಯಾಜ್ಯ ಸಂಗ್ರಹ ಹಾಗೂ ಸಾಗಣೆ ನಿಟ್ಟಿನಲ್ಲಿ ಸ್ಮಾರ್ಟ್‌ ಸ್ಪರ್ಶ ನೀಡಲಾಗಿದೆ. ತ್ಯಾಜ್ಯವನ್ನು ಕಡ್ಡಾಯವಾಗಿ ಮನೆ, ಮನೆಗಳಿಂದ ಸಂಗ್ರಹಿಸುವ, ಸಮರ್ಪಕ ರೀತಿಯಲ್ಲಿ ಸಾಗಣೆ ಮಾಡುವ ನಿಟ್ಟಿನಲ್ಲಿ ನಿಗಾ ವಹಿಸಲಾಗುತ್ತಿದೆ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಚೆಲ್ಲುವುದಕ್ಕೂ ಕಡಿವಾಣ ಹಾಕಲು ಸ್ಮಾರ್ಟ್‌ ಸಿಟಿ ಯೋಜನೆ ಮುಂದಾಗಿದೆ. ಇದಕ್ಕಾಗಿ ಅವಳಿನಗರದಲ್ಲಿ ಎಲ್ಲಿ ತ್ಯಾಜ್ಯ ಚೆಲ್ಲಲಾಗುತ್ತದೆ ಎಂಬುದರ ಕುರಿತಾಗಿ ಸುಮಾರು 174 ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ ಅತ್ಯಾಧುನಿಕ ಸೌಲಭ್ಯದಕ್ಯಾಮೆರಾಗಳನ್ನು ಅವಳವಡಿಸಲು ಯೋಜಿಸಲಾಗಿದೆ. ಇದರಿಂದ ತ್ಯಾಜ್ಯ ಚೆಲ್ಲುವವರ ಮಾಹಿತಿ ಸೆರೆಯಾಗಿ ತಕ್ಷಣಕ್ಕೆ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ರೂಂಗೆ ಚಿತ್ರಣ ರವಾನೆಯಾಗಲಿದೆ. ಅಂತಹ ನಾಗರಿಕರಿಗೆ ದಂಡ ವಿಧಿಸುವ ಕ್ರಮಗಳನ್ನು ಪಾಲಿಕೆ ಕೈಗೊಳ್ಳಲಿದೆ.

ಈಗಾಗಲೇ ಕ್ಯಾಮೆರಾಗಳು ಬಂದಿವೆಯಾದರೂ, ಇದಕ್ಕೆ ಬೇಕಾದ ಕಂಬಗಳು ಬರಬೇಕಾಗಿದೆ. ಈ ಹಿಂದೆ ಗುರುತಿಸಿದ ಸುಮಾರು 174 ಸ್ಥಳಗಳಲ್ಲಿ ಇರುವ ಹೆಸ್ಕಾಂ ವಿದ್ಯುತ್‌ ಕಂಬಗಳಿಗೆ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿತ್ತು. ಆದರೆ, ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಇನ್ನಿತರ ಸಮಸ್ಯೆಯಾದರೆ, ದುಬಾರಿಕ್ಯಾಮೆರಾಗಳಿಗೆ ಧಕ್ಕೆಯಾಗಲಿದೆ ಎಂಬ ಹೆಸ್ಕಾಂ ಅಧಿಕಾರಿಗಳ ಅನಿಸಿಕೆ ಮೇರೆಗೆ ಇದೀಗ ಪ್ರತ್ಯೇಕ ಕಂಬ ಹಾಕಲು ನಿರ್ಧರಿಸಲಾಗಿದ್ದು, ಅಂದಾಜು 10-12 ಲಕ್ಷ ರೂ. ವೆಚ್ಚದಲ್ಲಿ 174 ಕಂಬಗಳಿಗೆ ಟೆಂಡರ್‌ ಕರೆಯಲಾಗಿದ್ದು, ಕೆಲಸದ ಕಾರ್ಯಾದೇಶ ನೀಡಿದ ಒಂದು ತಿಂಗಳಲ್ಲಿ ಕಂಬಗಳು ಬರಲಿವೆಯಂತೆ.

Advertisement

10 ಸಾವಿರ ಆಸ್ತಿಗಳಿಗೆ ಆರ್‌ಎಫ್ಐಡಿ: ಘನತ್ಯಾಜ್ಯ ಮನೆ, ಮನೆ ಸಂಗ್ರಹ ಹಾಗೂ ಸಾಗಣೆ ನಿಟ್ಟಿನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ಹಲವು ಸ್ಮಾರ್ಟ್‌ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಮನೆಯ ತ್ಯಾಜ್ಯ ಸಂಗ್ರಹ ಮಾಹಿತಿ ಕ್ಷಣ ಕ್ಷಣಕ್ಕೂ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ರೂಂಗೆ ಬರುತ್ತಿದೆ. ಪ್ರಸ್ತುತ ಅವಳಿ ನಗರದ ಕೆಲವೊಂದು ವಾರ್ಡ್‌ಗಳಲ್ಲಿ ಈ ಪ್ರಯೋಗ ಕೈಗೊಳ್ಳಲಾಗಿದೆ. ಧಾರವಾಡದ ವಾರ್ಡ್‌ ಸಂಖ್ಯೆ 14, 15, ಹಾಗೂ 16ರಲ್ಲಿ, ಹುಬ್ಬಳ್ಳಿಯ ವಾರ್ಡ್‌ ಸಂಖ್ಯೆ 23, 24, 25, 29 ಹಾಗೂ 30ರಲ್ಲಿ ಕೈಗೊಳ್ಳಲಾಗಿದೆ. ಈ ವಾರ್ಡ್‌ಗಳ ವ್ಯಾಪ್ತಿಯ ಸುಮಾರು 10 ಸಾವಿರ ಆಸ್ತಿಗಳಿಗೆ ಆರ್‌ ಎಫ್ಐಡಿ ಅಳವಡಿಕೆ ಮಾಡಲಾಗಿದ್ದು, ಇದು ತ್ಯಾಜ್ಯ ಸಂಗ್ರಹ ಮಾಹಿತಿ ಜತೆಗೆ ಸುತ್ತಮುತ್ತ ಜಾಗದಲ್ಲಿ ಯಾರಾದರೂ ತ್ಯಾಜ್ಯ ಬಿಸಾಡಿದರೂ ಮಾಹಿತಿ ನೀಡುತ್ತದೆ.

ತ್ಯಾಜ್ಯ ಸಂಗ್ರಹಕ್ಕಾಗಿ ಆಟೋ ಟಿಪ್ಪರ್‌ಗಳನ್ನು ಬಳಸಲಾಗುತ್ತಿದೆ. ಈ ವಾಹನಗಳಿಗೆ ಜಿಪಿಎಸ್‌ ಅಳವಡಿಕೆ ಮಾಡಲಾಗಿದ್ದು, ವಾಹನ ಯಾವ ಸಮಯಕ್ಕೆ ಎಲ್ಲಿ ತ್ಯಾಜ್ಯ ಸಂಗ್ರಹ ಮಾಡಿದೆ, ಎಷ್ಟು ಹೊತ್ತಿಗೆ ವಿಲೇವಾರಿ ಘಟಕಕ್ಕೆ ಹೋಗಿದೆ. ಒಂದು ದಿನದಲ್ಲಿ ಎಷ್ಟು ಟ್ರಿಪ್‌ ತ್ಯಾಜ್ಯ ಸಾಗಣೆ ಮಾಡಿದೆ ಎಂಬುದರ ಮಾಹಿತಿ ಕಂಟ್ರೋಲ್‌ ರೂಂಗೆ ದೊರೆಯುತ್ತಿದೆ.

ಘನತ್ಯಾಜ್ಯ ಸಂಗ್ರಹ ಹಾಗೂ ಸಾಗಣೆ ವಿಚಾರದಲ್ಲಿ ಸ್ಮಾರ್ಟ್‌ ಸ್ಪರ್ಶದಿಂದಾಗಿ ಈ ಹಿಂದೆ ಶೇ.67-70ರಷ್ಟು ಇದ್ದ ತ್ಯಾಜ್ಯ ಸಂಗ್ರಹ-ಸಾಗಣೆ ಪ್ರಮಾಣ ಇದೀಗ ಶೇ.92-93ಕ್ಕೆ ಬಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ಇನ್ನು 25-30 ಆಟೋ ಟಿಪ್ಪರ್‌ಗಳನ್ನು ಖರೀದಿಸಿ ಪಾಲಿಕೆಗೆ ನೀಡಲಾಗುತ್ತದೆ. ಇದರಿಂದ ಘನತ್ಯಾಜ್ಯಸಂಗ್ರಹ ಹಾಗೂ ಸಾಗಣೆ ಇನ್ನಷ್ಟು ಸುಲಭವಾಗಲಿದೆ. ಅವಳಿನಗರದಲ್ಲಿ ಪ್ರಾಯೋಗಿಕವಾಗಿ ಕೈಗೊಂಡಿರುವ ಘನತ್ಯಾಜ್ಯ ಸಂಗ್ರಹ, ಸಾಗಣೆ ಸ್ಮಾರ್ಟ್‌ ಯೋಜನೆಗೆ ರಾಜ್ಯದ ವಿವಿಧ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು,ಮುಂದಿನ ದಿನಗಳಲ್ಲಿ ಯೋಜನೆ ಅವಳಿನಗರದ ಎಲ್ಲ ಕಡೆಗೂ ವಿಸ್ತರಿಸಲು ಯೋಜಿಸಲಾಗಿದೆ.

ಅವಳಿ ನಗರದಲ್ಲಿ ಪ್ರಸ್ತುತ ಒಟ್ಟು 2.33 ಆಸ್ತಿಗಳಿದ್ದು, ಎಲ್ಲ ಆಸ್ತಿಗಳಿಗೂ ಆರ್‌ಎಫ್ ಐಡಿ ಆಳವಡಿಕೆಗೆ ಪಾಲಿಕೆ ತಿಳಿಸಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಸುಮಾರು 2.63 ಲಕ್ಷದಿಂದ 3 ಲಕ್ಷ ಆಸ್ತಿಗಳವರೆಗೂ ಆರ್‌ಎಫ್ಐಡಿ ಅಳವಡಿಕೆಗೆ ಬೇಕಾಗುವ ತಯಾರಿ ಕೈಗೊಂಡಿದೆ. ನಿತ್ಯ ತ್ಯಾಜ್ಯ ಸಂಗ್ರಹದ ಮಾಹಿತಿ ಪೂರ್ಣ ಮಾಹಿತಿ ಸೌಲಭ್ಯವಾಗುತ್ತಿದ್ದು, ಆ ಮಾಹಿತಿ ಪಾಲಿಕೆ ಆಯುಕ್ತರಿಗೂ ರವಾನೆಯಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ಪ್ರಯೋಗಿಕವಾಗಿ ಕೈಗೊಂಡ ಯೋಜನೆ ಉತ್ತಮ ಫ‌ಲಿತಾಂಶ ನೀಡಿದೆ. ಅಷ್ಟೇ ಅಲ್ಲ ಘನತ್ಯಾಜ್ಯ ಸಂಗ್ರಹ ಹಾಗೂ ಸಾಗಣೆಗೆ ಕೈಗೊಂಡ ಸ್ಮಾರ್ಟ್‌ ಯೋಜನೆಗೆ ರಾಜ್ಯದ ವಿವಿಧ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಎಸ್‌.ಎಚ್‌. ನರೇಗಲ್‌, ವಿಶೇಷಾಧಿಕಾರಿ, ಹು.ಧಾ.ಸ್ಮಾರ್ಟ್‌ಸಿಟಿ ಯೋಜನೆ

 

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next