Advertisement

ಕೊನೆಗೂ ಬಂತು ಬಸ್‌ಗಳ ಸ್ಥಳಾಂತರ ಭಾಗ್ಯ

03:11 PM Jan 30, 2020 | Naveen |

ಹುಬ್ಬಳ್ಳಿ: ಮೂಲ ಸೌಲಭ್ಯ, ಸಂಚಾರಕ್ಕೆ ಸಮರ್ಪಕ ರಸ್ತೆ ಕೊರತೆಯಿಂದ ಕಳೆದ ಒಂದೂವರೆ ವರ್ಷದಿಂದ ನನೆಗುದಿಗೆ ಬಿದ್ದಿದ್ದ ಹಳೇ ಬಸ್‌ ನಿಲ್ದಾಣದಿಂದ ಹೊಸೂರು ಪ್ರಾದೇಶಿಕ ಟರ್ಮಿನಲ್‌ ಗೆ ಅನುಸೂಚಿಗಳ ಸ್ಥಳಾಂತರಕ್ಕೆ ಸಮಯ ಕೂಡಿ ಬಂದಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಹಂತ-ಹಂತವಾಗಿ ಬಸ್‌ ಸ್ಥಳಾಂತರಕ್ಕೆ ನಿರ್ಧರಿಸಲಾಗಿದೆ.

Advertisement

ಹೊಸೂರು ಪ್ರಾದೇಶಿಕ ಟರ್ಮಿನಲ್‌ ಸಿದ್ಧವಾಗಿ ಒಂದೂವರೆ ವರ್ಷ ಕಳೆದರೂ ಮೂಲ ಸೌಲಭ್ಯದ ಕೊರತೆಯಿಂದ ಹಳೇ ಬಸ್‌ ನಿಲ್ದಾಣದಿಂದ ಅನುಸೂಚಿಗಳ ಸ್ಥಳಾಂತರ ಕೈಗೂಡಿರಲಿಲ್ಲ. ಹೊಸೂರು ಬಸ್‌ ನಿಲ್ದಾಣದಿಂದ ಸಂಚರಿಸುವ ಬಸ್‌ಗಳಿಗೆ ಪೂರಕವಾದ ರಸ್ತೆಯಿಲ್ಲದ ಪರಿಣಾಮ ಸ್ಥಳಾಂತರ ಎನ್ನುವುದು ಗೊಂದಲದ ಗೂಡಾಗಿ ಪರಿಣಿಮಿಸಿತ್ತು.

ಇದೀಗ ಟರ್ಮಿನಲ್‌ಗೆ (ಫೆ.2ರಂದು) ಉದ್ಘಾಟನೆ ಭಾಗ್ಯ ಕೂಡಿ ಬಂದಿರುವ ಹಿನ್ನೆಲೆಯಲ್ಲಿ ಅನುಸೂಚಿಗಳ ಸ್ಥಳಾಂತರಕ್ಕೆ ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಮುಂದಾಗಿದ್ದಾರೆ. ಎಲ್ಲಾ ಬಸ್‌ಗಳನ್ನು ಏಕಕಾಲಕ್ಕೆ ಸ್ಥಳಾಂತರ ಮಾಡುವುದರಿಂದ ಪ್ರಯಾಣಿಕರಲ್ಲಿ ಗೊಂದಲ ಹಾಗೂ ಪೂರ್ಣ ಪ್ರಮಾಣದಲ್ಲಿ ಸೌಲಭ್ಯ ಒದಗಿಸುವುದು ಕಷ್ಟ ಎನ್ನುವ ಕಾರಣಕ್ಕೆ ಹಂತ-ಹಂತವಾಗಿ ಸ್ಥಳಾಂತರಿಸಲು ನಿರ್ಧರಿಸಿದ್ದು, ಪ್ರಾಯೋಗಿಕವಾಗಿ ಒಂದಿಷ್ಟು ಮಾರ್ಗದ ಬಸ್‌ಗಳು ಮಾತ್ರ ಟರ್ಮಿನಲ್‌ಗೆ ಸ್ಥಳಾಂತರಗೊಳ್ಳಲಿವೆ.

ಸ್ಥಳಾಂತರ ಮಾರ್ಗಗಳು: ಹೊಸೂರು ಟರ್ಮಿನಲ್‌ಲ್ಲಿ ಸದ್ಯ 23 ಪ್ಲಾಟ್‌ಫಾರ್ಮ್ ಹಾಗೂ ಪ್ರಯಾಣಿಕರಿಗೆ ಮೂಲ ಸೌಲಭ್ಯದ ದೃಷ್ಟಿಯಿಂದ ಮೊದಲ ಹಂತದಲ್ಲಿ 300 ರಿಂದ 320 ಅನುಸೂಚಿಗಳು ಸ್ಥಳಾಂತರಗೊಳ್ಳಲಿವೆ. ಗದಗ ಮಾರ್ಗವಾಗಿ ಸಂಚರಿಸುವ ಕೊಪ್ಪಳ, ಕಲಬುರಗಿ, ಹೈದ್ರಾಬಾದ್‌. ವಿಜಯಪುರ ಮಾರ್ಗದ ಬಾಗಲಕೋಟೆ, ಜಮಖಂಡಿ ಮಾರ್ಗದ ಅಥಣಿ, ತೇರದಾಳ, ಮುಧೋಳ ಮಾರ್ಗದ ಬಸ್‌ಗಳು ಟರ್ಮಿನಲ್‌ನಿಂದ ಸಂಚರಿಸಲಿವೆ.

ಇನ್ನೂ ಶಿರಸಿ ಹಾಗೂ ಯಲ್ಲಾಪೂರ ಬಸ್‌ಗಳು ಕೂಡ ಮೊದಲಿನಂತೆ ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದಿಂದ ಸಂಚರಿಸಲಿವೆ. ಇಲ್ಲೇ ಉಳಿಯಲಿವೆ: ಎರಡನೇ ಹಂತದಲ್ಲಿ
ಒಂದಿಷ್ಟು ಮಾರ್ಗದ ಬಸ್‌ಗಳನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಹಾನಗಲ್ಲ ಮಾರ್ಗವಾಗಿ ಸಂಚರಿಸುವ ಶಿಕಾರಿಪುರ, ಶಿವಮೊಗ್ಗ, ಆನವಟ್ಟಿ. ಶಿವಮೊಗ್ಗ ಮಾರ್ಗವಾಗಿ ಮೈಸೂರು ಹಾಗೂ ಇತರೆ. ಪ್ರಮುಖವಾಗಿ ಬೆಂಗಳೂರು ಹಾಗೂ ಸವಣೂರು, ಹಾವೇರಿ, ಹರಿಹರ, ಚಿತ್ರದುರ್ಗ ಹಾಗೂ ತುಮಕೂರು ಬಸ್‌ಗಳು ಸದ್ಯಕ್ಕೆ ಹಳೇ ಬಸ್‌ ನಿಲ್ದಾಣದಲ್ಲೇ ಉಳಿಯಲಿವೆ. ಬೆಂಗಳೂರು ಮಾರ್ಗದ ಬಸ್‌ಗಳು ಇಲ್ಲಿನ ಹಾಗೂ ಹೊಸ ಬಸ್‌ ನಿಲ್ದಾಣದಿಂದ ಸಂಚರಿಸಲಿವೆ.

Advertisement

ಗದಗ ನಾನ್‌ಸ್ಟಾಪ್‌ ಹಾಗೂ ನವಲಗುಂದ ಸಾಮಾನ್ಯ ಬಸ್‌ಗಳು, ಕುಂದಗೋಳ, ಲಕೇÒ$¾ಶ್ವರ ಮಾರ್ಗ ಸೇರಿದಂತೆ ಗ್ರಾಮೀಣ, ಉಪನಗರ ಹಾಗೂ ನಗರ ಸಾರಿಗೆ ಬಸ್‌ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 1300 ಅನುಸೂಚಿಗಳ ಪೈಕಿ 320 ಹೊಸೂರು ಟರ್ಮಿನಲ್‌, 380 ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣದಿಂದ ಸಂಚರಿಸಲಿವೆ.

ಸ್ಥಳಾಂತರ ಅನಿವಾರ್ಯ: ಸ್ಮಾರ್ಟ್‌ಸಿಟಿ ಯೋಜನೆಯಡಿ ಹಳೇ ಬಸ್‌ ನಿಲ್ದಾಣದಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಾಣ ಕಾರ್ಯ ನಡೆಯುವುದರಿಂದ ಸ್ಥಳಾಂತರ ಅನಿವಾರ್ಯವಾಗಿದೆ. ಹೊಸೂರಿನ ಹಳೇ ಡಿಪೋ ಹಿಂಭಾಗದಲ್ಲಿ ನಿರ್ಮಿಸಿರುವ ರಸ್ತೆ ಹಾಗೂ ಶಕಂತುಲಾ ಆಸ್ಪತ್ರೆ ಮುಂಭಾಗದ ರಸ್ತೆಗಳನ್ನು ಏಕಮುಖ ರಸ್ತೆಯನ್ನಾಗಿಸಿ ಬಸ್‌ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ. ಆದರೆ ತಿಮ್ಮಸಾಗರ ರಸ್ತೆ ನೂತನ ಕೋರ್ಟ್‌ ಸೇರಿದಂತೆ ವಿವಿಧ ಆಸ್ಪತ್ರೆಗಳು ಇರುವುದರಿಂದ ಏಕಮುಖ ರಸ್ತೆ ಕಷ್ಟಸಾಧ್ಯವಾಗಿದೆ.

ಮೂಲ ಸೌಲಭ್ಯ ಕೊರತೆ
ಇದೀಗ ಸುಮಾರು 320 ವೇಗದೂತ ಬಸ್‌ ಗಳನ್ನು ಸ್ಥಳಾಂತರಿಸಲು ಹಿರಿಯ ಅಧಿಕಾರಿಗಳ ಸಮಿತಿ ನಿರ್ಧಾರವಾಗಿದೆ. ಇಷ್ಟೊಂದು ಪ್ರಯಾಣಿಕರಿಗೆ ಅಗತ್ಯವಾದ ಮೂಲ ಸೌಲಭ್ಯ ನೀಡುವುದು ಕಷ್ಟ ಸಾಧ್ಯವಾಗಿದೆ. ಸದ್ಯದ ಮಟ್ಟಿಗೆ ಕುಡಿಯುವ ನೀರು, ಶೌಚಾಲಯ
ಸಮಸ್ಯೆಯಿಲ್ಲ. ಆದರೆ ಇದನ್ನು ಹೊರತುಪಡಿಸಿ ಪ್ರಮುಖವಾಗಿ ಹೊಟೇಲ್‌ಗ‌ಳ ಅಗತ್ಯವಿದೆ. ಎಲ್ಲಾ ಸೌಲಭ್ಯ ಒದಗಿಸಿ ಮೇಲೆಯೇ ಸ್ಥಳಾಂತರ ಉತ್ತಮ ಎನ್ನುವ ಅಭಿಪ್ರಾಯವಿದೆ.

ಮುಂದಾಲೋಚನೆ ಕೊರತೆ
ಹೊಸೂರು ಟರ್ಮಿನಲ್‌ ಉದ್ಘಾಟನೆಯಾಗುತ್ತಿದ್ದು, ಈ ಸಂದರ್ಭದಲ್ಲಿ ನಿಲ್ದಾಣ ಬಳಕೆಯಾಗದಿದ್ದರೆ ಜನರು ವಿರೋಧ ಎದುರಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಹಿರಿಯ ಅಧಿಕಾರಿಗಳ ಸಮಿತಿ ರಚಿಸಿ ಒಂದಿಷ್ಟು ಬಸ್‌ಗಳನ್ನಾದರೂ ಸ್ಥಳಾಂತರಿಸುವ ಅನಿವಾರ್ಯತೆ ಎದುರಾಗಿದೆ.ಕಾಮಗಾರಿ ಪೂರ್ಣಗೊಂಡ ನಂತರ ಬಿಆರ್‌ ಟಿಎಸ್‌ ಸಂಸ್ಥೆ ಕಟ್ಟಡಗಳನ್ನು ವಾಯವ್ಯ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸದಿರುವುದು ಈ ಗೊಂದಲಕ್ಕೆ ಕಾರಣವಾಗಿದೆ. ಸಕಾಲದಲ್ಲಿ ವರ್ಗಾವಣೆ ಮಾಡಿದ್ದರೆ ಹೊಟೇಲ್‌, ಸ್ವತ್ಛತೆ, ವಾಹನ ಪಾರ್ಕಿಂಗ್‌ ಟೆಂಡರ್‌ ಪ್ರಕ್ರಿಯೆ ಮುಗಿಸಿ ಉದ್ಘಾಟನೆ ವೇಳೆಗೆ ಸಜ್ಜುಗೊಳ್ಳುತ್ತಿತ್ತು. ಮುಂದಾಲೋಚನೆ ಕೊರತೆ ಸಮಸ್ಯೆಯಾಗಿ ಪರಿಣಿಮಿಸಿದೆ.

ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಹಾಗೂ ಗೊಂದಲ ಆಗದಂತೆ ಹಂತ ಹಂತವಾಗಿ ಸ್ಥಳಾಂತರಿಸಲಾಗುತ್ತಿದೆ. ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಒಂದಿಷ್ಟು ಬಸ್‌ಗಳನ್ನು ವರ್ಗಾಯಿಸಿ ಅಗತ್ಯತೆ ನೋಡಿಕೊಂಡು ಮುಂದಿನ ನಿರ್ಧಾರ ಮಾಡಲಾಗುವುದು. ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು.
ಸಂತೋಷಕುಮಾರ,
ಮುಖ್ಯ ಸಾರಿಗೆ ವ್ಯವಸ್ಥಾಪಕ.

„ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next