ಹುಬ್ಬಳ್ಳಿ: ವರುಣನ ಕಣ್ಣಾಮುಚ್ಚಾಲೆ ನಡುವೆಯೇ ಏಳನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಸೆಣೆಸಾಟಕ್ಕೆ ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನ ಸಜ್ಜುಗೊಂಡಿದೆ. ಕೆಪಿಎಲ್‌ನ ಹುಬ್ಬಳ್ಳಿ ಚರಣ ಆ.19ರಿಂದ 26ರವರೆಗೆ ನಡೆಯಲಿದೆ. ಈ ಬಾರಿ ಇಲ್ಲಿ ನಡೆಯಲಿರುವ 11 ಪಂದ್ಯಗಳಿಗಾಗಿ ಮೈದಾನವನ್ನು ವಿಶೇಷವಾಗಿ ಸಿದ್ಧಪಡಿಸಲಾಗುತ್ತಿದೆ.
22.75 ಕೋಟಿ ರೂ. ವೆಚ್ಚದಲ್ಲಿ ಪೆವಿಲಿಯನ್ ನಿರ್ಮಾಣ ನಡೆಯುತ್ತಿದೆ. ಆಟಗಾರರ ಡ್ರೆಸ್ಸಿಂಗ್ ಕೊಠಡಿ ಸಂಪೂರ್ಣ ಸಿದ್ಧಗೊಂಡಿದೆ. ಇನ್ನು ಆಟಗಾರರ ಗ್ಯಾಲರಿ, ವೀಕ್ಷಕ ವಿವರಣೆ ಕೇಂದ್ರ, ಮಾಧ್ಯಮ ಕೇಂದ್ರ, ಅಧಿಕಾರಿಗಳ ಕೊಠಡಿ ಸಿದ್ಧಗೊಳ್ಳುತ್ತಿದೆ. ಇನ್ನು 3 ತಿಂಗಳಲ್ಲಿ ನೇರಪ್ರಸಾರ ಕೇಂದ್ರ ಸಿದ್ಧಗೊಳ್ಳಲಿದೆ.
ಇಲ್ಲಿ ಒಟ್ಟು 11 ಪಂದ್ಯಗಳು ನಡೆಯಲಿವೆ. ಅವು 8 ದಿನದಲ್ಲಿ ಹಂಚಿ ಹೋಗಿವೆ. ಮೂರು ದಿನಗಳ ಕಾಲ ದಿನಕ್ಕೆ ಎರಡು ಪಂದ್ಯಗಳು ನಡೆಯಲಿವೆ. ಬಾಕಿ 5 ದಿನಗಳಲ್ಲಿ ದಿನಕ್ಕೆ ಒಂದು ಪಂದ್ಯ ಮಾತ್ರ ನಡೆಯಲಿದೆ. ಎರಡು ಪಂದ್ಯಗಳು ಇದ್ದ ದಿನ ಮಧ್ಯಾಹ್ನ 2:30 ಗಂಟೆಗೆ ಒಂದು ಪಂದ್ಯ, ಸಂಜೆ 6:30 ಗಂಟೆಗೆ ಇನ್ನೊಂದು ಪಂದ್ಯ ನಡೆಯಲಿದೆ.
ತಪ್ಪಿದ ಫೈನಲ್: ಕೆಪಿಎಲ್ ಪಂದ್ಯಾವಳಿಯ ಹುಬ್ಬಳ್ಳಿ ಆವೃತ್ತಿಯ ನಾಲ್ಕು ಆವೃತ್ತಿಗಳಲ್ಲಿ ಮೂರು ಬಾರಿ ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನ ಅಂತಿಮ ಹಣಾಹಣಿಗೆ ಆತಿಥ್ಯ ನೀಡಿತ್ತು. ಕಳೆದ ಬಾರಿ ಮೈಸೂರು ಭಾಗದಲ್ಲಿ ಕಾವೇರಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಫೈನಲ್ ಪಂದ್ಯ ಹುಬ್ಬಳ್ಳಿಗೆ ಸ್ಥಳಾಂತಗೊಂಡಿತ್ತು. ಆದರೆ ಈ ಬಾರಿ ಫೈನಲ್ ಪಂದ್ಯ ಸೇರಿದಂತೆ ಅಂತಿಮ ಚರಣ ಮೈಸೂರಿಗೆ ನೀಡಲಾಗಿದೆ.
ಫ್ಲೆಕ್ಸ್‌ಗೆ ಗುಡ್ ಬೈ: ಈ ಬಾರಿ ಮೈದಾನದಲ್ಲಿ ಫ್ಲೆಕ್ಸ್‌ಗಳ ಅಳವಡಿಕೆಗೆ ಅವಕಾಶ ನೀಡಿಲ್ಲ. ಬದಲಾಗಿ ಸಂಪೂರ್ಣ ಮೈದಾನದಲ್ಲಿ ಎಲ್‌ಇಡಿ ಸ್ಕ್ರಿನ್ ಅಳವಡಿಕೆ ಮಾಡಲಾಗುತ್ತಿದೆ. ಸ್ಕೋರ್ ಬೋರ್ಡ್‌ಗೆ ಸುಮಾರು 75 ಎಲ್‌ಇಡಿಯ ದೊಡ್ಡ ಬೋರ್ಡ್, 24 ಎಲ್‌ಇಡಿಯ 2 ಬೋರ್ಡ್ ಹಾಗೂ ಸುತ್ತಲೂ ಸುಮಾರು 410 ಎಲ್‌ಇಡಿ ಬೋರ್ಡ್ ನಿರ್ಮಿಸಲಾಗುತ್ತಿದೆ. ಬೌಂಡರಿ ಲೈನ್ ಬಳಿ ಫ್ಲೆಕ್ಸ್ ಮೂಲಕ ಹಾಕಲಾಗುತ್ತಿದ್ದ ಜಾಹೀರಾತುಗಳನ್ನು ರದ್ದು ಮಾಡಲಾಗಿದೆ. ಅವೆಲ್ಲವನ್ನು ಇನ್ನು ಎಲ್‌ಇಡಿ ಮೂಲಕ ತೋರಿಸಲಾಗುತ್ತದೆ.
10 ಸಾವಿರ ಆಸನ ವ್ಯವಸ್ಥೆ: ಕೆಪಿಎಲ್ ಪಂದ್ಯವನ್ನು 10 ಸಾವಿರ ಜನ ವೀಕ್ಷಿಸುವಂತೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ದೀರ್ಘಕಾಲದಿಂದ ಕಾಮಗಾರಿ ನಡೆದಿದೆ. ಎಲ್ಲ ಲೆಕ್ಕಾಚಾರದ ಪ್ರಕಾರ ನಡೆದ ಹುಬ್ಬಳ್ಳಿಯಲ್ಲೂ ಅಂತಾರಾಷ್ಟ್ರೀಯ ಪಂದ್ಯ ನಡೆಸಲು ಸಾಧ್ಯವಿದೆ.
ಈ ವರ್ಷವೂ ಕೂಡಾ ಆ.24ರಂದು ಮಹಿಳಾ ತಂಡಗಳ ಮಧ್ಯೆ ಸೆಣಸಾಟ ನಡೆಯಲಿದೆ. ಇದಲ್ಲದೇ ರಾಜನಗರದ ಮೈದಾನ ಈಗಾಗಲೇ ಎಲ್ಲ ಪಂದ್ಯಾವಳಿಗೂ ಸಿದ್ದಗೊಂಡಿದ್ದು ಪಂದ್ಯದ ಆರಂಭಕ್ಕೆ ಕಾತುರರಾಗಿದ್ದೇವೆ.
– ಬಾಬಾ ಭೂಸದ, ಕೆಎಸ್‌ಸಿಎ ಧಾರವಾಡ ವಲಯ ಸಂಚಾಲಕ.
– ಬಸವರಾಜ ಹೂಗಾರ