ಹುಬ್ಬಳ್ಳಿ: ಬಡತನದ ಕಾರಣದಿಂದಾಗಿ ಹೆಚ್ಚಿನ ಪ್ರಮಾಣದ ಕ್ಯಾನ್ಸರ್ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದು, ರೋಗ ಗಂಭೀರ ಸ್ವರೂಪ ಪಡೆದ ನಂತರ ಚಿಕಿತ್ಸೆಗಾಗಿ ಪ್ರಯತ್ನಿಸುತ್ತಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ನವನಗರದ ಕ್ಯಾನ್ಸರ್ ಹಾಸ್ಪಿಟಲ್ ಆವರಣದಲ್ಲಿ ಮಜೇಥಿಯಾ ಫೌಂಡೇಶನ್ ವತಿಯಿಂದ ಹಾಸ್ ಪೈಸ್ ಚಿಕಿತ್ಸಾಲಯಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ದೇಶದಲ್ಲಿ ಶೇ. 88 ಕ್ಯಾನ್ಸರ್ ರೋಗಿಗಳು 3ನೇ ಹಂತದಲ್ಲಿ ಚಿಕಿತ್ಸೆಗೆ ಮುಂದಾಗುತ್ತಾರೆ. ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ರೋಗವನ್ನು ಗುರುತಿಸಿ ಶುಶ್ರೂಷೆ ನೀಡುವುದು ಅವಶ್ಯಕವಾಗಿದೆ ಎಂದರು.
ಸಮರ್ಪಕ ಚಿಕಿತ್ಸೆ ಲಭಿಸದ ಕಾರಣದಿಂದ ಕೊನೆಯ ಹಂತದ ಕ್ಯಾನ್ಸರ್ ರೋಗಿಗಳು ನೋವು ಅನುಭವಿಸುತ್ತಾರೆ. ಅಂಥ ಸ್ಥಿತಿಯಲ್ಲಿದ್ದವರಿಗೆ ಸೂಕ್ತ ಚಿಕಿತ್ಸೆ ನೀಡಿ ಒಳ್ಳೆಯ ಸಾವು ನೀಡುವ ಉದ್ದೇಶದಿಂದ ಮಜೇಥಿಯಾ ಫೌಂಡೇಶನ್ ಹಾಸ್ಪೈಸ್ ಚಿಕಿತ್ಸಾಲಯ ಆರಂಭಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ಬಡವರಿಗೆ ಅನುಕೂಲವಾಗುವಂತೆ ಡಯಾಲಿಸಿಸ್ ಕೇಂದ್ರ ಆರಂಭಿಸಲು ಯಂತ್ರೋಪಕರಣ ನೀಡಲು ಸಿದ್ಧವಾಗಿದ್ದೇನೆ. ಆದರೆ ನಿರ್ವಹಣೆಗೆ ತಜ್ಞ ವೈದ್ಯರ ಕೊರತೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ ಎಂದರು. ಕಿಮ್ಸ್ ಅಭಿವೃದ್ಧಿಗೆ ಕೇಂದ್ರ ಸರ್ಕಾರ 63 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರಕಾರ ತನ್ನ ಪಾಲಿನ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು. ಜನೆರಿಕ್ ಔಷಧ ಕೇಂದ್ರಗಳನ್ನು ಕೆಲವು ವೈದ್ಯರು ಕಡೆಗಣಿಸುತ್ತಿದ್ದು, ತಮ್ಮ ಮನೋಭಾವ ಬದಲಿಸಿಕೊಳ್ಳಬೇಕು ಎಂದು ಹೇಳಿದರು.
ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಕ್ಯಾನ್ಸರ್ ರೋಗಿಗಳು ಸಾಯುವ ಸಂದರ್ಭದಲ್ಲಿ ಪ್ಯಾಲಿಟೆಟಿವ್ ಕೇರ್ ಸೆಂಟರ್ ಪರಿಕಲ್ಪನೆ ಹೊಸದು. ಸಾವನ್ನು ಸುಂದರಗೊಳಿಸುವುದು ಅದ್ಭುತ. ಇದು ಪುಣ್ಯದ ಕೆಲಸ. ಇಂಥ ಕಾರ್ಯ ಚಟುವಟಿಕೆಗಳು ಹೆಚ್ಚಾಗಬೇಕು ಎಂದರು.
ಯುವ ಬ್ರಿಗೇಡ್ ವತಿಯಿಂದ ಫೆ. 14ರಂದು ನೇಷನ್ ಲವರ್ ಡೇ ಆಚರಣೆ ಮಾಡಲಾಗುತ್ತಿದೆ. ಯುವ ಬ್ರಿಗೇಡ್ ಕಾರ್ಯಕರ್ತರು ಅನಾಥಾಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಅಲ್ಲಿ ಸಮಯ ಕಳೆಯುತ್ತಾರೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ ಎಂದರು. ಜಿತೇಂದ್ರ ಮಜೇಥಿಯಾ ಪ್ರಾಸ್ತಾವಿಕ ಮಾತನಾಡಿ, 12000 ಚದುರಡಿ ಜಾಗದಲ್ಲಿ 1.5 ಕೋಟಿ ವೆಚ್ಚದಲ್ಲಿ ಹಾಸ್ಪೈಸ್ ಚಿಕಿತ್ಸಾಲಯ ನಿರ್ಮಿಸಲಾಗುತ್ತಿದ್ದು, ಮಜೇಥಿಯಾ ಫೌಂಡೇಶನ್ ಎಲ್ಲ ಖರ್ಚು ಭರಿಸಲಿದೆ. 30 ಬೆಡ್‌ಗಳ ಚಿಕಿತ್ಸಾಲಯದಲ್ಲಿ 20 ಬೆಡ್ ಗಳ ಸಂಪೂರ್ಣ ಖರ್ಚನ್ನು ಫೌಂಡೇಶನ್ ಭರಿಸಲಿದೆ. ಉಳಿದ 10 ಬೆಡ್‌ಗಳಿಗೆ ಅತೀ ಕಡಿಮೆ ಶುಲ್ಕ ಪಡೆಯಲಾಗುವುದು. ಇದನ್ನು ಉತ್ತರ ಕರ್ನಾಟಕದ ಮಾದರಿ ಹಾಸ್ಪೈಸ್ ಸೆಂಟರ್ ಆಗಿ ರೂಪಿಸಲಾಗುವುದು ಎಂದು ತಿಳಿಸಿದರು. ಡಾ| ಆರ್.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ| ಬಿ.ಆರ್. ಪಾಟೀಲ ಇದ್ದರು. ಶೈಲಾ ಕಲ್ಲಾಪುರ ಸ್ವಾಗತಿಸಿದರು. ಸುಭಾಸಸಿಂಗ್ ಜಮಾದಾರ ನಿರೂಪಿಸಿದರು. ಡಾ| ಮಂಜುಳಾ ಹುಗ್ಗಿ ವಂದಿಸಿದರು.