Advertisement

ಹುಬ್ಬಳ್ಳಿ: ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌ ಉತ್ತರಕ್ಕೆ ಬೂಸ್ಟರ್‌

04:07 PM Mar 30, 2023 | Team Udayavani |

ಹುಬ್ಬಳ್ಳಿ: ಕೇಂದ್ರ ಸರ್ಕಾರ ಧಾರವಾಡ ಜಿಲ್ಲೆಗೆ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌(ಇಎಂಎಸ್‌) ಘೋಷಣೆ ಮಾಡಿರುವುದು ಎಫ್‌ಎಂಸಿಜಿ ಕ್ಲಸ್ಟರ್‌ ನಂತರದಲ್ಲಿ ಉದ್ಯಮ ದೃಷ್ಟಿ ದ ಮತ್ತೂಂದು ನೆಗೆತ ಕಂಡಂತಾಗಿದ್ದು, ಆರ್ಥಿಕಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಿಂದ ಮಹತ್ವದ ಸಹಕಾರಿ ಆಗಲಿದೆ ಎಂದು ಭಾವಿಸಲಾಗಿದೆ.

Advertisement

ಇಎಂಎಸ್‌ ಕ್ಲಸ್ಟರ್‌ ಅನುಷ್ಠಾನಕ್ಕೆ ಮುಂದಾದ ದೇಶ 15 ರಾಜ್ಯಗಳಲ್ಲಿ ಧಾರವಾಡವೂ ತನ್ನ ಸ್ಥಾನ ಪಡೆದುಕೊಳ್ಳಲಿದೆ. ದಕ್ಷಿಣ ಭಾರತದಲ್ಲಿಯೇ ಮೊದಲ ಎಫ್‌ ಎಂಸಿಜಿ ಕ್ಲಸ್ಟರ್‌ಗೆ ಚಾಲನೆ ಪಡೆದ ಕೀರ್ತಿ ಧಾರವಾಡದ್ದಾಗಿದೆ. ಆರ್ಥಿಕ ಚಟುವಟಿಕೆಯ ನೆಗೆತಕ್ಕೆ ಮಹತ್ವದ ಕೊಡುಗೆ ನೀಡಬಲ್ಲ ಕ್ಲಸ್ಟರ್‌ ಎಂದೇ ಇದನ್ನು ಬಿಂಬಿಸಲಾಗಿದೆ. ಖಾಸಗಿ ವಲಯದಿಂದ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಘಟಕಗಳ ಸ್ಥಾಪನೆ ಯತ್ನಗಳು ನಡೆದಿದ್ದವಾದರೂ ಇದಕ್ಕೆ ಪೂರಕ ಎನ್ನುವಂತೆ ಕೇಂದ್ರ ಸರ್ಕಾರ ಧಾರವಾಡ ಜಿಲ್ಲೆಗೆ ಇಎಂಎಸ್‌ ಕ್ಲಸ್ಟರ್‌ ಘೋಷಣೆ ಮಾಡಿರುವುದು ಉದ್ಯಮಕ್ಕೆ ಇನ್ನಷ್ಟು ಚೇತನ ನೀಡಿದಂತಾಗಿದೆ.

ಜಾಗತಿಕವಾಗಿ ಭಾರತ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಹೆಚ್ಚಿನ ಪಾಲು ಪಡೆಯುವ ನಿಟ್ಟಿನಲ್ಲಿ 2012ರಲ್ಲಿ ನೀತಿ ಜಾರಿಗೊಳಿಸುವ ಮೂಲಕ ಇಎಂಎಸ್‌ ಕ್ಲಸ್ಟರ್‌ ಗೆ ಉತ್ತೇಜನಕ್ಕೆ ಮುಂದಾಗಿತ್ತು. ಯೋಜನೆಯಡಿ ಗ್ರೀನ್‌ಫೀಲ್ಡ್‌ ಕ್ಲಸ್ಟರ್‌, ಬ್ರೌನ್‌ಫೀಲ್ಡ್‌ ಕ್ಲಸ್ಟರ್‌ ಎಂದು ವಿಭಜಿಸಲಾಗಿದ್ದು, ಸುಮಾರು 19-20 ಗ್ರೀನ್‌ಫೀಲ್ಡ್‌ ಕ್ಲಸ್ಟರ್‌ಗಳಿಗೆ, 3 ಸಮುದಾಯಿಕ ಸೌಲಭ್ಯಗಳ ನೀಡಿಕೆ ಕೇಂದ್ರ (ಸಿಎಫ್‌ಸಿ)ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸಗಡ, ಗುಜರಾತ್‌, ಗೋವಾ, ಜಾರ್ಖಂಡ, ಕೇರಳ, ಮಧ್ಯಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ 15 ರಾಜ್ಯಗಳಲ್ಲಿ ಇಎಂಎಸ್‌ ಕ್ಲಸ್ಟರ್‌ ಆರಂಭ ಯತ್ನಗಳು ಪ್ರಗತಿ ಹಂತದಲ್ಲಿವೆ.

ದೇಶದಲ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ವಲಯ ಹೆಚ್ಚುತ್ತಿದ್ದು, ಭಾರತ ಅಂದಾಜು 70-75 ಬಿಲಿಯನ್‌ ಡಾಲರ್‌ ವಹಿವಾಟು ನಡೆಸುತ್ತಿದ್ದು, ಶೇ.25ರಷ್ಟು ಬೆಳವಣಿಗೆ ಕಂಡಿದೆ. ಜಾಗತಿಕವಾಗಿ ಒಟ್ಟು ಉತ್ಪಾದನೆಯಲ್ಲಿ ಶೇ.3 ಪಾಲು ಪಡೆದರೆ, ಈ ವಲಯ ದೇಶದ ಜಿಡಿಪಿಗೆ ಶೇ.2.3 ಪಾಲು ನೀಡುತ್ತಿದೆ.

ಮೆಳ್ಳಿಗೇರಿ ಯತ್ನಕ್ಕೆ ಪೂರಕ ಕ್ರಮ: ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌ ಸ್ಥಾಪನೆ ನಿಟ್ಟಿನಲ್ಲಿ ಮಧ್ಯಮ ಮತ್ತು ಬೃಹತ್‌ ಕೈಗಾರಿಕಾ ಸಚಿವರಾಗಿದ್ದ ಜಗದೀಶ ಶೆಟ್ಟರ ಸಾಕಷ್ಟು ಯತ್ನಿಸಿದ್ದರು. ಉಲ್ಲಾಸ್‌ ಕಾಮತ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಪಡೆದಿದ್ದರು. ಕ್ಲಸ್ಟರ್‌ಗೆ ಮುಮ್ಮಿಗಟ್ಟಿ ಬಳಿ ಸುಮಾರು 200 ಎಕರೆ ಭೂಮಿಯನ್ನು ಸಹ ನಿಗದಿ ಪಡಿಸಲಾಗಿತ್ತು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಲಸ್ಟರ್‌ ಅನುಷ್ಠಾನಕ್ಕೆ ಇದ್ದ ಕೆಲ ಅಡ್ಡಿಗಳನ್ನು ನಿವಾರಣೆ ಮಾಡುವ ಮೂಲಕ ಕ್ಲಸ್ಟರ್‌ ಸ್ಥಾಪನೆಗೆ ಚಾಲನೆ ನೀಡಿದ್ದರು.

Advertisement

ಎಫ್‌ಎಂಸಿಜಿ ಕ್ಲಸ್ಟರ್‌ನಿಂದಾಗಿ ಉದ್ಯೋಗ ಸೃಷ್ಟಿಯ ಜತೆಗೆ ಈ ಭಾಗದ ಆರ್ಥಿಕಾಭಿವೃದ್ಧಿ ನೆಗೆತಕ್ಕೆ ಮಹತ್ವದ ಕೊಡುಗೆ ನೀಡಲಿದ್ದು, ಹುಬ್ಬಳ್ಳಿ-ಧಾರವಾಡ ಲಾಜಿಸ್ಟಿಕ್‌ ಹಬ್‌ ಆಗಲಿದೆ ಎಂದು ಭಾವಿಸಲಾಗಿದೆ. ಎಫ್‌ಎಂಸಿಜಿ ಕ್ಲಸ್ಟರ್‌ ಗೆ ಪೂರಕವಾಗಿ ಧಾರವಾಡದಲ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಘಟಕಗಳನ್ನು ಆರಂಭಿಸಲು ಖ್ಯಾತ ಉದ್ಯಮಿ, ಏಕಸ್‌ ಕಂಪೆನಿಯ ಸಿಇಒ ಅರವಿಂದ ಮೆಳ್ಳಿಗೇರಿ ಅವರು ಸಾಕಷ್ಟು ಯತ್ನಕ್ಕೆ ಮುಂದಾಗಿದ್ದರು. ಜತೆಗೆ ಹುಬ್ಬಳ್ಳಿಗೆ ಆಗಮಿಸಿದ್ದ
ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ ಅವರು ಧಾರವಾಡದಲ್ಲಿ ಇಎಂಎಸ್‌ ಕ್ಲಸ್ಟರ್‌ ಸ್ಥಾಪನೆ ಸುಳಿವು ನೀಡಿದ್ದರಲ್ಲದೆ, ಇದೀಗ ಅದಕ್ಕೆ ಅನುಮೋದನೆ ಮುದ್ರೆಯೊತ್ತಿದ್ದಾರೆ. ಧಾರವಾಡ ಜಿಲ್ಲೆಯ ಕೋಟೂರು-ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಕ್ಲಸ್ಟರ್‌ ಸ್ಥಾಪನೆಗೆ ಯೋಜಿಸಲಾಗಿದೆ ಎನ್ನಲಾಗಿದೆ.

ಚೀನಾದ ಹಿನ್ನಡೆ ಲಾಭವಾದೀತೆ?: ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌ ಸ್ಥಾಪನೆ ನಿಟ್ಟಿನಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದ್ದು, ಧಾರವಾಡದಲ್ಲಿ ಆರಂಭವಾಗಲಿರುವ ಕ್ಲಸ್ಟರ್‌ಗೆ ಮೂಲಸೌಲಭ್ಯಗಳ ಸೃಷ್ಟಿಸಿ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಂದಾಜು 175 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗೆ ಕೇಂದ್ರ ಸರ್ಕಾರ ಅಂದಾಜು 89 ಕೋಟಿ ರೂ.ಗಳನ್ನು ನೀಡಲಿದ್ದು, ಉಳಿದ ಹಣವನ್ನು ರಾಜ್ಯ ಸರ್ಕಾರ ಭರಿಸಬೇಕಾಗಿದೆ.

ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ತ್ವರಿತ ಹಾಗೂ ಉತ್ತಮ ಸೌಲಭ್ಯ, ರಿಯಾಯಿತಿಗಳನ್ನು ನೀಡಬೇಕಾಗಿದೆ. ಸದ್ಯದ ಸ್ಥಿತಿಯಲ್ಲಿ ಉದ್ಯಮ ವಲಯ ಬೆಂಗಳೂರು-ಮೈಸೂರು ಭಾಗ ಸಾಕಷ್ಟು ಬೆಳೆದು ನಿಂತಿದ್ದು, ಇನ್ನಷ್ಟು ಉದ್ಯಮಗಳ ಬೆಳವಣಿಗೆಗೆ ಭೂಮಿ ಇನ್ನಿತರ ಸೌಲಭ್ಯಗಳ ಕೊರತೆ ಇದ್ದು, ಉದ್ಯಮ ಬೆಳವಣಿಗೆ ಇದೀಗ ಉತ್ತರಮುಖೀಯಾಗಿದ್ದು, ಹುಬ್ಬಳ್ಳಿ-ಧಾರವಾಡ ಅದರ ಸದ್ಬಳಕೆಗೆ ಮಹತ್ವದ ಹೆಜ್ಜೆ ಇರಿಸಬೇಕಾಗಿದೆ.

ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಘಟಕ ಸ್ಥಾಪನೆ ನಿಟ್ಟಿನಲ್ಲಿ ಉದ್ಯಮಿ ಮೆಳ್ಳಿಗೇರಿ ಅವರ ಪ್ರಯತ್ನದ ಫಲವಾಗಿ ಈಗಾಗಲೇ ಕೆಲ ಕಂಪೆನಿಗಳು, ನವೋದ್ಯಮಿಗಳು ಮುಂದಡಿ ಇರಿಸಿದ್ದು, ಕೇಂದ್ರದ ಕ್ಲಸ್ಟರ್‌ ಘೋಷಣೆ ಇದಕ್ಕೆ ಇನ್ನಷ್ಟು ಬಲ ನೀಡಿದೆ. ಚೀನಾದಲ್ಲಿ ಉದ್ಯಮ ಹಿನ್ನಡೆ, ಹಲವು ಕಂಪೆನಿಗಳು ಚೀನಾದಿಂದ ಹೊರ ಬರುತ್ತಿರುವುದರಿಂದಾಗಿ ಯಾವುದಾದರು ದೊಡ್ಡ ಕಂಪೆನಿ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ನಿಟ್ಟಿನಲ್ಲಿ ಧಾರವಾಡದಲ್ಲಿ ಕಂಪೆನಿ ಆರಂಭಕ್ಕೆ ಮುಂದಾದರೆ ಸಾಕು ಇತರೆ ಕಂಪೆನಿಗಳ ಆಕರ್ಷಣೆ ಹಾಗೂ ಉದ್ಯಮ ನೆಗೆತಕ್ಕೆ ಮಹತ್ವದ ಸಾಥ್‌ ನೀಡಿದಂತಾಗಲಿದೆ.

ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌ ಸೌಲಭ್ಯ ನೀಡಿದ ಕೇಂದ್ರದ ಕ್ರಮಕ್ಕೆ ಪೂರಕವಾಗಿ ಅದರ ಸದುಪಯೋಗಕ್ಕೆ ರಾಜ್ಯ ಸರ್ಕಾರ ತ್ವರಿತ ರೀತಿಯಲ್ಲಿ ಕ್ರಮಕ್ಕೆ ಮುಂದಾಗಬೇಕಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಕಾಲಮಿತಿಯಲ್ಲಿ ಉದ್ಯಮ ಆರಂಭಕ್ಕೆ ಸೌಲಭ್ಯಗಳು ಲಭ್ಯವಾದರೆ ಮುಂದಿನ 3-4 ವರ್ಷಗಳಲ್ಲಿ ಧಾರವಾಡ ಎಫ್‌ ಎಂಸಿಜಿ ಹಾಗೂ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌ ಮೂಲಕ ಉದ್ಯೋಗ ಸೃಷ್ಟಿ, ಆರ್ಥಿಕಾಭಿವೃದ್ಧಿಗೆ ಮಹತ್ವದ ಕೊಡುಗೆ ಮೂಲಕ ದೇಶ-ವಿದೇಶಗಳ ಗಮನ ಸೆಳೆಯಲಿದೆ.

ಹುಬ್ಬಳ್ಳಿ-ಧಾರವಾಡಕ್ಕೆ ಹೆಚ್ಚಿನ ಉದ್ಯಮಗಳು ಬರಬೇಕು ಎಂಬ ಹಲವು ವರ್ಷಗಳ ಬೇಡಿಕೆ-ಮನವಿ ಫಲಪ್ರದವಾಗುತ್ತಿದೆ. ಎಫ್‌ಎಂಸಿಜಿ ಕ್ಲಸ್ಟರ್‌ ನಂತರದಲ್ಲಿ ಇದೀಗ ಕೇಂದ್ರ ಸರ್ಕಾರ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕ್ಲಸ್ಟರ್‌ ಸ್ಥಾಪನಗೆ ಒಪ್ಪಿಗೆ ನೀಡಿರುವುದು ಸಂತಸದ ವಿಚಾರ. ಇದರಿಂದ ಹುಬ್ಬಳ್ಳಿ-ಧಾರವಾಡದ ಉದ್ಯಮ ಹಾಗೂ ಉದ್ಯೋಗ ಸೃಷ್ಟಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಲಿವೆ. ಉದ್ಯಮ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲಕ್ಕೆ ನಮ್ಮಲ್ಲಿ ಸಾಕಷ್ಟು ಐಟಿಐಗಳು, ಎಂಜಿನಿಯರಿಂಗ್‌ ಕಾಲೇಜುಗಳು ಇದ್ದು, ಕೌಶಾಲಾಭಿವೃದ್ಧಿಗೆ ಒಂದಿಷ್ಟು ಒತ್ತು ನೀಡಿದರೆ ಸ್ಥಳೀಯವಾಗಿ ಉತ್ತಮ ಮಾನವ ಸಂಪನ್ಮೂಲ ದೊರೆಯಲಿದೆ.

ವಿನಯ ಜವಳಿ, ಅಧ್ಯಕ್ಷ, ಕೆಪಿಸಿಸಿಐ

*ಅಮರೇಗೌಡ ಗೋನವಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next