Advertisement

ಹುಬ್ಬಳ್ಳಿ: ಮಳೆಗೆ ಪರಿತಪಿಸಿದ್ದ ಉತ್ತರದಲ್ಲಿ ನೆರೆ ಭೀತಿ

04:14 PM Jul 28, 2023 | Team Udayavani |

ಹುಬ್ಬಳ್ಳಿ: ಬರದ ಛಾಯೆಯ ನಡುವೆಯೇ ಮಳೆಯ ಅಬ್ಬರ ಆರಂಭಗೊಂಡಿದೆ. ಕೆಲ ದಿನಗಳ ಹಿಂದೆಯಷ್ಟೇ ಮಳೆ ಕೊರತೆ ಎದುರಿಸುತ್ತಿದ್ದ ಉತ್ತರ ಕರ್ನಾಟಕದಲ್ಲೀಗ ಸರಾಸರಿಗಿಂತ ಹೆಚ್ಚು ಮಳೆಯಾಗಿ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಪ್ರವಾಹ ಸ್ಥಿತಿಯ ಆತಂಕ ಮತ್ತೆ ಕಾಡುತ್ತಿದೆ.

Advertisement

ಇನ್ನು ಈ ಬಾರಿಯ ಮುಂಗಾರು ವೈಫಲ್ಯದಿಂದ ಮಳೆಗಾಗಿ ಮುಗಿಲು ನೋಡುತ್ತಿದ್ದ ರೈತರಿಗೆ ಈಗ ನಿರಂತರ ಮಳೆಯಿಂದ ಹಿಂಗಾರು ಬೆಳೆ ಬಿತ್ತನೆಗೂ ಹಿನ್ನಡೆ ಹಾಗೂ ಮುಂಗಾರು ಹಂಗಾಮಿನ ಅಷ್ಟು ಇಷ್ಟು ಬೆಳೆ ಹಾನಿಗೀಡಾಗುವ ಭೀತಿ ಎದುರಾಗಿದೆ.

ಉತ್ತರ ಕರ್ನಾಟಕದ 14 ಜಿಲ್ಲೆಗಳ ಪೈಕಿ ಒಂದೆರಡನ್ನು ಹೊರತುಪಡಿಸಿದರೆ ಈ ಬಾರಿ ಮುಂಗಾರು ಮಳೆ ತೀವ್ರ ಕೊರತೆ ಸೃಷ್ಟಿಸಿತ್ತು. ಆದರೆ ಜುಲೈನಲ್ಲಿ ಆರಂಭಗೊಂಡ ಮಳೆ ಜು.20-26ರ ಏಳು ದಿನಗಳಲ್ಲಿ ಸರಾಸರಿಗಿಂತ ಶೇ.121ರಿಂದ 391ರಷ್ಟು ಪ್ರಮಾಣದಷ್ಟು ಬಿದ್ದಿರುವುದು ಮತ್ತೆ ಪ್ರವಾಹ ಸ್ಥಿತಿಯ ಆತಂಕ ಸೃಷ್ಟಿಸುವಂತೆ ಮಾಡಿದೆ.

ಈ ಅವಧಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಸಾಮಾನ್ಯವಾಗಿ 37 ಮಿ.ಮೀ.ಬದಲು 179 ಮಿಮೀ ಅಂದರೆ ಶೇ.391ರಷ್ಟು ಅಧಿಕ
ಮಳೆಯಾಗಿದ್ದು, ಉತ್ತರ ಕರ್ನಾಟಕದಲ್ಲಿಯೇ ಇದು ಅತ್ಯಧಿಕವಾಗಿದೆ. ಧಾರವಾಡ 32 ಮಿಮೀ ಬದಲು 174 ಮಿಮೀ (ಶೇ.373), ಬೆಳಗಾವಿ 43ಮಿಮೀ ಬದಲು 142 ಮಿಮೀ (ಶೇ. 233) ಹಾಗೂ ಉತ್ತರ ಕನ್ನಡ 234ಮಿಮೀ ಬದಲು 595ಮಿಮೀ ಅಂದರೆ ಶೇ.154 ರಷ್ಟು ಅಧಿಕ ಮಳೆಯಾಗಿದೆ. ಕಲಬುರಗಿ 37 ಮಿಮೀ ಬದಲು 147ಮಿಮೀ ಅಂದರೆ ಶೇ. 295ರಷ್ಟು ಸುರಿ ದಿ ದೆ. ಬೀದರ 48ಮಿ.ಮೀ.ನಷ್ಟು ಮಳೆ ಬೀಳುತ್ತಿತ್ತು. ಈಗ 128 ಮಿ.ಮೀ. ಅಂದರೆ ಶೇ.168ರಷ್ಟು ಅಧಿಕ ಮಳೆ ಬಿದ್ದಿದೆ. ಯಾದಗಿರಿ 34ಮಿ.ಮೀ.ಬದಲಿಗೆ 89ಮಿಮೀ (ಶೇ.165), ರಾಯಚೂರು 23ಮಿಮೀ ಬದಲು 67 ಮಿಮೀ ಅಂದರೆ ಶೇ.188ರಷ್ಟು ಅಧಿಕ, ವಿಜಯಪುರ 17 ಮಿಮೀ ಬದಲು 67 ಮಿ.ಮೀ ಶೇ.273ನಷ್ಟು, ಬಾಗಲಕೋಟೆ 15 ಮಿಮೀ ಬದಲು 55 ಮಿಮೀ ಶೇ.255ರಷ್ಟು ಹಾಗೂ ಕೊಪ್ಪಳ 18ಮಿಮೀ ಬದಲು 40 ಮಿಮೀ  ಅಂದರೆ ಶೇ.125ರಷ್ಟು ಅಧಿಕ ಮಳೆ ಬಿದ್ದಿದೆ.

ಈ ಬಾರಿಯ ಮುಂಗಾರು ಆರಂಭಕ್ಕೆ ಮಳೆ ವೈಫಲ್ಯದಿಂದ ಬಿತ್ತನೆ ಕುಂಠಿತವಾಗಿ ಮುಂಗಾರು ಪೈರು ಇಲ್ಲವಾಗುತ್ತಿದೆ. ಇನ್ನೊಂದೆಡೆ ಉತ್ತರ ಕನ್ನಡ, ಧಾರವಾಡ, ಹಾವೇರಿ, ಬೀದರ, ಕಲಬುರಗಿ ಜಿಲ್ಲೆಗಳ ತಗ್ಗು ಪ್ರದೇಶದಲ್ಲಿ ಅಷ್ಟು ಇಷ್ಟು ಬಿತ್ತನೆಯಾದ ಬೆಳೆ ಜಲಾವೃತಗೊಂಡಿದೆ. ಮಹಾರಾಷ್ಟ್ರದಲ್ಲಿ ಹಾಗೂ ರಾಜ್ಯದ ಮಲೆನಾಡು, ಬೆಳಗಾವಿ ಜಿಲ್ಲೆಯಲ್ಲಿ ಬೀಳುತ್ತಿರುವ ಹೆಚ್ಚಿನ ಮಳೆಯಿಂದಾಗಿ ಜೀವನದಿಗಳಾದ ಕೃಷ್ಣ, ಭೀಮಾ, ತುಂಗಭದ್ರಾ, ಮಲಪ್ರಭಾ, ಘಟಪ್ರಭಾ ಇನ್ನಿತರ ನದಿಗಳು ಭೋರ್ಗರಿಯುತ್ತಿವೆ.

Advertisement

ಬಹುತೇಕ ಜಲಾಶಯಗಳಿಗೆ ಒಳ ಹರಿವು ಹೆಚ್ಚು ತ್ತಿದ್ದು, ಇದೇ ಸ್ಥಿತಿ ಇನ್ನಷ್ಟು ದಿನ ಮುಂದುವರಿದರೆ ಜಲಾಶಯಗಳು ಭರ್ತಿಯಾಗಿ ನೀರು ಹೊರ ಹಾಕಿದರೆ ಪ್ರವಾಹ ಸ್ಥಿತಿ ಖಚಿತವಾಗಲಿದೆ. ಇದು ಜನರ ಆತಂಕ ಹೆಚ್ಚುವಂತೆ ಮಾಡಿದೆ.

ಇಂದಿಗೂ ಭೀಕರ: ಈ ನಡುವೆ 2009ರ ಸೆಪ್ಟೆಂಬರ್‌-ಅಕ್ಟೋಬರ್‌ ನಲ್ಲಿ ಭಾರೀ ಅಂದರೆ ಸರಾಸರಿಗಿಂತ ಅಂದಾಜು ಶೇ.177ರಿಂದ
924ರಷ್ಟು ಹೆಚ್ಚಿನ ಮಳೆ ಬಿದ್ದಿದ್ದರೆ, ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 100 ವರ್ಷದಲ್ಲೇ ಕಂಡರಿಯದ ಮಳೆಯಾಗಿತ್ತು. ಆಗ ಬಂದ
ಪ್ರವಾಹದಿಂದ ಉತ್ತರ ಕರ್ನಾಟಕದ 13 ಜಿಲ್ಲೆಗಳ ಪೈಕಿ ಬಹುತೇಕ ಜಿಲ್ಲೆಗಳು ಅಕ್ಷರಶಃ ನಲುಗಿದ್ದವು. ಸುಮಾರು  ಆರು ದಶ ಕ ಗಳ ಬಳಿಕ ಬಂದ ಭೀಕರ ಪ್ರವಾಹ ಅದಾಗಿತ್ತು.

ಇದಾದ ಒಂದು ದಶಕದಲ್ಲಿ ಅಂದರೆ 2019ರಲ್ಲೂ ಉತ್ತರ ಕರ್ನಾಟಕದಲ್ಲಿ ಮತ್ತೂಂದು ದೊಡ್ಡ ಪ್ರವಾಹ ಸೃಷ್ಟಿಯಾಗಿತ್ತು. ವಿಶೇಷವೆಂದರೆ ಮಳೆಯ ಕೊರತೆ ಎದುರಿಸುತ್ತಿದ್ದ ಬಾಗಲಕೋಟೆ, ವಿಜಯಪುರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳು ಮಹಾರಾಷ್ಟ್ರದಲ್ಲಿ ಬಿದ್ದ ಮಳೆ ಹಾಗೂ ಅಲ್ಲಿನ ಜಲಾಶಯಗಳಿಂದ ಹೊರಹಾಕಿದ ಅಪಾರ ಪ್ರಮಾಣದ ನೀರಿನಿಂದಾಗಿ ಪ್ರವಾಹ ಸ್ಥಿತಿ ಎದುರಿಸಿದ್ದವು. ಅಂದಾಜು 32-35 ಸಾವಿರ ಕೋಟಿ ರೂ. ಸ್ವತ್ತು ಹಾನಿ ಅಂದಾಜಿಸಲಾಗಿತ್ತು. ಮರು ವರ್ಷವೇ ಅಂದರೆ 2020ರಲ್ಲಿಯೂ ಉತ್ತರ ಕರ್ನಾಟಕ ಪ್ರವಾ ಹಕ್ಕೆ ತತ್ತರಿಸಿತ್ತು. ಅಂದಾಜು 10ಸಾವಿರ ಕೋಟಿ ರೂ.ಗೂ ಅಧಿಕ ನಷ್ಟ ಉಂಟಾದ ಬಗ್ಗೆ ವರದಿಯಾಗಿತ್ತು.

*ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next