Advertisement

ಉದ್ಯಮದಲ್ಲೂ ಸೋಂಕುಗಳೆತ ಸುರಂಗ

11:29 AM Apr 13, 2020 | Naveen |

ಹುಬ್ಬಳ್ಳಿ: ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಉದ್ಯಮಿಯೊಬ್ಬರು ಸ್ವಂತ ಖರ್ಚಿನಲ್ಲಿ ಎರಡು ಸೋಂಕು ಕಳೆಯುವ ಸುರಂಗಗಳನ್ನು ಅಳವಡಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

Advertisement

ಧಾರವಾಡ ಸಮೀಪದ ರಾಯಪುರ ವಸಾಹತು ಪ್ರದೇಶದಲ್ಲಿರುವ ಚನ್ನು ಹೊಸಮನಿ ಮಾಲಿಕತ್ವದ ಹೊಸಮನಿ ಇಂಡಸ್ಟ್ರೀಸ್‌ ಕಂಪೆನಿಯ ಪ್ರವೇಶ ದ್ವಾರ ಮತ್ತು ಲೋಡಿಂಗ್‌/ಅನ್‌ಲೋಡಿಂಗ್‌ ಮಾಡುವ ಸ್ಥಳದಲ್ಲಿ ಸೋಂಕುಗಳೆತ ಸುರಂಗ (ಡಿಸ್‌ಇನ್ಫೆಕ್ಷನ್‌ ಟನ್ನೆಲ್‌) ನಿರ್ಮಿಸಿದ್ದಾರೆ. ಅಕ್ಕಿ, ಅರಿಷಿಣ ಪುಡಿ, ಖಾರದ ಪುಡಿ, ಸೋಯಾ ಚಂಗ್ಸ್‌, ಚಹಾಪುಡಿಯಂತಹ ಅಗತ್ಯ ದಿನಸಿ ಸಾಮಗ್ರಿಗಳ ಪ್ಯಾಕಿಂಗ್‌ ಇಂಡಸ್ಟ್ರೀಸ್‌ ಆಗಿರುವ ಈ ಕಂಪನಿಯಲ್ಲಿ ತಲಾ 60 ಸಾವಿರ ರೂ. ವೆಚ್ಚದಲ್ಲಿ ಎರಡು ಸೋಂಕುಗಳೆತ ಸುರಂಗಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಹೈಪ್ರಶರ್‌ವುಳ್ಳ ಫಾಗರ್ಸ್‌, 1ಅಶ್ವಶಕ್ತಿಯ ಪಂಪ್‌ ಅಳವಡಿಸಲಾಗಿದೆ. ನಿರಂತರ ನೀರು ಸರಬರಾಜಿಗೋಸ್ಕರ ಸುರಂಗದ ಪಕ್ಕದಲ್ಲೇ 1ಸಾವಿರ ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕ್‌ಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ.

ಸುರಂಗದ 4 ಅಡಿ ಅಂತರದಲ್ಲಿ ವ್ಯಕ್ತಿಗಳು ಬಂದಾಗ ಸೆನ್ಸಾರ್‌ ಮೂಲಕ ಕಾರ್ಯ ಆರಂಭವಾಗುತ್ತದೆ. ಸುರಂಗದೊಳಗೆ ಪ್ರವೇಶಿಸುತ್ತಿದ್ದಂತೆ ಶೇ.1ರ ಸೋಡಿಯಂ ಹೈಪೋಕ್ಲೋರೈಟ್‌ ಮಿಶ್ರಿತ ದ್ರಾವಣ ಸಿಂಪಡಣೆಯಾಗುತ್ತದೆ. ಕಂಪೆನಿಯಲ್ಲಿ ಸುಮಾರು 110 ಜನ ಸಿಬ್ಬಂದಿ ಇದ್ದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಾಗೂ ವೈರಸ್‌ ಒಬ್ಬರಿಂದ ಒಬ್ಬರಿಗೆ ಹರಡಬಾರದೆಂಬ ಉದ್ದೇಶದಿಂದ ಅವಶ್ಯವುಳ್ಳ ಶೇ.40 ಕೆಲಸಗಾರರನ್ನು ಮಾತ್ರ ಬಳಸುತ್ತಿದ್ದು, ಅವರೆಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. ಕಾರ್ಮಿಕರು, ಸಿಬ್ಬಂದಿ ಹಿತ ಹಾಗೂ ಪ್ಯಾಕಿಂಗ್‌ನಲ್ಲಿ ಯಾವುದೇ ಲೋಪ ಆಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಸೋಂಕು ನಿವಾರಣೆಗೆ ಸಹಕಾರಿ ಆಗಲಿದೆ.

ನಮ್ಮ ಫ್ಯಾಕ್ಟರಿಯಲ್ಲಿ ಎಲ್ಲ ಬಗೆಯ ಅಕ್ಕಿ ಸೇರಿದಂತೆ ಅಗತ್ಯ ದಿನಸಿ ವಸ್ತುಗಳನ್ನು ಸಂಸ್ಕರಣೆ ಮಾಡಿ ಪ್ಯಾಕಿಂಗ್‌ ಮಾಡಲಾಗುತ್ತಿದೆ. ಕೊರೊನಾ ವೈರಸ್‌ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಕಂಪೆನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ-ಕಾರ್ಮಿಕರ ಆರೋಗ್ಯ ಹಿತದೃಷ್ಟಿಯಿಂದ ಸೋಂಕುಗಳೆತ ಸುರಂಗ ನಿರ್ಮಿಸಲಾಗಿದೆ.
 ಚನ್ನು ಹೊಸಮನಿ,
ಹೊಸಮನಿ ಇಂಡಸ್ಟ್ರೀಸ್‌ ಕಂಪನಿ ಮಾಲಕ

ಶಿವಶಂಕರ ಕಂಠಿ

Advertisement
Advertisement

Udayavani is now on Telegram. Click here to join our channel and stay updated with the latest news.

Next